ನವದೆಹಲಿ: ಶಾಲೆಯಲ್ಲಿ ಜನಪ್ರಿಯವಾಗಿರುವ ಹದಿಹರೆಯದ ಯುವಕ - ಯುವತಿಯರು ನಿದ್ರೆ ಕೊರತೆ ಸಮಸ್ಯೆ ಹೊಂದಿದ್ದು, ಅವರು ಶಿಫಾರಸು ಮಾಡಿರುವ 8 ರಿಂದ 10 ಗಂಟೆ ನಿದ್ದೆಯನ್ನು ಹೊಂದಿರುವುದಿಲ್ಲ ಎಂಬುದು ಅಧ್ಯಯನದಲ್ಲಿ ಬಯಲಾಗಿದೆ.
ಸ್ವೀಡನ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಅಧ್ಯಯನದಲ್ಲಿ ಈ ಅಂಶ ಬಯಲಾಗಿದೆ. ಶಾಲೆಯ ಬೇಡಿಕೆ, ಚಟುವಟಿಕೆ ಪೋಷಕರಿಂದ ಹೆಚ್ಚಿನ ಸ್ವಾತಂತ್ರ್ಯ ಮತ್ತು ಸಂಬಂಧಗಳಿಂದಾಗಿ ಅವರಲ್ಲಿ ನಿದ್ರೆ ಕೊರತೆ ಉಂಟಾಗುತ್ತದೆ. ವಿಶೇಷವಾಗಿ ಯುವತಿಯರಲ್ಲಿ ಈ ನಿದ್ರಾಹೀನತೆ ಲಕ್ಷಣ ಹೆಚ್ಚಿದೆ. ಕಾರಣ ಅವರಲ್ಲಿ ಸಂಜೆ ಬಳಿಕ ಮೆಲಟೋನಿನ್ ಪ್ರಾರಂಭ ಮತ್ತು ಜಾಗುರೂಕತೆ ಹೆಚ್ಚುತ್ತದೆ ಎಂದು ತಿಳಿಸಲಾಗಿದೆ.
ಈ ಅಧ್ಯಯನವನ್ನು ಸ್ಲೀಪ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಹದಿ ಹರೆಯದವರು ಕಡಿಮೆ ನಿದ್ರೆ ಹೊಂದಿರುವುದನ್ನು ಅಧ್ಯಯನದಲ್ಲಿ ತೋರಿಸಲಾಗಿದೆ. ಅದರಲ್ಲೂ ಶಾಲೆಗಳಲ್ಲಿ ಜನಪ್ರಿಯತೆ ಪಡೆದ ಯುವಕ - ಯುವತಿಯರಲ್ಲಿ ನಿದ್ರಾಹೀನತೆ ಲಕ್ಷಣ ಹೆಚ್ಚಿದೆ ಎಂದು ಒರೆಬ್ರೊ ವಿಶ್ವವಿದ್ಯಾಲಯ ಸ್ಲೀಪ್ ರಿಸರ್ಚರ್ ಡಾ ಸೆರೆನಾ ಬೌಡುಕೊ ತಿಳಿಸಿದ್ದಾರೆ.
ಇನ್ನು ಈ ಹದಿಹರೆಯದವರಲ್ಲಿ ಸ್ಮಾರ್ಟ್ಫೋನ್ ಆಗಮನ ಮತ್ತು ಅದಕ್ಕಿಂತ ಮೊದಲು ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಹೆಚ್ಚಿರುವುದು ಕಂಡು ಬಂದಿದೆ. ಈ ಮಲಗುವ ಅಭ್ಯಾಸಗಳ ನಡುವಿನ ಸಂಬಂಧವನ್ನು ಪತ್ತೆ ಮಾಡುವ ಉದ್ದೇಶದಿಂದ ತಂಡ 1300ಕ್ಕೂ ಹೆಚ್ಚು ಸ್ವೀಡಿಷ್ ಹದಿಹರೆಯದವರನ್ನು ಅಧ್ಯಯನದ ಭಾಗವಾಗಿಸಿದೆ. ಇವರೆಲ್ಲಾ 14 ರಿಂದ 18 ವರ್ಷದ ವಯೋಮಾನದವರಾಗಿದ್ದಾರೆ.
ತಮ್ಮದೇ ವಯಸ್ಸಿನ ಇತರರಿಗೆ ಹೋಲಿಕೆ ಮಾಡಿದಾಗ ಹೆಚ್ಚು ಜನಪ್ರಿಯ ಎಂದು ಗುರುತಿಸಿಕೊಂಡಿರುವವರು 27 ನಿಮಿಷಗಳ ಕಡಿಮೆ ನಿದ್ರೆಯನ್ನು ಹೊಂದಿದ್ದಾರೆ. ಹುಡುಗಿಯರಲ್ಲಿ ಈ ನಿದ್ರಾಹೀನತೆ ಲಕ್ಷಣ ಹೆಚ್ಚಿದೆ. ಅವರಲ್ಲಿ ಬೇಗ ನಿದ್ರೆಗೆ ಜಾರದಿರುವ ಅಥವಾ ಎಚ್ಚರದಿಂದಿರುವ ಅಥವಾ ಬೇಗ ಏಳುವ ಸಮಸ್ಯೆ ಇದೆ. ಈ ರೀತಿಯ ಲಕ್ಷಣವನ್ನು ಯುವಕರು ಇದೇ ಪ್ರಮಾಣದಲ್ಲಿ ಹೊಂದಿಲ್ಲ.
ಯುವತಿಯರು ತಮ್ಮ ಸ್ನೇಹಿತರ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಅವರು ಹುಡುಗರಿಗಿಂತ ಹೆಚ್ಚಿನ ಸಹಾಯದ ನಡುವಳಿಕೆ ಹೊಂದಿದ್ದಾರೆ. ಹದಿಹರೆಯದವರು ತಮ್ಮ ಜೀವಿತಾವಧಿಯಲ್ಲಿ ಹೆಚ್ಚು ನಿದ್ರೆಯಿಂದ ವಂಚಿತರಾಗಿದ್ದಾರೆ ಎಂದು ಅಧ್ಯಯನ ತಿಳಿಸಿದೆ.
ಈ ಹಿಂದಿನ ಅಧ್ಯಯನದಲ್ಲಿ 30 ನಿಮಿಷಗಳ ಹೆಚ್ಚುವರಿ ನಿದ್ರೆಯು ಸುಧಾರಿತ ಮಾನಸಿಕ ಆರೋಗ್ಯ ಮತ್ತು ಉತ್ತಮ ಶಾಲಾ ಕಾರ್ಯಕ್ಷಮತೆಗೆ ಕಾರಣವಾಗಬಹುದು ಎಂದು ಹಿಂದಿನ ಅಧ್ಯಯನ ತೋರಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ನಿಮ್ಮ ಮಕ್ಕಳು ಮೊಬೈಲ್ ಫೋನ್‌ಗೆ ಅಡಿಕ್ಟ್ ಆಗಿದ್ದಾರಾ?: ಹಾಗಾದ್ರೆ ಈ ಟಿಪ್ಸ್ಗಳನ್ನು ಅನುಸರಿಸಿ ನೋಡಿ