ಹೈದರಾಬಾದ್: ದೀಪಾವಳಿಯಲ್ಲಿ ಮಹಾಲಕ್ಷ್ಮಿ ಆಚರಣೆ ಜೋರಾಗಿರುತ್ತದೆ. ಈ ಹಬ್ಬದ ವೇಳೆ ಸಿರಿ ಸಂಪತ್ತನ್ನು ಹೆಚ್ಚಿಸುವ ಲಕ್ಷ್ಮಿ ಪೂಜೆಗೆ ಸಿದ್ಧತೆ ನಡೆಸಲಾಗುವುದು. ದೀಪಾವಳಿ ಸಂದರ್ಭದಲ್ಲಿ ಲಕ್ಷ್ಮಿ ಪೂಜೆ ನಡೆಸುವ ಮೂಲಕ ಸುಖ, ಸಮೃದ್ಧಿ, ಸಂಪತ್ತನ್ನು ಬರಮಾಡಿಕೊಳ್ಳಲಾಗುವುದು. ಲಕ್ಷ್ಮಿ ಸಂಪತ್ತು ಮತ್ತು ಅದೃಷ್ಟದ ದೇವತೆಯಾಗಿದ್ದು, ಕೇವಲ ಹಿಂದೂಗಳು ಮಾತ್ರವಲ್ಲದೇ ಬೌದ್ಧರು ಮತ್ತು ಜೈನರು ಕೂಡ ದೇವಿಯನ್ನು ಆರಾಧಿಸುತ್ತಾರೆ.
ಇನ್ನು, ಮಹಾಲಕ್ಷ್ಮಿಗೆಂದೇ ಸೀಮಿತವಾಗಿರುವ ಅನೇಕ ದೇಗುಲಗಳನ್ನು ದೇಶದಲ್ಲಿ ಕಾಣಬಹುದು. ಅನೇಕ ಪುರಾಣ ಪ್ರಸಿದ್ಧ, ಪುರಾತನ ದೇಗುಲಗಳನ್ನು ಮೂಲೆ ಮೂಲೆಯಲ್ಲಿ ಕಾಣಬಹುದು. ಅಂತಹ ದೇಗುಲಗಳ ಕುರಿತ ವಿವರ ಇಲ್ಲಿದೆ.
ರತ್ಲಾಂನ ಮಹಾಲಕ್ಷ್ಮಿ: ಮಧ್ಯಪ್ರದೇಶದ ರತ್ಲಾಂನ ಮನಕ್ ಚೌಕ್ನಲ್ಲಿರುವ ದೇಗುಲದಲ್ಲಿ ಮಹಾಲಕ್ಷ್ಮಿಯನ್ನು ದೀಪಾವಳಿಯಲ್ಲಿ ಹಣದಿಂದಲೇ ಅಲಂಕಾರ ಮಾಡಲಾಗುವುದು. 200 ರಿಂದ 300 ಕೋಟಿವರೆಗೆ ಹಣ ಮತ್ತು ಆಭರಣದಿಂದ ದೇವರಿಗೆ ಅಲಂಕಾರ ನಡೆಯುತ್ತದೆ. ಈ ಎಲ್ಲಾ ಹಣ ಮತ್ತು ಅಭರಣಗಳು ಭಕ್ತರದ್ದು ಎಂಬುದು ಇಲ್ಲಿನ ವಿಶೇಷ. ದೀಪಾವಳಿಯಲ್ಲಿ ಮಾಡಿದ ಅಲಂಕಾರವೂ ಬಾಯ್ ಧೂಜ್ವರೆಗೆ ಇರುತ್ತದೆ. ಇದಾದ ಬಳಿಕ ಭಕ್ತರು ತಾವು ನೀಡುವ ಹಣ ಮತ್ತು ಆಭರಣವನ್ನು ಪ್ರಸಾದ ರೂಪದಲ್ಲಿ ಪಡೆಯುತ್ತಾರೆ. ಈ ದೇವಿ ದರ್ಶನಕ್ಕೆ ಮಹಾರಾಷ್ಟ್ರ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಕೂಡ ಜನರು ಆಗಮಿಸುತ್ತಾರೆ.
ಮುಂಬೈನ ಮಹಾಲಕ್ಷ್ಮಿ ದೇಗುಲ: ಭುಲಭಾಯಿ ದೇಸಾಯಿ ರಸ್ತೆಯಲ್ಲಿ 18ನೇ ಶತಮಾನದ ದೇಗುಲ ಕಾಣಬಹುದಾಗಿದೆ. ಬ್ರಿಟಿಷ್ ಆಡಳಿತದಲ್ಲಿ ನಿರ್ಮಾಣವಾದ ಈ ದೇಗುಲದ ಹಿಂದೆ ಆಸಕ್ತಿಕರ ಕಥೆ ಇದೆ. ಮಲಬಾರ್ ಶಿಖರದಿಂದ ವೊರ್ಲಿಗೆ ಸಂಪರ್ಕಿಸಲು ಅನೇಕ ದೇಗುಲಗಳನ್ನು ಬ್ರಿಟಿಷರು ನಿರ್ಮಾಣ ಮಾಡಿದರು. ಆದರೆ, ಇದು ವಿಫಲವಾಯಿತು. ಆದರೆ ಒಂದು ದಿನ ಭಾರತೀಯ ಇಂಜಿನಿಯರ್ ಕನಸಿನಲ್ಲಿ ಬಂದ ಮಹಾಲಕ್ಷ್ಮಿ ಸಮುದ್ರದಿಂದ ಮೂರು ಮೂರ್ತಿ ಪಡೆದು ದೇಗುಲ ನಿರ್ಮಾಣ ಮಾಡುವಂತೆ ಸೂಚಿಸಿದಳು. ಅದರಂತೆ ಅರಬ್ಬಿ ಸಮುದ್ರದ ಕಿನಾರೆಯಲ್ಲಿ ಈ ದೇಗುಲ ನಿರ್ಮಾಣವಾಯಿತು.
ಕೊಲ್ಹಾಪುರ ಮಹಾಲಕ್ಷ್ಮಿ: ಇಲ್ಲಿನ ಪಂಚಗಂಗಾ ನದಿ ತೀರದಲ್ಲಿ ಈ ದೇಗುಲ ನಿರ್ಮಾಣವಾಗಿದೆ. 18 ಶಕ್ತಿ ಪೀಠದಲ್ಲಿ ಇದು ಒಂದಾಗಿದೆ. ಹೇಮದ್ಪಂಥಿ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾದ ಈ ದೇಗುಲ ಎತ್ತರದ ರಚನೆ ಹೊಂದಿದ್ದು, ಬೃಹತ್ ಸಭಾಂಗಣವನ್ನು ಹೊಂದಿದೆ.
ದೆಹಲಿಯ ಬಿರ್ಲಾ ಮಂದಿರದ ಲಕ್ಷ್ಮಿ ನಾರಾಯಣ ದೇಗುಲ: ಇಲ್ಲಿನ ದೇಗುಲವೂ ಐತಿಹಾಸಿ ಮಹತ್ವವನ್ನು ಹೊಂದಿದೆ. ಎಲ್ಲಾ ಜನರಿಗೂ ಈ ದೇಗುಲಕ್ಕೆ ಮುಕ್ತ ಅವಕಾಶ ಕಲ್ಪಿಸಬೇಕು ಎಂಬ ಷರತ್ತಿನೊಂದಿಗೆ ಮಹಾತ್ಮ ಗಾಂಧಿ ಈ ದೇಗುಲವನ್ನು ಉದ್ಘಾಟಿಸಿದರು. ಅದ್ಭುತ ವಿನ್ಯಾಸವನ್ನು ಹೊಂದಿರುವ ಈ ದೇಗುಲಕ್ಕೆ ಮತ್ತೆ ಮತ್ತೆ ಹೋಗಬೇಕು ಎನ್ನಿಸದೇ ಇರಲಾರದು.
ರಾಜಸ್ಥಾನದ ಕರೌಲಿಯ ಕೈಲಾ ದೇಗುಲ ಮಂದಿರ: ಲಕ್ಷ್ಮಿ ಸ್ವರೂಪಿಣಿ ಮಾತೆ ಕೈಲೇಶ್ವರಿಗೆ ದೇವಿಗೆ ಮೀಸಲಾದ ದೇಗುಲ. ಈ ದೇಗುಲದಲ್ಲಿ ಭಕ್ತರ ಎಲ್ಲಾ ಕೋರಿಕೆಗಳು ಈಡೇರುತ್ತವೆ ಎಂಬ ನಂಬಿಕೆ ಹೊಂದಿದೆ ಇಲ್ಲಿ ಚೈತ್ರ ಉತ್ಸವ ಅದ್ಧೂರಿಯಾಗಿ ಸಾಗುತ್ತದೆ.
ಚೆನ್ನೈನ ಅಷ್ಟಲಕ್ಷ್ಮಿ ದೇಗುಲ: ಬೆಸಂತ್ನಗರದಲ್ಲಿರುವ ಈ ದೇಗಲವೂ ಸಂಪತ್ತು ಮತ್ತು ಬುದ್ಧಿವಂತಿಕೆಯ ಅಧಿದೇವತೆ ಲಕ್ಷ್ಮಿಗೆ ಸೀಮಿತವಾಗಿ. ದ್ರಾವಿಡ ಮತ್ತು ಸಮಕಾಲೀನ ಶೈಲಿಯ ವಿಶಿಷ್ಟ ವಿನ್ಯಾಸವನ್ನು ಇದು ಹೊಂದಿದೆ.
ವೆಲ್ಲೂರಿನ ಶ್ರೀಪುರಂ ಚಿನ್ನದ ದೇಗುಲ: ತಮಿಳುನಾಡಿನ ವೆಲ್ಲೂರಿನ ಈ ದೇಗುಲ ಶಿಲ್ಪಕಲೆಗೆ ಮತ್ತೊಂದು ಹೆಸರಾಗಿದೆ. 1500 ಕೆಜಿ ಬಂಗಾರದಲ್ಲಿ ಈ ದೇಗುಲವನ್ನು ನಿರ್ಮಾಣ ಮಾಡಲಾಗಿದೆ. ವೆಲ್ಲೂರಿನಿಂದ 10 ಕಿ.ಮೀ ದೂರದ ತಿರುಮಲೈಕುಡಿಯಲ್ಲಿ ಈ ದೇಗುಲ ಕಾಣಬಹುದು.
ಇದನ್ನೂ ಓದಿ: ಧನ ತ್ರಯೋದಶಿ ಯಾವ ದಿನ ಬರುತ್ತೆ ಗೊತ್ತಾ?: ಸಂಪೂರ್ಣ ಅನುಗ್ರಹ ಪಡೆಯಲು ಲಕ್ಷ್ಮಿ ದೇವಿ ಪೂಜಿಸುವುದು ಹೇಗೆ?