ಸ್ಯಾಕ್ರಮೆಂಟೊ: ಉತ್ತರ ಕ್ಯಾಲಿಫೋರ್ನಿಯಾದ ಉದ್ಯಾನವನದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಸಾವಿರಾರು ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಪಶ್ಚಿಮ ಯುನೈಟೆಡ್ ರಾಜ್ಯದಲ್ಲಿ ಸಂಭವಿಸಿದ ಅತಿದೊಡ್ಡ ಕಾಳ್ಗಿಚ್ಚುಗಳಲ್ಲಿ ಅತಿದೊಡ್ಡ ಕಾಳ್ಗಿಚ್ಚು ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
![California's largest wildfire explodes in size as fires rage across US West](https://etvbharatimages.akamaized.net/etvbharat/prod-images/27-07-2024/california-s-largest-wildfire-explodes-in-size-as-fires-rage-across-us-west_e2dc6221de334ae7bb703fcfdc162b7a_2707a_1722054044_61.jpg)
ಕ್ಯಾಲಿಫೋರ್ನಿಯಾದ ರಾಜಧಾನಿ ಸ್ಯಾಕ್ರಮೆಂಟೊದ ಉತ್ತರದಲ್ಲಿರುವ ಚಿಕೊ ಬಳಿಯ ಉದ್ಯಾನದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡವು ಶುಕ್ರವಾರವೂ ಮುಂದುವರೆದಿತ್ತು. ಶುಕ್ರವಾರ ಬೆಳಗಿನ ವೇಳೆಗೆ 374 ಚದರ ಮೈಲಿ (967 ಚದರ ಕಿಲೋ ಮೀಟರ್) ವರೆಗೂ ಆವರಿಸಿದೆ. ಬೆಂಕಿಯ ಜ್ವಾಲೆ 134 ಕಟ್ಟಡಗಳನ್ನು ನಾಶಪಡಿಸಿದೆ. ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮುಂಜಾಗ್ರತಾ ಕ್ರಮವಾಗಿ ಸುಮಾರು 4,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಬುಧವಾರ ಹೊತ್ತಿಕೊಂಡ ಬೆಂಕಿ ಕ್ಯಾಲಿಫೋರ್ನಿಯಾದ ಉತ್ತರ ಮತ್ತು ಪೂರ್ವದ ವಲಯದವರೆಗೂ ಹಬ್ಬಿಕೊಂಡಿದೆ. ಉರಿಯುತ್ತಿರುವ ಬೆಂಕಿಯನ್ನು ನಂದಿಸುವ ಕಾರ್ಯ ನಡೆದಿದೆ.
![California's largest wildfire explodes in size as fires rage across US West](https://etvbharatimages.akamaized.net/etvbharat/prod-images/27-07-2024/california-s-largest-wildfire-explodes-in-size-as-fires-rage-across-us-west_945b32a25c7749bbbcfbbaddabc34543_2707a_1722054044_327.jpg)
"ಅಲ್ಲಿ ಅಪಾರ ಪ್ರಮಾಣದ ಇಂಧನವಿದ್ದು, ಬಲವಾದ ಗಾಳಿ ಮತ್ತು ಬಿಸಿ ಮತ್ತು ಶುಷ್ಕ ಹವಾಮಾನದಿಂದಾಗಿ ಬೆಂಕಿಯ ಜ್ವಾಲೆ ಹರಡುತ್ತಲೇ ಇದೆ" ಎಂದು ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿಶಾಮಕ ಸಂರಕ್ಷಣಾ ಇಲಾಖೆ (ಕ್ಯಾಲ್ ಫೈರ್) ಅಧಿಕಾರಿ ಬಿಲ್ಲಿ ಸೀ ಎಂಬುವರು ಎಚ್ಚರಿಕೆ ರವಾನಿಸಿದ್ದಾರೆ.
![California's largest wildfire explodes in size as fires rage across US West](https://etvbharatimages.akamaized.net/etvbharat/prod-images/27-07-2024/california-s-largest-wildfire-explodes-in-size-as-fires-rage-across-us-west_b4ef9efaa1704c6cba6c1f6aa7ab434b_2707a_1722054044_337.jpg)
ಬೆಂಕಿಯ ಕೆನ್ನಾಲಿಗೆ ಗಂಟೆಗೆ 8 ಚದರ ಮೈಲಿ (21 ಚದರ ಕಿಲೋ ಮೀಟರ್) ವರೆಗೂ ಹಬ್ಬುತ್ತಿದೆ. ಹಲವು ವಿಮಾನ, ಹೆಲಿಕಾಪ್ಟರ್‌ಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸುತ್ತಿದ್ದಾರೆ. ಈ ಹೋರಾಟದಲ್ಲಿ ಏರ್ ಟ್ಯಾಂಕರ್ ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿದ್ದ ಪೈಲಟ್ ಮೃತಪಟ್ಟಿರುವ ಮಾಹಿತಿ ಇದೆ. ವ್ಯಕ್ತಿಯೊಬ್ಬ ಉರಿಯುತ್ತಿದ್ದ ಬೆಂಕಿಯಲ್ಲಿ ಕಾರನ್ನು ತಳ್ಳಿದ್ದು, ಇದರ ಪರಿಣಾಮ ಬೆಂಕಿ ತನ್ನ ಪ್ರಕರತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಪರಿಣಾಮ ಸುಟ್ಟುಹೋದ ಕಟ್ಟಡಗಳ ಸಂಖ್ಯೆಯ ಬಗ್ಗೆಯಾಗಲಿ ಅಥವಾ ಹಾನಿಯ ಬಗ್ಗೆಯಾಗಲಿ ಯಾವುದೇ ಖಚಿತ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
![California's largest wildfire explodes in size as fires rage across US West](https://etvbharatimages.akamaized.net/etvbharat/prod-images/27-07-2024/california-s-largest-wildfire-explodes-in-size-as-fires-rage-across-us-west_b498f98996174689aac7e91b7d7adfc4_2707a_1722054044_175.jpg)
ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಪಾರ್ಕ್ ಫೈರ್ ಬಗ್ಗೆ ಪ್ರತಿಕ್ರಿಯಿಸಿ, ಬುಟ್ಟೆ ಮತ್ತು ತೆಹಾಮಾ ಕೌಂಟಿಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಇನ್ನು ಬೆಂಕಿ ಅವಘಡಕ್ಕೆ ಕಾರಣ ಪತ್ತೆ ಹಚ್ಚಿರುವ ಅಧಿಕಾರಿಗಳು, ಚಿಕೋ ನಿವಾಸಿ ರೋನಿ ಡೀನ್ ಸ್ಟೌಟ್ II ಎಂಬ 42 ವರ್ಷದ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ ಶಂಕೆ ಹಿನ್ನೆಲೆ ಬಂಧಿಸಿದ್ದಾರೆ. ಚಿಕೊದಿಂದ 400 ಜನರು ಸೇರಿದಂತೆ ಸುಮಾರು 4,000 ನಿವಾಸಿಗಳನ್ನು ಸ್ಥಳಾಂತರಿಸಲು ಆದೇಶಿಸಲಾಗಿದೆ. ಸದ್ಯ 3,500 ಜನರನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಇಬ್ಬರಿಗೆ ಸಣ್ಣ-ಪುಟ್ಟ ಗಾಯಗಳಾಗಿರುವ ಮಾಹಿತಿ ಇದೆ. ಬೆಂಕಿಯನ್ನು ಹತ್ತಿಕ್ಕಲು ಅಧಿಕಾರಿಗಳ ತಂಡ ಸನ್ನದ್ಧವಾಗಿದೆ. 142 ಅಗ್ನಿಶಾಮಕ ವಾಹನದಿಂದಿಗೆ 1,633 ಅಗ್ನಿಶಾಮಕ ಸಿಬ್ಬಂದಿ, 6 ಹೆಲಿಕಾಪ್ಟರ್‌ಗಳು ಮತ್ತು 54 ಬುಲ್ಡೋಜರ್‌ಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ.
ಇದನ್ನೂ ಓದಿ: ರಾಜ್‌ಕೋಟ್ ಅಗ್ನಿ ದುರಂತ: 1 ಲಕ್ಷ ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಪೊಲೀಸರು - Rajkot Fire Accident Chargesheet