ಕೊಲೊಂಬೊ: ಶ್ರೀಲಂಕಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಇಲ್ಲಿಯವರೆಗೆ 30 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಚಿವ ಪ್ರೆಮಿತಾ ಬಂದರ ತೆನ್ನಕೂನ್ ತಿಳಿಸಿದ್ದಾರೆ.
ಮುಂಗಾರು ಮಳೆಯಿಂದಾಗಿ 71 ಮನೆಗಳು ನಾಶವಾಗಿವೆ. 9,300 ಮಂದಿ ಭಾಗಶಃ ತೊಂದರೆಗೊಳಗಾಗಿದ್ದಾರೆ. ಮೂಲಸೌಕರ್ಯಾಭಿವೃದ್ಧಿ ವ್ಯವಸ್ಥೆಯ ಘಟಕಗಳೂ ಸೇರಿದಂತೆ 825 ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಹಾನಿಗೊಳಗಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮುಂದುವರೆದ ಪ್ರತಿಕೂಲ ಹವಾಮಾನ: ಮೇ 15ರಿಂದ ಶ್ರೀಲಂಕಾದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಪ್ರತಿಕೂಲ ಹವಾಮಾನ ಮುಂದುವರೆಯುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ರಾಜಧಾನಿ ಕೊಲೊಂಬೊ ಸೇರಿದಂತೆ 10 ಜಿಲ್ಲೆಗಳಲ್ಲಿ ಅಧಿಕ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ತಲೆದೋರಿದೆ. ಅಲ್ಲದೇ ಭಾರೀ ಗಾಳಿ, ಮಿಂಚಿನ ವಾತಾವರಣಕ್ಕೆ ಮರಗಳುರುಳಿವೆ.
ವಿವಿಧ ಜಿಲ್ಲೆಗಳ ನದಿತೀರದ ಪ್ರದೇಶದ ಜನರಿಗೆ ವಿಪತ್ತು ನಿರ್ವಹಣಾ ಕೇಂದ್ರ, ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ. ಮಳೆ ಮತ್ತು ಗಾಳಿ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇದರ ಜೊತೆಗೆ, ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ರಾಷ್ಟ್ರೀಯ ಕಟ್ಟಡ ಸಂಶೋಧನಾ ಕೇಂದ್ರ ರೆಡ್ ಅಲರ್ಟ್ ನೀಡಿದ್ದು, ಭೂ ಕುಸಿತದ ಎಚ್ಚರಿಕೆಯನ್ನೂ ಕೊಟ್ಟಿದೆ.
ಭಾರೀ ಮಳೆಯಿಂದ ದ್ವೀಪ ರಾಷ್ಟ್ರದ ಅನೇಕ ಭಾಗಗಳಲ್ಲಿ ಪ್ರವಾಹ, ಮಣ್ಣು ಕುಸಿದ ಪ್ರಕರಣಗಳು ವರದಿಯಾಗಿವೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸೋಮವಾರದವರೆಗೆ 5 ಸಾವಿರ ಜನರನ್ನು ಆಶ್ರಯ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ನೌಕಾ ತಂಡಗಳು ರಕ್ಷಣಾ ಕಾರ್ಯ ನಡೆಸುತ್ತಿದ್ದು, ಸಂತ್ರಸ್ತರಿಗೆ ಆಹಾರ ಮತ್ತು ಅಗತ್ಯ ಸಾಮಗ್ರಿ ಒದಗಿಸುತ್ತಿವೆ.
ಇದನ್ನೂ ಓದಿ: ಭಾರಿ ಮಳೆ; 10 ಮಂದಿ ಸಾವು, ಐವರು ನಾಪತ್ತೆ