ಪ್ಯಾರಿಸ್ (ಫ್ರಾನ್ಸ್): ಬಹು ರಾಷ್ಟ್ರೀಯ ಕ್ರೀಡಾಕೂಟ ಪ್ಯಾರಿಸ್ ಒಲಿಂಪಿಕ್ಗೆ ಇಂದು ತೆರೆಬೀಳಲಿದೆ. 180ಕ್ಕೂ ಹೆಚ್ಚಿನ ದೇಶಗಳು ಭಾಗವಹಿಸಿದ್ದ ಈ ಕ್ರೀಡಾಕೂಟದಲ್ಲಿ ಈ ಬಾರಿ ಚೀನಾ ಅತೀ ಹೆಚ್ಚು ಚಿನ್ನದ ಪದಕ ಪಡೆದು ಅಗ್ರಸ್ಥಾನ ಕಾಯ್ದುಕೊಂಡಿದೆ. ಉಳಿದಂತೆ ಅಮೆರಿಕ ಎರಡನೇ ಸ್ಥಾನ ಪಡೆದಿದೆ. ಆದ್ರೆ ಈವರೆಗೆ ನಡೆದ ಒಲಿಂಪಿಕ್ ದಾಖಲೆ ನೋಡುವುದಾದರೇ ಅತೀ ಹೆಚ್ಚು ಚಿನ್ನದ ಪದಕಗಳು ಅಮೆರಿಕದ ಖಾತೆಯಲ್ಲಿದ್ದು ಅಗ್ರಸ್ಥಾನದಲ್ಲಿದೆ.
ಒಲಿಂಪಿಕ್ನ ಅಂತಿಮ ದಿನವಾದ ಇಂದು(ಆ.11) ಚೀನಾದ ಮಹಿಳಾ ತಂಡ ಟೇಬಲ್ ಟೆನ್ನಿಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಈ ಗೆಲುವು ಒಲಿಂಪಿಕ್ ಇತಿಹಾಸದಲ್ಲಿ ಚೀನಾದ ಸಾರ್ವಕಾಲಿಕ ಚಿನ್ನದ ಪದಕಗಳ ಸಂಖ್ಯೆಯನ್ನು 300ಕ್ಕೆ ಕೊಂಡೊಯ್ದಿತು.
ಪ್ಯಾರಿಸ್ ಒಲಿಂಪಿಕ್ 2024 ಪ್ರಾರಂಭವಾಗುವ ಮೊದಲು ಚೀನಾ ಒಟ್ಟು 263 ಚಿನ್ನದ ಪದಕಗಳನ್ನು ಹೊಂದಿತ್ತು. ಪ್ಯಾರಿಸ್ ಗೇಮ್ಸ್‌ನಲ್ಲಿ ಒಟ್ಟು 39 ಪದಕಗಳನ್ನು ಗೆಲ್ಲುವ ಮೂಲಕ ಚೀನಾದ ಪದಕಗಳ ಸಂಖ್ಯೆ 302ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಚೀನಾ ಒಲಿಂಪಿಕ್ನಲ್ಲಿ ಅತೀ ಹೆಚ್ಚು ಚಿನ್ನದ ಪದಕ ಗೆದ್ದ ನಾಲ್ಕನೇ ರಾಷ್ಟ್ರವಾಯಿತು. ಅತಿ ಹೆಚ್ಚು ಚಿನ್ನದ ಪದಕ ಗೆದ್ದ ಪಟ್ಟಿಯಲ್ಲಿ ಯುಎಸ್ಎ ಅಗ್ರಸ್ಥಾನದಲ್ಲಿದೆ. ಅಮೆರಿಕ ಇದೂವರೆಗೂ ಒಲಿಂಪಿಕ್ನಲ್ಲಿ 1108 ಚಿನ್ನದ ಪದಕಗಳನ್ನು ಪಡೆದುಕೊಂಡಿದೆ. ಉಳಿದಂತೆ ಸೋವಿಯತ್ ಒಕ್ಕೂಟವು 395 ಮತ್ತು ಗ್ರೇಟ್ ಬ್ರಿಟನ್ 306 ಚಿನ್ನದ ಪದಕಗಳನ್ನು ಪಡೆದುಕೊಂಡು ಚೀನಾಗಿಂತಲು ಮುಂದಿವೆ.
ಚೀನಾವು ಅತೀ ಹೆಚ್ಚು ಚಿನ್ನದ ಪದಕಗಳನ್ನು ಟೇಬಲ್ ಟೆನ್ನಿಸ್‌ನಲ್ಲಿ ಗೆದ್ದುಕೊಂಡಿದೆ. 1988ರಲ್ಲಿ ಸಿಯೋಲ್ ಒಲಿಂಪಿಕ್ನಲ್ಲಿ ಟೇಬಲ್ ಟೆನ್ನಿಸ್ ಕ್ರೀಡೆಯನ್ನು ಸೇರ್ಪಡೆಗೊಳಿಸಲಾಗಿತ್ತು. ಇದೂವರೆಗೂ ನಡೆದ ಒಲಿಂಪಿಕ್ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಒಟ್ಟು 42 ಚಿನ್ನದ ಪದಕಗಳನ್ನು ನೀಡಲಾಗಿದೆ. ಈ ಪೈಕಿ ಚೀನಾವೇ ಅತೀ ಹೆಚ್ಚು ಚಿನ್ನದ ಪದಕಗಳನ್ನು ಜಯಿಸಿದೆ. 37 ಚಿನ್ನದ ಪದಕಗಳು ಚೀನಾದ ಖಾತೆಯಲ್ಲಿವೆ. ಈ ಹಿನ್ನೆಲೆ ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಚೀನಾ ಪ್ರಬಲವಾಗಿದೆ. ಈ ಬಾರಿಯ ಒಲಿಂಪಿಕ್ ಟೇಬಲ್ ಟೆನ್ನಿಸ್ನಲ್ಲೂ 5 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದೆ.
2008 ರಲ್ಲಿ ಬೀಜಿಂಗ್ ಕ್ರೀಡಾ ಒಲಿಂಪಿಕ್ನ ನಂತರ ಟೀಮ್ ಈವೆಂಟ್‌ನಲ್ಲಿ ತನ್ನ ಮೊದಲ ಪದಕವನ್ನು ಗೆದ್ದುಕೊಂಡಿದ್ದ ಚೀನಾ ಇಂದಿಗೂ ಒಲಿಂಪಿಕ್ನಲ್ಲಿ ಚಿನ್ನದ ಪದಕ ಬೇಟೆಯನ್ನು ಮುಂದುವರೆಸಿದೆ.
ಇದನ್ನೂ ಓದಿ: ಒಲಿಂಪಿಕ್ನಲ್ಲಿ ಗೆದ್ದ ಚಿನ್ನವನ್ನು ಸಾಕು ನಾಯಿಗೆ ಅರ್ಪಿಸಿದ ಅಥ್ಲೀಟ್: ವಿಡಿಯೋ ವೈರಲ್ - PARIS OLYMPICS 2024