ವಾಷಿಂಗ್ಟನ್(ಅಮೆರಿಕ): ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಸ್ಪರ್ಧೆಯಿಂದ ಹಿಂದೆ ಸರಿಯಬೇಕು ಎಂಬ ಬೇಡಿಕೆಗಳು ದಿನ ದಿನಕ್ಕೆ ಬಲಗೊಳ್ಳುತ್ತಿವೆ. ಅವರದೇ ಪಕ್ಷದ ಪ್ರಮುಖ ಪ್ರತಿನಿಧಿಗಳು, ಬೈಡನ್ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಟ್ರಂಪ್ ಜೊತೆಗಿನ ಚರ್ಚೆಯಲ್ಲಿ ಬೈಡನ್ ಎಡವಿದ ನಂತರ, ಅವರ ಉಮೇದುವಾರಿಕೆ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಬಹುಮತವನ್ನು ಮರಳಿ ಪಡೆಯಲು ಬೈಡನ್ ಸ್ಪರ್ಧೆಯಲ್ಲಿ ಇರಬಾರದು ಎಂದು ಹಲವು ಪ್ರಮುಖ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಇವರಿಂದಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಸಾಧ್ಯತೆ ಕ್ಷೀಣಿಸುವ ಅಪಾಯವಿದೆ ಎಂಬ ಆತಂಕ ವ್ಯಕ್ತವಾಗಿದೆ. ಟ್ರಂಪ್ ಅವರಿಂದ ದೇಶವನ್ನು ರಕ್ಷಿಸಲು ಪ್ರಬಲ ನಾಯಕನ ಅಗತ್ಯವಿದೆ ಎಂದೂ ಕೆಲವರು ಸಲಹೆ ನೀಡಿದ್ದಾರೆ.
ಬೈಡನ್ ಮುಂದಿನ ನಡೆಯೇನು: ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಬೈಡನ್ ಹಿಂದೆ ಸರಿದರೆ ಕಮಲಾ ಹ್ಯಾರಿಸ್ ಅವರನ್ನು ಕಣಕ್ಕಿಳಿಸಬೇಕು ಎಂದು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಕಮಲಾ ಕಣದಲ್ಲಿದ್ದರೆ ಟ್ರಂಪ್ ಅವರನ್ನು ಸೋಲಿಸುವ ಸಾಧ್ಯತೆ ಹೆಚ್ಚು ಎಂದು ನಂಬಲಾಗಿದೆ.
ಮಂಗಳವಾರ ನಡೆಯಲಿರುವ ಕಾರ್ಯಕಾರಿಣಿ ಸಭೆಯಲ್ಲಿ ಮಹತ್ವದ ಅಂಶ ಹೊರಬೀಳುವ ಸಾಧ್ಯತೆ ಇದೆ. ಬೈಡನ್ ಅನುಭವ ಮತ್ತು ಪ್ರತಿಷ್ಠೆಯ ಹಿನ್ನೆಲೆಯಲ್ಲಿ ಕಣದಿಂದ ಹಿಂದೆ ಸರಿಯುವ ಪ್ರಕ್ರಿಯೆ ಸುಗಮವಾಗಿ ನಡೆದರೆ ಉತ್ತಮ ಎಂದು ಕೆಲವರು ಹೇಳಿದ್ದಾರೆ.
ಆದರೆ ಬೈಡನ್ ತಮ್ಮ ಚುನಾವಣಾ ಪ್ರಚಾರವನ್ನು ಹುರುಪಿನಿಂದ ಮುಂದುವರಿಸುತ್ತಿದ್ದಾರೆ. ಅವರೇ ಅಧ್ಯಕ್ಷೀಯ ಅಭ್ಯರ್ಥಿ ಎಂದು ಇನ್ನೂ ಬಲವಾಗಿ ಹೇಳಲಾಗುತ್ತಿದೆ. ಮತ್ತೊಂದೆಡೆ, ಅವರ ಆಪ್ತ ಸ್ನೇಹಿತ, ಹವಾಯಿ ಗವರ್ನರ್ ಜೋಶ್ ಗ್ರೀನ್ ಅವರು ಶನಿವಾರ ಪ್ರತಿಕ್ರಿಯಿಸಿ, ಸ್ಪರ್ಧೆಯಲ್ಲಿ ಇರಬೇಕಾ ಅಥವಾ ಬೇಡವೇ ಎಂಬುದರ ವಿಷಯದ ಮೇಲೆ ಬೈಡನ್ ತಮ್ಮ ನಿರ್ಧಾರ ಪ್ರಕಟಿಸುತ್ತಾರೆಂದು ಹೇಳಿದರು.
ಒಂದು ವೇಳೆ ಬೈಡನ್ ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದರೆ, ಅವರ ಸ್ಥಾನಕ್ಕೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ನಾಮನಿರ್ದೇಶನ ಮಾಡುವ ಸಾಧ್ಯತೆಯಿದೆ ಎಂಬುದು ಗಮನಾರ್ಹ.
ಇದನ್ನೂ ಓದಿ: ಅಮೆರಿಕದಲ್ಲಿ ಗುಂಡಿನ ದಾಳಿ, ಬಾಲಕಿ ಸೇರಿ ಇಬ್ಬರು ಸಾವು; 19ಕ್ಕೂ ಹೆಚ್ಚು ಜನರಿಗೆ ಗಾಯ - US Shooting