ಮುಂಬೈ: ಅಪರೂಪದಲ್ಲೇ ಅಪರೂಪ ಎನ್ನುವಂತಹ ಪ್ರಕರಣದಲ್ಲಿ ಹುಟ್ಟಿದ ಮಗು ಈ ಯಾಹವಿ. ಕೇವಲ 23 ವಾರಗಳಲ್ಲೇ ಜನಿಸಿದ ಕಂದಮ್ಮ ಹೊಂದಿದ್ದ ತೂಕ ಕೇವಲ 620 ಗ್ರಾಂ. ಆದರೆ ವೈದ್ಯರ ವಿಶೇಷ ಮುತುವರ್ಜಿ, ಪೋಷಕರ ಆರೈಕೆಯಿಂದಾಗಿ ಇಂದು ಇದೇ ಮಗು ಸಾಮಾನ್ಯ ಮಗುವಿನ ತೂಕ ಪಡೆದಿದ್ದು, ಆರೋಗ್ಯಯುತವಾಗಿದೆ.
ಸಂಪೂರ್ಣ ವಿವರ: ಮುಂಬೈ ಮೂಲದ ಸಂತೋಷ್ ಮತ್ತು ಜಯ್ಪ್ರಕಾಶ್ ದಂಪತಿಗೆ ಯಾಹವಿ ಸೆಪ್ಟೆಂಬರ್ 20, 2023ರಂದು ಜನಿಸಿದ್ದಳು. ಸಂತೋಷ್ 21 ವಾರದ ಗರ್ಭಾವಸ್ಥೆಯಲ್ಲಿದ್ದಾಗ ಮೂತ್ರನಾಳದ ಸೋಂಕಿಗೆ ಗುರಿಯಾಗಿದ್ದು, ಮಲಾಡ್ನ ಕ್ಲೌಡ್ ನೈನ್ ಆಸ್ಪತ್ರೆಗೆ ದಾಖಲಾಗಿದ್ದರು. 23.6 ವಾರವಿದ್ದಾಗ ಸಹಜ ಯೋನಿ ಮೂಲಕವೇ ಮಗುವಿಗೆ ಅವರು ಜನ್ಮ ನೀಡಿದರು. ಈ ರೀತಿ ಜನಿಸಿದ ಮಕ್ಕಳನ್ನು ವೈದ್ಯಕೀಯ ಭಾಷೆಯಲ್ಲಿ ಮೈಕ್ರೋ ಪ್ರೀಮಿಸ್ ಬೇಬಿ ಎನ್ನಲಾಗುತ್ತದೆ.
ತೀರಾ ಅವಧಿ ಪೂರ್ವವಾಗಿ ಜನಿಸಿದ ಯಾಹವಿ ರೆಸ್ಪಿರೆಟೊರಿ ಡಿಸ್ಟ್ರೆಸ್ ಸಿಂಡ್ರೋ (ಉಸಿರಾಟ ಸಮಸ್ಯೆ) ಜತೆಗೆ ಸೌಮ್ಯ ಸೋಂಕಿಗೆ ಒಳಗಾಗಿದ್ದಳು. ಈ ಹಿನ್ನೆಲೆಯಲ್ಲಿ ಮಗುವನ್ನು ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) 88 ದಿನಗಳ ಕಾಲ ಇರಿಸಲಾಯಿತು. ಮಗುವಿಗೆ 50 ದಿನಗಳ ಕಾಲ ವೆಂಟಿಲೇಟರ್ ಬೆಂಬಲ ನೀಡಲಾಯಿತು ಎಂದು ಆಸ್ಪತ್ರೆ ಹೇಳಿಕೆಯಲ್ಲಿ ತಿಳಿಸಿದೆ.
ಮಗುವಿನ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವ ಚಿಕಿತ್ಸೆಯ ಜತೆಗೆ ವೆಂಟಿಲೇಟರ್ ಬೆಂಬಲ ನೀಡಲಾಯಿತು. ಪ್ರೋಟಿನ್, ಲಿಪಿಡ್ ಮತ್ತು ಗ್ಲುಕೋಸ್ ಪೂರಕದ ಪೋಷಕಾಂಶದೊಂದಿಗೆ ತಾಯಿಯ ಎದೆಹಾಲನ್ನು ಫೀಡಿಂಗ್ ಟ್ಯೂಬ್ ಮೂಲಕ ನೀಡಲಾಯಿತು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಪುಟ್ಟ ವಯಸ್ಸಿನಲ್ಲಿಯೇ ಅನೇಕ ಸವಾಲುಗಳನ್ನು ಎದುರಿಸಿ ಯಾಹವಿ ಇಂದು ಗೆದ್ದಿದ್ದಾಳೆ. ಮೈಕ್ರೋ ಪ್ರೀಮಿಸ್ ಮಕ್ಕಳು ದೀರ್ಘಾವಧಿಯ ಶ್ವಾಸಕೋಶ ಸಮಸ್ಯೆ ಎದುರಿಸುತ್ತಾರೆ. ಯಾಹವಿಗೆ ಆಮ್ಲಜನಕ ಪೂರೈಕೆಯನ್ನು ವೆಂಟಿಲೇಟರ್ ಬೆಂಬಲ ನೀಡಲಾಯಿತು. ಇದರಿಂದ ಶ್ವಾಸಕೋಶ ಬೆಳವಣಿಗೆ ಮತ್ತು ಕಾರ್ಯಾಚರಣೆಯನ್ನು ಗಮನಿಸಲಾಯಿತು ಎಂದು ಮಲಾಡ್ನ ಕ್ಲೌಡ್ನೈನ್ ಗ್ರೂಪ್ ಆಫ್ ಹಾಸ್ಪಿಟಲ್‌ನ ಮಕ್ಕಳ ಮತ್ತು ನವಜಾತ ಶಿಶು ತಜ್ಞೆ ತನುಶ್ರೀ ಮುಖರ್ಜಿ ವಿವರಿಸಿದರು.
ಮೈಕ್ರೋ ಪ್ರಿಮೀಸ್ ಮಕ್ಕಳು ಕಡಿಮೆ ಹಿಮೋಗ್ಲೋಬಿನ್ ಸಂಗ್ರಹ ಹೊಂದಿರುತ್ತವೆ. ಈ ಹಿನ್ನೆಲೆಯಲ್ಲಿ ಯಾಹವಿಗೆ ಎರಡು ರಕ್ತ ವರ್ಗಾವಣೆ ನಡೆಸಲಾಗಿದ್ದು, ಆಕೆಯ ಬೋನ್ ಮ್ಯಾರೋ (ಅಸ್ಥಿ ಮಜ್ಜೆ) ಬಲಗೊಳ್ಳಬೇಕಿದೆ. ಇದಾದ ಬಳಿಕ ಆಕೆಯ ಮಿದುಳಿನಲ್ಲಿ ಸಣ್ಣ ಹ್ಯಾಮೋರೆಜ್ ಅಲ್ಟ್ರಾಸೊನೊಗ್ರಾಫಿಯಲ್ಲಿ ಪತ್ತೆಯಾಗಿದ್ದು, ಇದಕ್ಕೆ ಚಿಕಿತ್ಸೆ ನೀಡಲಾಗಿದೆ. ಈ ಎಲ್ಲಾ ಕಷ್ಟಗಳನ್ನು ದಾಟಿ ಯಾಹವಿ ಅದ್ಬುತವಾಗಿ ಆರೋಗ್ಯದಲ್ಲಿ ಪ್ರಗತಿ ಸಾಧಿಸಿದಳು. ಕೆಲವು ವಾರಗಳ ಬಳಿಕ ತೂಕವೂ ಹೆಚ್ಚಾಯಿತು ಎಂದು ವೈದ್ಯರು ಹೇಳಿದ್ದಾರೆ.
88 ದಿನಗಳ ಆಸ್ಪತ್ರೆ ವಾಸದ ಬಳಿಕ ಮನೆ ಸೇರಿರುವ ಮಗು ಇದೀಗ 2.2 ಕೆ.ಜಿ ತೂಕ ಹೊಂದಿದ್ದು, ಬಾಯಿ ಮೂಲಕ ಆಹಾರ ಜತೆಗೆ ಸ್ತನಪಾನವನ್ನೂ ಮಾಡುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.(ಐಎಎನ್ಎಸ್)
ಇದನ್ನೂ ಓದಿ: ಸ್ವಾಪ್ ಕಿಡ್ನಿ ಟ್ರಾನ್ಸ್ಪ್ಲಾಂಟೇಶನ್' ಮೂಲಕ ಮೂತ್ರಪಿಂಡ ಕಸಿ ಚಿಕಿತ್ಸೆಗೆ ಹೊಸ ರೂಪ; ಮಣಿಪಾಲ್ ಆಸ್ಪತ್ರೆ ಮಹತ್ವದ ಹೆಜ್ಜೆ