ಲಂಡನ್: ಕ್ಷಯ ರೋಗದ (ಟಿಬಿ) ಪ್ರಮುಖ ಲಕ್ಷಣ ಎಂದರೆ, ನಿರಂತರ ಕೆಮ್ಮು ಆಗಿದೆ. ಆದರೆ, ಬಹುತೇಕ ರೋಗಿಗಳಲ್ಲಿ ಈ ಲಕ್ಷಣಗಳು ಪತ್ತೆಯಾಗುವುದಿಲ್ಲ. ಈ ಹಿನ್ನೆಲೆ ಈ ಮಾರಣಾಂತಿಕ ಸೋಂಕನ್ನು ಪತ್ತೆಹಚ್ಚಲು ಹೊಸ ಮಾರ್ಗಗಳನ್ನು ಗುರುತಿಸಬೇಕು ಎಂದು ಹೊಸ ಅಧ್ಯಯನ ತಿಳಿಸಿದೆ.
ಲ್ಯಾನ್ಸೆಟ್ ಇನ್ಫೆಕ್ಷಿಯಸ್ ಡಿಸೀಸ್ ಎಂಬ ಜರ್ನಲ್ನಲ್ಲಿ ಈ ಅಧ್ಯಯನ ವರದಿ ಪ್ರಕಟಿಸಲಾಗಿದೆ. ಆಫ್ರಿಕಾ ಮತ್ತು ಏಷ್ಯಾದ 6 ಲಕ್ಷಕ್ಕೂ ಅಧಿಕ ಮಂದಿಯ ದತ್ತಾಂಶವನ್ನು ಅಧ್ಯಯನವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅಧ್ಯಯನದ ಫಲಿತಾಂಶ ತೋರಿಸುವಂತೆ ಕ್ಷಯ ರೋಗ ಹೊಂದಿರುವ ಶೇ 82.8 ಮಂದಿಯಲ್ಲಿ ನಿರಂತರ ಕೆಮ್ಮು ಕಂಡು ಬಂದಿಲ್ಲ. ಅಲ್ಲದೇ ಶೇ 62.5 ಮಂದಿಯಲ್ಲಿ ಕೆಮ್ಮಿನ ಲಕ್ಷಣವೇ ಇಲ್ಲ ಎಂದಿದ್ದಾರೆ.
ಈ ಸೋಂಕು ಕೆಮ್ಮಿನಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಅಷ್ಟೇ ಅಲ್ಲದೇ ಉಸಿರಾಟದ ಮೂಲಕವೂ ಇದು ಹರಡುವ ಸಾಧ್ಯತೆ ಇದೆ ಎಂದು ನೆದರ್ಲ್ಯಾಂಡ್ನ ಆಂಸ್ಟರ್‌ಡ್ಯಾಮ್ ವಿಶ್ವವಿದ್ಯಾಲಯ ವೈದ್ಯಕೀಯ ಕೇಂದ್ರ ತಿಳಿಸಿದೆ.
ರೋಗದ ಪತ್ತೆ ಮತ್ತು ಚಿಕಿತ್ಸೆಯ ಹಲವು ಪ್ರಯತ್ನದ ಹೊರತಾಗಿ ಆಫ್ರಿಕಾ ಮತ್ತು ಏಷ್ಯಾದಲ್ಲಿ ಕ್ಷಯ ರೋಗದ ಹೊರೆ ಇನ್ನು ಕಡಿಮೆಯಾಗಿಲ್ಲ. ಅಲ್ಲದೇ ಕ್ಷಯರೋಗದಿಂದ 10.6 ಮಿಲಿಯನ್ ಜನರು ಅನಾರೋಗ್ಯಗೊಂಡಿದ್ದಾರೆ ಎಂದು ಅಧಿಕಾರಿಗಳು ದಾಖಲಿಸಿದ್ದಾರೆ. ಈ ನಡುವೆ 2022ರಲ್ಲಿ 7.5 ಪ್ರಕರಣಗಳು ದಾಖಲಾಗಿದ್ದು, ರೋಗದ ಪತ್ತೆಯಲ್ಲಿ ದೊಡ್ಡ ಅಂತರವಿದೆ ಎಂಬುದು ಈಗಾಗಲೇ ನಮಗೆ ತಿಳಿದಿದೆ ಎಂದು ಆಂಸ್ಟರ್‌ಡ್ಯಾಮ್ ವಿಶ್ವವಿದ್ಯಾಲಯದ ಪ್ರೊ ಫ್ರಾಂಕ್ ಕೊಬೆಲೆನ್ಸ್ ತಿಳಿಸಿದ್ದಾರೆ.
ಕ್ಷಯರೋಗದ ಪತ್ತೆಯ ಆರಂಭಿಕ ಹಂತ ನಿರಂತರ ಕೆಮ್ಮು ಆಗಿದೆ. ಆದರೆ, ಶೇ 80ರಷ್ಟು ಪ್ರಕರಣದಲ್ಲಿ ಕೆಮ್ಮಿನ ಸೂಚನೆ ಕಂಡು ಬಂದಿಲ್ಲ. ಬದಲಾಗಿ ನಂತರದಲ್ಲಿ ರೋಗ ಪತ್ತೆ ಕಂಡು ಬಂದಿದೆ. ಇದರ ಅರ್ಧ ಬಹುಶಃ ಸೋಂಕು ಈಗಾಗಲೇ ಇತರರಿಗೆ ಹರಡಿರುವ ಅಥವಾ ಹರಡಿಲ್ಲದ ಸಾಧ್ಯತೆ ಇರುತ್ತದೆ ಎಂದಿದ್ದಾರೆ.
ಇದಲ್ಲದೆ, 12 ದೇಶಗಳಲ್ಲಿನ ರಾಷ್ಟ್ರೀಯ ಮೇಲ್ವಿಚಾರಣಾ ಯೋಜನೆಗಳ ವಿಶ್ಲೇಷಣೆಯಲ್ಲಿ ಕೂಡ ಇದೇ ರೀತಿಯ ಫಲಿತಾಂಶ ಕಂಡು ಬಂದಿದೆ. ಬಹುತೇಕ ಮಂದಿಯಲ್ಲಿ ಕೆಮ್ಮಿನ ಸೂಚನೆ ಕಂಡು ಬಂದಿಲ್ಲ. ಟಿಬಿ ಹೊಂದಿರುವ ಕಾಲು ಭಾಗದಷ್ಟು ಮಂದಿಯಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಈ ಲಕ್ಷಣ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬಂದಿದೆ.
ಅಷ್ಟೇ ಅಲ್ಲದೇ ಕಾಲು ಭಾಗದಷ್ಟು ರೋಗಿಗಳಲ್ಲಿ ಅಧಿಕ ಮಟ್ಟದ ಬ್ಯಾಕ್ಟೀರಿಯಾಗಳು ಮತ್ತು ಅಧಿಕ ಸೋಂಕು ಕಂಡು ಬಂದಿದೆ.
ಈ ಅಂಶಗಳನ್ನು ಪರಿಗಣಿಸಿದರೆ, ಟಿಬಿ ರೋಗಿಗಳನ್ನು ಹೇಗೆ ಪತ್ತೆ ಮಾಡಬೇಕು ಎಂಬ ಕುರಿತು ಮತ್ತೊಮ್ಮೆ ಯೋಚಿಸುವ ಅಗತ್ಯವಿದೆ. ಸದ್ಯ ಈ ರೋಗದ ಪತ್ತೆಯಲ್ಲಿ ಅನುಸರಿಸುತ್ತಿರುವ ಕ್ರಮ ವಿಶೇಷವಾಗಿ ಕಡಿಮೆ ಸಂಪನ್ಮೂಲದಲ್ಲಿ ರೋಗಿಗಳಲ್ಲಿನ ಟಿಬಿ ಸೋಂಕನ್ನು ಪತ್ತೆ ಮಾಡುವಲ್ಲಿ ಸೋಲುತ್ತಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆ ರೋಗಿಗಳ ಎಕ್ಸ್ ರೇ ಪರೀಕ್ಷೆ, ಹೊಸ ಅಗ್ಗದ ಮತ್ತು ಬಳಸಲು ಸುಲಭವಾದ ಪರೀಕ್ಷೆಗಳ ಅಭಿವೃದ್ಧಿಪಡಿಸುವತ್ತ ಗಮನಹರಿಸಬೇಕಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: 2030ರ ಹೊತ್ತಿಗೆ ಕ್ಷಯರೋಗ ನಿರ್ಮೂಲನೆ: ವಿಶ್ವನಾಯಕರಿಂದ ಸಂಕಲ್ಪ