ಕನ್ನಡ ಚಿತ್ರರಂಗದ ಭರವಸೆಯ ನಟ ವಿನೋದ್ ಪ್ರಭಾಕರ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತಾನಾಯ್ತು ತನ್ನ ಕೆಲಸವಾಯ್ತು ಎನ್ನುತ್ತಾ ಸಿನಿಮಾದಿಂದ ಸಿನಿಮಾಕ್ಕೆ ಸಾಗುವ ಮೂಲಕ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿರುವ ತಾರೆ. 44ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಬಹುಬೇಡಿಕೆ ನಟನಿಗೆ ಕುಟುಂಬಸ್ಥರು, ಸಿನಿ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಜನ್ಮದಿನ ಹಿನ್ನೆಲೆ ಎರಡು ದಿನಗಳ ಹಿಂದೆ ತಮ್ಮ ಮೆಚ್ಚಿನ ನಟನನ್ನು ನೋಡಿ ಶುಭ ಹಾರೈಸಲು ವಿನೋದ್ ಪ್ರಭಾಕರ್ ನಿವಾಸದ ಬಳಿ ಅಪಾರ ಸಂಖ್ಯೆಯ ಅಭಿಮಾನಿಗಳು ಬಂದು ಸೇರಿದ್ದರು.
ಪಾತ್ರಕ್ಕೆ ತಕ್ಕನಾದ ತಯಾರಿ, ಉತ್ತಮ ಅಭಿನಯ ಮಾಡುತ್ತಾ ಮರಿ ಟೈಗರ್ ವಿನೋದ್ ಪ್ರಭಾಕರ್ ಕನ್ನಡ ಸಿನಿಮಾ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಂದಿಗೂ ಟೈಗರ್ ಪ್ರಭಾಕರ್ ಅವರಿಗೆ ಘರ್ಜಿಸುವ ಅಭಿಮಾನಿಗಳಿದ್ದಾರೆ. ಟೈಗರ್ ಪ್ರಭಾಕರ್ ಅವರ ಹುಲಿಯಂತ ಅಭಿಮಾನಿಗಳಿಗೆ ಆಶಾ ಕಿರಣದಂತೆ ತಂದೆಗೆ ತಕ್ಕ ಮಗನಾಗಿ, ಹಿರಿಯರನ್ನು ಗೌರವಿಸುತ್ತಾ, ಕಿರಿಯರನ್ನು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಸ್ನೇಹಿತರ ಪಾಲಿಗೆ ಒಳ್ಳೆಯ ಮಿತ್ರನಾಗಿ ಕರುನಾಡಲ್ಲಿ ಹೆಸರು ಸಂಪಾದಿಸಿದ್ದಾರೆ.
ಕಳೆದ 22 ವರ್ಷಗಳಿಂದ ದಿಲ್ ಸೇ ಫೈಟರ್ ಆಗಿ ಬೆಳೆಯುತ್ತಿರುವ ವಿನೋದ್ ಪ್ರಭಾಕರ್ ಅವರ ಹುಟ್ಟು ಹಬ್ಬಕ್ಕೆ ಇಂದು ಬಲರಾಮನ ದಿನಗಳು ಚಿತ್ರತಂಡ ಒಂದು ಖಡಕ್ ಪೋಸ್ಟರ್ ಅನಾವರಣಗೊಳಿಸಿ ಬರ್ತ್ಡೇ ಗಿಫ್ಟ್ ನೀಡಿದೆ.
ಇದನ್ನೂ ಓದಿ: ಐಶ್ವರ್ಯಾಗೆ ಹಾಗಲಕಾಯಿ ತಿನ್ನೋ ಶಿಕ್ಷೆ ಕೊಟ್ಟ ಶಿಶಿರ್: ಸ್ನೇಹಿತೆಯ ಪರಿಸ್ಥಿತಿ ಕಂಡು ಕಣ್ಣೀರು
'ಬಲರಾಮನ ದಿನಗಳು'... ಈ ಟೈಟಲ್ಲೇ ಒಂದು ಕುತೂಹಲ. ಅದ್ರಲ್ಲೂ ಕಟ್ಟುಮಸ್ತಾದ ವಿನೋದ್ ಪ್ರಭಾಕರ್ ಅವರಿಗಂತೂ ಹೇಳಿ ಮಾಡಿಸಿದ ಶೀರ್ಷಿಕೆ. ಆ ದಿನಗಳು ಖ್ಯಾತಿಯ ಕೆ.ಎಂ. ಚೈತನ್ಯ ಸಾರಥ್ಯದ ಬಲರಾಮನ ದಿನಗಳು ಸಿನಿಮಾ ಮುಹೂರ್ತದ ಸಂದರ್ಭದಲ್ಲಿ ಸದ್ದು ಮಾಡಿತ್ತು. ಇದೀಗ ಶೂಟಿಂಗ್ ಕೆಲಸ ಕಾರ್ಯಗಳು ಸಾಗಿದೆ. ಜೊತೆಗೆ, ತನ್ನ ಹೀರೋ ಬಲರಾಮನ ಬರ್ತ್ಡೇಗೆ ಒಂದು ಸೊಗಸಾದ ಗಿಫ್ಟ್ ನೀಡಿ ಇಡೀ ಚಿತ್ರತಂಡ ವಿಶ್ ಮಾಡಿದೆ. ಈ ಪೋಸ್ಟರ್ ಅಭಿಮಾನಿಗಳ ಕುತೂಹಲ ಕೆರಳಿಸುವ ಜೊತೆ ಜೊತೆಗೆ ಖುಷಿ ಕೂಡ ನೀಡಿದೆ. ಬಲರಾಮನ ದಿನಗಳು ಸಿನಿಮಾಗೆ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್, ಕಬಾಲಿ ಮತ್ತು ಕಲ್ಕಿ ಸಿನಿಮಾ ಖ್ಯಾತಿಯ ಸಂತೋಷ್ ನಾರಾಯಣ್ ಸಂಗೀತ ನೀಡುತ್ತಿರೋದು ವಿಶೇಷ.
ಇದನ್ನೂ ಓದಿ: 'ಪ್ರೀತಿ ಪಡೆಯಲು ಮತ್ತೆ ಬರುವೆ': ಬಿಗ್ ಬಾಸ್ನಿಂದ ಹೊರಬಂದು ಸುದೀಪ್, ಕನ್ನಡಿಗರಿಗೆ ಶೋಭಾ ಶೆಟ್ಟಿ ಪತ್ರ
ಇಂದು ವಿನೋದ್ ಪ್ರಭಾಕರ್ ಅವರು ತಮ್ಮ ಅಭಿಮಾನಿಗಳಿಗೆ ದರ್ಶನ ಕೊಟ್ಟಿಲ್ಲ. ಆದ್ರೆ ಎರಡು ದಿನಗಳ ಮುನ್ನವೇ ತಮ್ಮ ಕತ್ರಿಗುಪ್ಪೆ ನಿವಾಸದಲ್ಲಿ ಅಭಿಮಾನಿಗಳನ್ನು ಭೇಟಿಯಾಗಿದ್ದರು 'ನವಗ್ರಹ'ದ ಟೋನಿ. ಬಲರಾಮನ ದಿನಗಳು ಸಿನಿಮಾದ ಜೊತೆಗೆ ನೆಲ್ಸನ್ ಚಿತ್ರದ ಶೂಟಿಂಗ್ನಲ್ಲೂ ಬ್ಯುಸಿ ಇದ್ದಾರೆ ವಿನೋದ್ ಪ್ರಭಾಕರ್. ಮಾದೇವ ಸಿನಿಮಾದ ಮೂಲಕ ಶೀಘ್ರದಲ್ಲೇ ಚಿತ್ರಮಂದಿರ ಪ್ರವೇಶಿಸಲಿದ್ದಾರೆ. ಜೊತೆಗೆ 'ಲಂಕಾಸುರ'ನಾಗಿಯೂ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಆಶೀರ್ವಾದ ಬಯಸಿ ಬರಲಿದ್ದಾರೆ ಬರ್ತ್ಡೇ ಬಾಯ್ ವಿನೋದ್ ಪ್ರಭಾಕರ್.