ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾದ್ ಷಾ ಬರ್ತ್ಡೇ ಅಂಗವಾಗಿ ಬಹುನಿರೀಕ್ಷಿತ 'ಬಿಲ್ಲ ರಂಗ ಭಾಷಾ' ಚಿತ್ರದ ಟೈಟಲ್ ಲೋಗೋ ಹಾಗೂ ಕಾನ್ಸೆಪ್ಟ್ ವಿಡಿಯೋವನ್ನು ಅನಾವರಣಗೊಳಿಸಲಾಗಿದೆ. ಅಭಿಮಾನಿಗಳಿಗಿದು ಸ್ಪೆಷಲ್ ಟ್ರೀಟ್ ಅಂತಲೇ ಹೇಳಬಹುದು.
ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಮೂಡಿಬಂದಿರುವ ಫಸ್ಟ್ ಗ್ಲಿಂಪ್ಸ್ನಲ್ಲಿ ನಾನಾ ವಿಷಯಗಳನ್ನು ಖ್ಯಾತ ನಿರ್ದೇಶಕ ಅನೂಪ್ ಭಂಡಾರಿ ಕಟ್ಟಿಕೊಟ್ಟಿದ್ದಾರೆ. ಲಿಬರ್ಟಿ ಪ್ರತಿಮೆ, ಐಫೆಲ್ ಟವರ್ ಮತ್ತು ತಾಜ್ ಮಹಲ್ ಅನ್ನು ವಿಡಿಯೋದಲ್ಲಿ ತೋರಿಸಿರುವ ಅವರು ಭವಿಷ್ಯದ ಕಥೆ ಹೇಳಲು ಹೊರಟ್ಟಿದ್ದಾರೆ. 'Once Upon A Time in 2209 AD' ಎಂದು ಶುರುವಾಗುವ ಝಲಕ್ ಬಹಳ ಕುತೂಹಲಕಾರಿಯಾಗಿದೆ. ಕಥೆ ಏನಿರಬಹುದು ? ಅನೂಪ್ ಹೇಳಲೊರಟಿರುವ ಭವಿಷ್ಯದ ಕಥಾ ಹಂದರವೇನು? ಎಂಬ ಕುತೂಹಲ ನೋಡುಗನಲ್ಲಿದೆ.
‘A Tale From The Future’ Presenting the Official Title Logo and Concept video of Billa Ranga Baasha - First Blood.@anupsbhandari @primeshowtweets @Niran_Reddy @chaitanyaniran @BRBmovie #BRBFirstBlood #BRBMovie pic.twitter.com/iRabUt6NlC
— Kichcha Sudeepa (@KicchaSudeep) September 2, 2024
ಸುದೀಪ್ ಅವರೇ ಹೇಳಿಕೊಂಡಿರುವಂತೆ 'ಬಿಲ್ಲ ರಂಗ ಭಾಷಾ' ಅವರ ಸಿನಿಕರಿಯರ್ನ ಬಿಗ್ ಬಜೆಟ್ ಚಿತ್ರ. ಟಾಲಿವುಡ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಹನುಮಾನ್'ನ ನಿರ್ಮಾಪಕರಾದ ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಅವರು ಸೂಪ್ ಮುಖ್ಯಭೂಮಿಕೆಯ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ತಮ್ಮದೇ ಪ್ರೈಮ್ ಶೋ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
![Sudeep](https://etvbharatimages.akamaized.net/etvbharat/prod-images/02-09-2024/kn-bng-05-abhimanigalli-kuthuhala-huttisida-billranghabhasha-7204735_02092024133805_0209f_1725264485_328.jpg)
ವಿಡಿಯೋ ಅಭಿಮಾನಿಗಳು "ಅಪ್ಡೇಟ್ ಬೇಕು ಬಾಸ್" ಎಂದು ಹೇಳುತ್ತಿರುವ ದೃಶ್ಯದಿಂದ ಆರಂಭವಾಗುತ್ತದೆ. "ಬಾಸ್ ಅಪ್ಡೇಟ್ ಬಾಸ್", "ಅಪ್ಡೇಟ್ ಬೇಕು ಬಾಸ್" ಎಂಬೆಲ್ಲಾ ಧ್ವನಿ ಕೇಳುತ್ತಿದೆ. ಇದನ್ನು ನಟ ಕೇಳಿಸಿಕೊಳ್ಳುತ್ತಿರುವಂತೆ ಚಿತ್ರಿಸಲಾಗಿದೆ. ತಕ್ಷಣ ವಿಡಿಯೋದಲ್ಲಿ ಅನೂಪ್ ಭಂಡಾರಿ ಅವರು ಪುಸ್ತಕ ಓದುವಂತೆ ಕಾಣಿಸಿಕೊಳ್ಳುತ್ತಾರೆ. ನಂತರ ಆ ಪುಸ್ತಕದಲ್ಲಿ 'ಬಿಲ್ಲ ರಂಗ ಭಾಷಾ' ತಂಡದ ಕುರಿತು ವಿವರ ದೊರಕುತ್ತದೆ. "ಹನುಮಾನ್ ನಿರ್ಮಾಪಕರಿಂದ, ರಂಗಿತರಂಗ, ರಾಜರಥ, ವಿಕ್ರಾಂತ್ ರೋಣ ನಿರ್ದೇಶಕರಿಂದ ಬಿಲ್ಲ ರಂಗ ಭಾಷಾ ಸಿನಿಮಾ" ಬರಲಿದೆ ಎಂಬ ಅಂಶಗಳನ್ನು ಈ ವಿಡಿಯೋ ಒಳಗೊಂಡಿದೆ.
ತಮ್ಮ ಮುಂಬರುವ ಚಿತ್ರದ ಬಗ್ಗೆ ಮಾತನಾಡಿರುವ ನಿರ್ದೇಶಕ ಅನೂಪ್ ಭಂಡಾರಿ, ''ವಿಕ್ರಾಂತ್ ರೋಣ ಸಿನಿಮಾ ನಂತರ ಹನುಮಾನ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದ ಸಮಯದಲ್ಲಿ ನಿರ್ಮಾಪಕರಾದ ನಿರಂಜನ್ ರೆಡ್ಡಿ ಅವರು ನನ್ನನ್ನು ಭೇಟಿಯಾದರು. ನಾನು ಸುದೀಪ್ ಸರ್ಗೆ ಸಿನಿಮಾ ಮಾಡುತ್ತಿರುವ ವಿಷಯ ಹಾಗೂ ಬಿಲ್ಲ ರಂಗ ಭಾಷಾ ಕಥೆ ಕೇಳಿದ ಅವರು ಸಖತ್ ಎಕ್ಸೈಟ್ ಆದರು. ನಂತರ ಅದ್ಧೂರಿಯಾಗಿ ಈ ಚಿತ್ರ ನಿರ್ಮಾಣ ಮಾಡುವುದಾಗಿ ತಿಳಿಸಿದರು. ಸುದೀಪ್ ಸರ್ ಜೊತೆ ಕೆಲಸ ಮಾಡುವುದು ಒಂದು ಅದ್ಭುತ ಅನುಭವ. ಪ್ರೇಕ್ಷಕರು ವಿಕ್ರಾಂತ್ ರೋಣನನ್ನು ಇಷ್ಟಪಟ್ಟಿದ್ದಾರೆ. ಸುದೀಪ್ ಸರ್ ಈ ಚಿತ್ರವನ್ನು ದೊಡ್ಡ ಚಿತ್ರ ಎಂದು ಹೇಳಿದ್ದು, ನನ್ನ ಜವಾಬ್ದಾರಿ ಹೆಚ್ಚಿಸಿದೆ'' ಎಂದು ತಿಳಿಸಿದರು.
ನಿರ್ಮಾಪಕ ನಿರಂಜನ್ ರೆಡ್ಡಿ ಮಾತನಾಡಿ, ''ಸುದೀಪ್ ಸರ್ ಜೊತೆ ಅನೂಪ್ ಕೈ ಜೋಡಿಸಿದ್ದಾರೆ ಎಂದಾಗ ನಾವು ಉತ್ಸುಕರಾದೆವು. ತೆಲುಗಿನಲ್ಲಿ ವಿಕ್ರಾಂತ್ ರೋಣ ಅದ್ಭುತ ಯಶಸ್ಸು ಕಂಡಿದೆ. ಬಿಲ್ಲ ರಂಗ ಭಾಷಾ ಕಥೆ ಕೇಳಿದಾಗ ನಾವೇ ಚಿತ್ರ ನಿರ್ಮಾಣ ಮಾಡಬೇಕು ಎಂದುಕೊಂಡೆವು. ಕಿಚ್ಚ ಸುದೀಪ್ ಸರ್ ಜೊತೆ ಕೆಲಸ ಮಾಡೋದು ಒಂದೊಳ್ಳೆ ಅವಕಾಶವಾಗಿದ್ದು, ಬಿಲ್ಲ ರಂಗ ಭಾಷಾ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಅದ್ಭುತ ಪ್ರಪಂಚ ಪರಿಚಯಿಸುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಹುಭಾಷೆಗಳಲ್ಲಿ ಮೂಡಿ ಬರಲಿದ್ದು, ಶೀಘ್ರದಲ್ಲೇ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ ಚಿತ್ರತಂಡ.