2024 ರಲ್ಲಿ ಇಬ್ಬರು ಮುಖ್ಯಮಂತ್ರಿಗಳು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬಂಧನಕ್ಕೊಳಪಟ್ಟು ಜೈಲಿಗೆ ಹೋಗಬೇಕಾಯಿತು. ಇದರಲ್ಲಿ ಒಬ್ಬರು ಹಾಲಿ ಮತ್ತು ಇನ್ನೊಬ್ಬರು ಮಾಜಿ ಮುಖ್ಯಮಂತ್ರಿಗಳಾಗಿದ್ದಾರೆ. ರಾಂಚಿಯಲ್ಲಿ ಭಾರತೀಯ ಸೇನೆಗೆ ಸೇರಿದ ಭೂಮಿಯನ್ನು ಅಕ್ರಮವಾಗಿ ಮಾರಾಟ ಮತ್ತು ಖರೀದಿಸಿದ ಆರೋಪದ ಮೇಲೆ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಬಂಧಿಸಲಾಗಿದೆ. ಜನವರಿ 31 ರಂದು ಬಂಧನಕ್ಕೊಳಗಾಗುವ ಮೊದಲು ಸೊರೆನ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಪ್ರಸ್ತುತ ಹಿಂಪಡೆಯಲಾದ ದೆಹಲಿ ಮದ್ಯ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪದ ಮೇಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಬಂಧಿಸಲಾಯಿತು. ಮನಿ ಲಾಂಡರಿಂಗ್ ಮತ್ತು ವಿದೇಶಿ ವಿನಿಮಯ ಕಾನೂನುಗಳ ಉಲ್ಲಂಘನೆಗೆ ಸಂಬಂಧಿಸಿದ ಅಪರಾಧಗಳ ತನಿಖೆ ನಡೆಸುವ ಕೇಂದ್ರ ಸಂಸ್ಥೆಯಾದ ಜಾರಿ ನಿರ್ದೇಶನಾಲಯ (ಸಿಎಂ) ಆದೇಶದ ಮೇರೆಗೆ ಈ ಎರಡೂ ಬಂಧನಗಳು ನಡೆದಿವೆ.
ಸೊರೆನ್ ಮತ್ತು ಕೇಜ್ರಿವಾಲ್ ಇಬ್ಬರೂ ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಾರ ಮಾಡಲು ಸಾಧ್ಯವಾಗುವಂತೆ ಸುಪ್ರೀಂ ಕೋರ್ಟ್ ನಿಂದ ಮಧ್ಯಂತರ ಜಾಮೀನು ಕೋರಿದ್ದಾರೆ. ಜಾರ್ಖಂಡ್ ಮತ್ತು ದೆಹಲಿ ಹೈಕೋರ್ಟ್ಗಳಲ್ಲಿ ಜಾಮೀನು ಅಥವಾ ಮಧ್ಯಂತರ ಜಾಮೀನಿಗಾಗಿ ಮಾಡಿದ ಮನವಿಗಳನ್ನು ತಿರಸ್ಕರಿಸಲಾಗಿತ್ತು. ಈ ಎರಡೂ ಪ್ರಕರಣಗಳಲ್ಲಿ ಬಹುತೇಕ ಸಾಮ್ಯತೆ ಇದ್ದರೂ ಒಂದಿಷ್ಟು ವ್ಯತ್ಯಾಸವೂ ಇದೆ. ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದರೂ, ಸೊರೆನ್ ಅವರ ಜೈಲುವಾಸ ಇನ್ನೂ ಮುಂದುವರೆದಿರುವುದು ಗಮನಾರ್ಹ.
ಕೇಜ್ರಿವಾಲ್ಗೆ ಜಾಮೀನು ಸಿಗಲು ಕಾರಣವೇನು? : ಮೇ 10 ರಂದು ಸುಪ್ರೀಂ ಕೋರ್ಟ್ನ ವಿಭಾಗೀಯ ಪೀಠವು ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಿತು. ಕೇಜ್ರಿವಾಲ್ ಬಂಧನವನ್ನು ಎತ್ತಿಹಿಡಿದ ರೂಸ್ ಅವೆನ್ಯೂ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್ ಹೊರಡಿಸಿದ ಆದೇಶಗಳನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಕೇಜ್ರಿವಾಲ್ ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳನ್ನು ಸುಪ್ರಿಂ ಕೋರ್ಟ್ ಪ್ರಮುಖವಾಗಿ ಗಣನೆಗೆ ತೆಗೆದುಕೊಂಡಂತಿದೆ. ".. ಲೋಕಸಭೆಗೆ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿರುವುದರಿಂದ ಈ ವರ್ಷ ಅತ್ಯಂತ ಮಹತ್ವದ ವರ್ಷವಾಗಿದೆ" ಎಂದು ಸುಪ್ರೀಂ ಕೋರ್ಟ್ ಹೇಳಿರುವುದು ಇದಕ್ಕೆ ಪುಷ್ಟಿ ನೀಡುವಂತಿದೆ.
ಜಾಮೀನು ನೀಡುವಾಗ ನ್ಯಾಯಾಲಯಗಳು ವ್ಯಕ್ತಿಗೆ ಸಂಬಂಧಿಸಿದ ವಿಶೇಷತೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ ಮತ್ತು ಅದನ್ನು ನಿರ್ಲಕ್ಷಿಸುವುದು ಅನ್ಯಾಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಆ ನಿಟ್ಟಿನಲ್ಲಿ, ಕೇಜ್ರಿವಾಲ್ ಅವರ ಪರಿಸ್ಥಿತಿಯನ್ನು ಹೋಲಿಸಲಾಗುವುದಿಲ್ಲ ಎಂದು ನ್ಯಾಯಾಲಯ ಗಮನಿಸಿದೆ.
ಕೇಜ್ರಿವಾಲ್ ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕರಾಗಿರುವುದರಿಂದ (ಇದು ಐಎನ್ಡಿಐಎ ಒಕ್ಕೂಟದ ಭಾಗವಾಗಿದೆ) ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ನಿರ್ದೇಶಿಸಲಾಯಿತು. ಈ ತೀರ್ಮಾನಕ್ಕೆ ಬರುವಾಗ, ಕೇಜ್ರಿವಾಲ್ ಯಾವುದೇ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿಲ್ಲ ಮತ್ತು ಅವರ ಬಂಧನದ ಕಾನೂನುಬದ್ಧತೆಯನ್ನೇ ಪ್ರಶ್ನಿಸಲಾಗಿದೆ ಎಂಬ ವಿಚಾರಗಳನ್ನು ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಂಡಿದೆ.
ಸೊರೆನ್ಗೆ ಜಾಮೀನು ಸಿಗದಿರಲು ಕಾರಣವೇನು? : ಈ ಪ್ರಶ್ನೆಗೆ ನೇರ ಉತ್ತರವಿಲ್ಲ! ಜಾರ್ಖಂಡ್ನ ಮೂರು ಲೋಕಸಭಾ ಕ್ಷೇತ್ರಗಳಿಗೆ ಮೇ 20 ರಂದು ಐದನೇ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ, ಕೇಜ್ರಿವಾಲ್ ಪ್ರಕರಣದಲ್ಲಿನ ವಾಸ್ತವ ಪರಿಸ್ಥಿತಿ ಮತ್ತು ಅವರ ಜಾಮೀನು ಆದೇಶದಲ್ಲಿನ ಸುಪ್ರೀಂ ಕೋರ್ಟ್ ನ ತರ್ಕವು ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಜಾರ್ಖಂಡ್ ರಾಜ್ಯದಲ್ಲಿ ಸೊರೆನ್ ಅವರ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಅವರಿಗೂ ಅನ್ವಯಿಸಬೇಕು ಎಂದು ವಾದಿಸಲಾಯಿತು.
ಆದರೆ, ಕೆಲವು ದಿನಗಳ ಹಿಂದೆ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರು ಸೊರೆನ್ ಅವರಿಗೆ ಜಾಮೀನು ನೀಡಲು ನಿರಾಕರಿಸಿದರು. ಪ್ರತಿಕ್ರಿಯೆ ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ನೀಡಿದ ನ್ಯಾಯಪೀಠ, ಸೊರೆನ್ ಅವರ ಜಾಮೀನು ಅರ್ಜಿಯನ್ನು ಮೇ 20ಕ್ಕೆ ಪಟ್ಟಿ ಮಾಡುವ ಉದ್ದೇಶ ಹೊಂದಿತ್ತು.
ಆದರೆ, ಅಷ್ಟೊತ್ತಿಗಾಗಲೇ ಜಾರ್ಖಂಡ್ನಲ್ಲಿ ಐದನೇ ಹಂತದ ಮತದಾನ ಮುಗಿಯುವುದರಿಂದ ಬೇಗನೇ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಸೊರೆನ್ ಅವರ ವಕೀಲರು ಮನವಿ ಮಾಡಿದರು. ಹೀಗಾಗಿ ನ್ಯಾಯಾಲಯ ಮೇ 17 ರಂದು ಈ ಅರ್ಜಿಯ ವಿಚಾರಣೆ ನಡೆಸಲಿದೆ. ಈ ಪ್ರಕರಣದ ವಿಚಾರಣೆ ಮತ್ತು ವಿಲೇವಾರಿಯಲ್ಲಿ ಜಾರ್ಖಂಡ್ ಹೈಕೋರ್ಟ್ ನಲ್ಲಿ ಆದ ವಿಳಂಬವನ್ನು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.
ಮೂಲಭೂತವಾಗಿ ರಾಜಕಾರಣಿಯೊಬ್ಬ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದು ಅಗತ್ಯ ಎಂಬ ಅಂಶವು ಕೇಜ್ರಿವಾಲ್ ಅವರ ಬಿಡುಗಡೆ ಖಚಿತಪಡಿಸಿತು. ಆದರೆ ಸೊರೆನ್ ಅವರ ವಿಷಯದಲ್ಲಿ ಹಾಗಾಗಲಿಲ್ಲ. ಈ ಇಬ್ಬರು ವ್ಯಕ್ತಿಗಳ ನಡುವಿನ ಪ್ರಮುಖ ವ್ಯತ್ಯಾಸ ಎಂದರೆ ಕೇಜ್ರಿವಾಲ್ ಚುನಾಯಿತ ಮುಖ್ಯಮಂತ್ರಿಯಾಗಿ ಮುಂದುವರಿದರೆ, ಸೊರೆನ್ ರಾಜೀನಾಮೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಸೊರೆನ್ ಅವರಿಗೆ ಮಧ್ಯಂತರ ಜಾಮೀನು ಏಕೆ ನೀಡಲಿಲ್ಲ ಎಂಬುದನ್ನು ನಿಖರವಾಗಿ ವಿವರಿಸುವುದು ಅಥವಾ ಸಮರ್ಥಿಸುವುದು ಕಷ್ಟ. ಒಂದು ಪ್ರಕರಣದಲ್ಲಿ ಚುನಾಯಿತ ರಾಜಕಾರಣಿಗೆ ಸ್ವಾತಂತ್ರ್ಯ ನೀಡಲು ಸುಪ್ರೀಂ ಕೋರ್ಟ್ ತನ್ನ ವಿವೇಚನೆಯನ್ನು ಹೇಗೆ ಬಳಸಿತು ಮತ್ತು ಇನ್ನೊಂದರಲ್ಲಿ ಏಕೆ ಬಳಸಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಮೇ 17 ರಂದು ಸೊರೆನ್ ಅವರ ಜಾಮೀನು ಅರ್ಜಿ ವಿಚಾರಣೆಯ ಸಮಯದಲ್ಲಿ ಸಿಗಬಹುದು.
ಕುತೂಹಲಕಾರಿ ಸಂಗತಿಯೆಂದರೆ, ಪಂಜಾಬಿನ ಮಾಜಿ ಅರಣ್ಯ ಸಚಿವ ಸಾಧು ಸಿಂಗ್ ಧರ್ಮಸೋತ್ ಅವರಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಪಂಜಾಬ್ ನ ಅರಣ್ಯ ಇಲಾಖೆಯಲ್ಲಿ ನಡೆದ ಹಣಕಾಸು ಅಕ್ರಮಗಳಿಗೆ ಸಂಬಂಧಿಸಿದಂತೆ ಧರ್ಮಸೋತ್ ಅವರನ್ನು 2024 ರ ಜನವರಿಯಲ್ಲಿ ಬಂಧಿಸಲಾಗಿತ್ತು. ಧರ್ಮಸೋತ್ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್ ಆದೇಶವನ್ನೇ ಹೈಕೋರ್ಟ್ ಅವಲಂಬಿಸಿದೆ ಎಂದು ಹೇಳಬೇಕಾಗಿಲ್ಲ!
ಲೇಖನ : ರಿತ್ವಿಕಾ ಶರ್ಮಾ
ಇದನ್ನೂ ಓದಿ : ಪಕ್ಷಾಂತರ ನಿಷೇಧ ಕಾಯ್ದೆಯ ಯಶಸ್ಸು ಮತ್ತು ವೈಫಲ್ಯಗಳು: ವಿಶ್ಲೇಷಣೆ - Anti Defection Law