ಕೈರೋ(ಸೌದಿ ಅರೇಬಿಯಾ): ವಾರ್ಷಿಕ ಹಜ್ ಯಾತ್ರೆಗೆ ರಣಬಿಸಿಲು ಕಂಟಕವಾಗಿ ಕಾಡುತ್ತಿದೆ. 5 ದಿನಗಳ ಯಾತ್ರೆಗೆ ತೆರಳಿದ ಭಾರತದ 98 ಮಂದಿ ಸೇರಿ ಈವರೆಗೂ 1,301 ಯಾತ್ರಾರ್ಥಿಗಳು ಸಾವಿಗೀಡಾಗಿದ್ದಾರೆ. ಇದರಲ್ಲಿ ಶೇಕಡಾ 83ರಷ್ಟು ಜನರು ಅನಧಿಕೃತ (ನೋಂದಣಿ ಮಾಡಿಕೊಳ್ಳದವರು) ಯಾತ್ರಿಗಳು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಇಸ್ಲಾಮಿಕ್ ರಾಷ್ಟ್ರದಲ್ಲಿ ತಾಪಮಾನ ವಿಪರೀತವಾಗಿದ್ದು, ನೋಂದಣಿ ಮಾಡಿಕೊಳ್ಳದ ಕಾರಣ ಯಾವುದೇ ಸೂರು ಮತ್ತು ಮೂಲಸೌಕರ್ಯ ವ್ಯವಸ್ಥೆ ಇಲ್ಲದೇ ಯಾತ್ರೆಗೆ ಬಂದವರು ಬಿಸಿಲ ತಾಪಕ್ಕೆ ಸಾವಿಗೀಡಾಗಿದ್ದಾರೆ. ಇವರಿಗೆ ನೆರವು ನೀಡಿದ 16 ಟ್ರಾವೆಲ್ ಏಜೆನ್ಸಿಗಳ ಪರವಾನಗಿ ರದ್ದು ಮಾಡಲಾಗಿದೆ ಎಂದು ಸೌದಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
95 ಯಾತ್ರಿಗಳು ತೀವ್ರ ಅಸ್ವಸ್ಥವಾಗಿದ್ದು, ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತಪಟ್ಟ ಯಾತ್ರಿಗಳ ಪೈಕಿ 31 ಮಂದಿ ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಉಳಿದವರು ಅನಧಿಕೃತವಾಗಿ ಯಾತ್ರೆಗೆ ಬಂದು ಸಾವಿಗೀಡಾಗಿದ್ದಾರೆ. ಎಲ್ಲರನ್ನೂ ಮೆಕ್ಕಾದಲ್ಲಿ ಸಮಾಧಿ ಮಾಡಲಾಗಿದೆ. ಮೃತ ಯಾತ್ರಿಕರ ಬಳಿ ಯಾವುದೇ ದಾಖಲೆಗಳಿಲ್ಲದೆ ಗುರುತು ಪತ್ತೆ ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಜಿಪ್ಟ್ನಿಂದ ಅತಿಹೆಚ್ಚು ಯಾತ್ರಿಕರು: ಮೆಕ್ಕಾದ ಅಲ್ ಮುಯಿಸೆಮ್ ಪ್ರದೇಶದಲ್ಲಿ ಅತಿ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಈ ವರ್ಷ ಈಜಿಪ್ಟ್ 50 ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಿದೆ. ತಪಾಸಣೆಯಯಲ್ಲಿ ಸಿಕ್ಕಿಬಿದ್ದ ಅನಧಿಕೃತ ಯಾತ್ರಾರ್ಥಿಗಳನ್ನು ಯಾತ್ರೆಯಿಂದ ಹೊರಹಾಕಲಾಗಿದೆ. ಆದಾಗ್ಯೂ ಕೆಲವರು ತಪ್ಪಿಸಿಕೊಂಡು ಮೆಕ್ಕಾಗೆ ತಲುಪಿದ್ದಾರೆ. ಬಳಿಕ ಅವರು ಹಿಂದಿರುಗಲು ಹೋಟೆಲ್ ವ್ಯವಸ್ಥೆ ಇಲ್ಲದೇ ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಮೃತರ ಪೈಕಿ ಈಜಿಪ್ಟ್ನ 660, ಇಂಡೋನೇಷ್ಯಾದ 165, ಭಾರತದ 98, ಜೋರ್ಡಾನ್, ಟ್ಯುನಿಶಿಯಾ, ಮೊರಾಕ್ಕೊ, ಅಲ್ಜೀರಿಯಾ ಮತ್ತು ಮಲೇಷ್ಯಾದ 12 ಕ್ಕೂ ಅಧಿಕ ಯಾತ್ರಿಕರಿದ್ದಾರೆ. ಇಬ್ಬರು ಅಮೆರಿಕ ನಾಗರಿಕರು ಸಹ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಹಜ್ ಯಾತ್ರೆಯ ಎರಡನೇ ಮತ್ತು ಮೂರನೇ ದಿನದಂದು ತೀವ್ರ ಬಿಸಿಲಿನ ತಾಪದಿಂದ ಯಾತ್ರಾರ್ಥಿಗಳು ವಾಂತಿ ಮಾಡಿಕೊಂಡು ಮೂರ್ಛೆ ಹೋಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಐದು ದಿನಗಳ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ 2 ಮಿಲಿಯನ್ಗೂ ಹೆಚ್ಚು ಯಾತ್ರಿಕರು ಪ್ರಯಾಣಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ. ಸೌದಿ ಅರೇಬಿಯಾದ ರಾಷ್ಟ್ರೀಯ ಹವಾಮಾನ ಕೇಂದ್ರದ ಪ್ರಕಾರ, ಮೆಕ್ಕಾ ಮತ್ತು ನಗರದ ಸುತ್ತಮುತ್ತಲಿನ ಪವಿತ್ರ ಸ್ಥಳಗಳಲ್ಲಿ 46 ಡಿಗ್ರಿ ಸೆಲ್ಸಿಯಸ್ನಿಂದ 49 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ.
ಹಜ್ ಯಾತ್ರೆ ದುರಂತಗಳು: ಹಜ್ ಯಾತ್ರೆಯಲ್ಲಿ ಸಾವಿರಕ್ಕೂ ಅಧಿಕ ಜನರು ಸಾವಿಗೀಡಾಗಿದ್ದು ಇದೇ ಮೊದಲಲ್ಲ. 2015ರಲ್ಲಿ ಕಾಲ್ತುಳಿತ ಉಂಟಾಗಿ 2,400ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಸಾನ್ನಪ್ಪಿದ್ದರು. ಇದು ಯಾತ್ರೆಯಲ್ಲೇ ಅತಿ ಭೀಕರ ಘಟನೆಯಾಗಿದೆ. ಅದೇ ವರ್ಷ ಮೆಕ್ಕಾದ ಮಸೀದಿಯಲ್ಲಿ ಕ್ರೇನ್ ಕುಸಿದು 111 ಜನರು ಸಾವನ್ನಪ್ಪಿದರು. ಇದಲ್ಲದೇ, 1990ರಲ್ಲಿ 1,426 ಮಂದಿ ಯಾತ್ರೆಯ ವೇಳೆ ಅಸುನೀಗಿದ್ದರು. ಇದು ಎರಡನೇ ಅತ್ಯಂತ ದಾರುಣ ಘಟನೆಯಾಗಿದೆ.