ಬೆಂಗಳೂರು: ಖಾಸಗಿ ಫೋಟೋ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ ಆರೋಪ ಸಂಬಂಧ ಕಿರುತೆರೆ ನಟನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಯುವತಿಯೀಗ ಉಲ್ಟಾ ಹೊಡೆದಿದ್ದಾರೆ.
ನಗರ ಪಶ್ಚಿಮ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ ಮಾಜಿ ಗೆಳತಿ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು. ಈ ನಡುವೆ ಹೊಸ ಬಾಂಬ್ ಸಿಡಿಸಿರುವ ಯುವತಿ, ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳಾಗಿದ್ದು, ಇದನ್ನ ಹರಡಬೇಡಿ ಎಂದು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಶೇರ್ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲೇನಿದೆ ? ''ಮಾಧ್ಯಮಗಳ ಮೂಲಕ ನೀವು ನೋಡುತ್ತಿರುವುದು ಸುಳ್ಳು ಮಾಹಿತಿಯಾಗಿದೆ. ಇನ್ಸ್ಟಾಗ್ರಾಮ್ ಪ್ರೊಫೈಲ್ ಹಾಗೂ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಿಂದ ಎಲ್ಲಾ ನಕಲಿ ರೀಲ್ಗಳನ್ನು ತೆಗೆದುಹಾಕುವುದರ ಕುರಿತು.. ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ..'' ಎಂದು ಯುವತಿ ಬರೆದುಕೊಂಡಿದ್ದಾರೆ.
ಪ್ರಕರಣ ಸಂಬಂಧ ವರುಣ್ ಆರಾಧ್ಯ ಹಾಗೂ ಯುವತಿಯನ್ಜು ಪಶ್ಚಿಮ ವಿಭಾಗದ ಎಸಿಪಿ ಉಷಾರಾಣಿ ಅವರು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ವರುಣ್ ಮೊಬೈಲ್ ವಶಕ್ಕೆ ಪಡೆದು ರಿಟ್ರೀವ್ ಮಾಡಿದಾಗ ಖಾಸಗಿ ಫೋಟೋ ಅಥವಾ ವಿಡಿಯೋ ದೊರೆತಿಲ್ಲ. ಈ ಬಗ್ಗೆ ದೂರುದಾರ ಯುವತಿಯನ್ನು ಪ್ರಶ್ನಿಸಿದಾಗ ತಪ್ಪು ತಿಳುವಳಿಕೆಯಿಂದ ವರುಣ್ ವಿರುದ್ಧ ದೂರು ನೀಡಿದ್ದೇನೆ. ಹೀಗಾಗಿ ಕೂಡಲೇ ದೂರನ್ನು ಹಿಂಪಡೆಯುವುದಾಗಿ ಯುವತಿ ತಿಳಿಸಿರುವುದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ತಮ್ಮ ಆರೋಪ ಕುರಿತಂತೆ ವಿಡಿಯೋ ಮಾಡಿ ಸ್ಪಷ್ಟನೆ ನೀಡಿರುವ ನಟ ವರುಣ್ ಆರಾಧ್ಯ, ಕಳೆದ ನಾಲ್ಕೂವರೆ ವರ್ಷಗಳಿಂದ ಜೊತೆಗಿದ್ದು ಈ ಅವಧಿಯಲ್ಲಿ ಸಾಕಷ್ಟು ರೀಲ್ಸ್ ವಿಡಿಯೋ ಮಾಡಿದ್ದೆ. ಬ್ರೇಕಪ್ ಆದ ಬಳಿಕ ವಿಡಿಯೋಗಳನ್ನು ಡಿಲೀಟ್ ಮಾಡಿದ್ದೆ. ಕೆಲ ವಿಡಿಯೋಗಳನ್ನು ಸಮಯದ ಕೊರತೆಯಿಂದ ಡಿಲೀಟ್ ಮಾಡಲು ಆಗಿರಲಿಲ್ಲ. ಕೆಲ ಅಭಿಮಾನಿಗಳು ಇದೇ ವಿಡಿಯೋಗಳನ್ನು ರೀ ಪೋಸ್ಟ್ ಮಾಡುತ್ತಿದ್ದರು. ತಪ್ಪು ತಿಳುವಳಿಕೆಯಿಂದ ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ಪೊಲೀಸರು ನನ್ನನ್ನು ಕರೆಸಿ ಆಕೆಯೊಂದಿಗೆ ಮಾಡಿದ ರೀಲ್ಸ್ ವಿಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾರೆ. ಅಲ್ಲದೇ ಯಾವುದೇ ಯುವತಿಯ ಖಾಸಗಿ ಫೋಟೋ ಹಾಗೂ ವಿಡಿಯೋ ಇಲ್ಲದಿರುವುದನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ. ಹೀಗಾಗಿ ತನ್ನ ಮೇಲಿನ ಬಂದ ಆರೋಪ ಶುದ್ಧ ಸುಳ್ಳಾಗಿದೆ ಎಂದು ಯೂಟ್ಯೂಬ್ ಪೇಜ್ನಲ್ಲಿ ಸ್ಟಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಅನಿಲ್ ಅಂತ್ಯಸಂಸ್ಕಾರ: ಮಲೈಕಾ ಫ್ಯಾಮಿಲಿ, ಎರಡನೇ ಪತ್ನಿಯೊಂದಿಗೆ ಅರ್ಬಾಜ್ ಖಾನ್ ಅಂತ್ಯಕ್ರಿಯೆಯಲ್ಲಿ ಭಾಗಿ - Anil Last Rites