ಪ್ರತಿಷ್ಠಿತ ''ವಿಶ್ವ ಸುಂದರಿ ಸ್ಪರ್ಧೆ'' ಭಾರತದಲ್ಲಿ ಜರುಗುತ್ತಿದೆ. 28 ವರ್ಷಗಳ ಸುದೀರ್ಘ ಅಂತರದ ಬಳಿಕ ಭಾರತ ಈ ಸ್ಪರ್ಧೆಗೆ ವೇದಿಕೆ ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ 71ನೇ ಆವೃತ್ತಿ ಫೆಬ್ರವರಿ 18ರಂದು ಪ್ರಾರಂಭವಾಗಿದ್ದು, ಇದೇ ಮಾರ್ಚ್ 9ರ ವರೆಗೆ ನಡೆಯಲಿದೆ. ಕನ್ನಡತಿ ಸಿನಿ ಶೆಟ್ಟಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
'ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022' ಮತ್ತು 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿಯಾಗಿರುವ ಸಿನಿ ಶೆಟ್ಟಿ ಅವರು ಸ್ಪರ್ಧೆಯ ಸಂದರ್ಭ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಸುಪ್ರಸಿದ್ಧ ಹಾಡುಗಳಿಗೆ ಅದ್ಭುತ ನೃತ್ಯ ಮಾಡೋ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. 1994ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಐಶ್ವರ್ಯಾ ರೈ ಅವರು ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಅಲಂಕರಿಸಿದ್ದಾರೆ. ಅವರ ಮಹತ್ವದ ಕ್ಷಣಕ್ಕೆ ಮೂರು ದಶಕಗಳ ಸಂಭ್ರಮ. ಈ ಹೊತ್ತಿನಲ್ಲಿ ''ವಿಶ್ವ ಸುಂದರಿ ಸ್ಪರ್ಧೆ'' ಭಾರತದಲ್ಲೇ ಜರುಗುತ್ತಿರೋದು ಹೆಮ್ಮೆಯ ವಿಷಯವೇ ಸರಿ.
71ನೇ ವಿಶ್ವ ಸುಂದರಿ ಸ್ಪರ್ಧೆಯ 'ಟ್ಯಾಲೆಂಟ್ ಫೈನಲ್ಸ್' ರೌಂಡ್ನಲ್ಲಿ ಸಿನಿ ಶೆಟ್ಟಿ ಅವರ ಪ್ರದರ್ಶನವು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರಿಗೆ ಸಲ್ಲಿಸಿದ ಗೌರವವಾಗಿದೆ. ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾದ ನಿಂಬೂಡಾ, ತಾಲ್ ಚಿತ್ರದ ತಾಲ್ ಸೆ ತಾಲ್ ಮಿಲಾ ಮತ್ತು ಬಂಟಿ ಔರ್ ಬಬ್ಲಿ ಸಿನಿಮಾದ ಕಜ್ರಾ ರೇ ಸೇರಿದಂತೆ ಹಲವು ಹಾಡುಗಳಿಗೆ ಆಕರ್ಷಕ ಪ್ರದರ್ಶನ ನೀಡಿದರು.
ಇದನ್ನೂ ಓದಿ: 'ಮೈದಾನ್' ವಿಡಿಯೋ ಹಂಚಿಕೊಂಡ ಅಜಯ್ ದೇವ್ಗನ್; ಹೆಚ್ಚಿದ ಸಿನಿಪ್ರಿಯರ ಕುತೂಹಲ
ಸೋಷಿಯಲ್ ಮೀಡಿಯಾದಲ್ಲಿ ಸಿನಿ ಶೆಟ್ಟಿ ತಮ್ಮ ಸ್ಪರ್ಧೆಯ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಐಶ್ವರ್ಯಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರು ತಮ್ಮ ಮೇಲೆ ಬೀರಿರೋ ಪ್ರಭಾವವನ್ನು ಬಹಿರಂಗಪಡಿಸಿದರು. ಅಲ್ಲದೇ ಐಶ್ವರ್ಯಾ ಬಾಲಿವುಡ್‌ನಲ್ಲಿ ಪ್ರತಿಭೆಯ ಸಂಕೇತವೆಂದು ವಿವರಿಸಿದರು. ಭಾರತೀಯ ಶಾಸ್ತ್ರೀಯ ಮತ್ತು ಬಾಲಿವುಡ್ ನೃತ್ಯ ಶೈಲಿಗಳನ್ನು ಸಂಯೋಜಿಸಿ ಸಿನಿ ಶೆಟ್ಟಿ ಡ್ಯಾನ್ಸ್ ಮಾಡಿದ್ದು, ಇದು ಐಶ್ವರ್ಯಾ ಅವರ ಪರಂಪರೆಗೆ ಸಂದ ಗೌರವವಾಗಿದೆ.
ಇದನ್ನೂ ಓದಿ: ಜಾಹ್ನವಿ ಜನ್ಮದಿನ: ರಾಮ್ ಚರಣ್ ಜೊತೆ ಹೊಸ ಸಿನಿಮಾ- ಅಧಿಕೃತ ಘೋಷಣೆ
ಐಶ್ವರ್ಯಾ ರೈ ಬಚ್ಚನ್ ಅವರಿಗೆ ಸಿನಿ ಶೆಟ್ಟಿ ಗೌರವ ಸಲ್ಲಿಸಿದ ರೀತಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಅನೇಕರು ಅವರ ಪ್ರತಿಭೆಯನ್ನು ಶ್ಲಾಘಿಸಿದರು. ಜೊತೆಗೆ ಬಾಲಿವುಡ್‌ನಲ್ಲಿ ಉಜ್ವಲ ಭವಿಷ್ಯ ಇದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೆಟ್ಟಿಯ ನೃತ್ಯ ಕೌಶಲ್ಯ ಶ್ಲಾಘಿಸಿ, ಬಾಲಿವುಡ್ ಸೂಪರ್ ಸ್ಟಾರ್ ಆಗೋ ಎಲ್ಲಾ ಲಕ್ಷಣಗಳಿವೆ ಎಂಬರ್ಥದಲ್ಲಿ ಕಾಮೆಂಟ್‌ಗಳು ಹರಿದುಬಂದಿವೆ. ಮಾರ್ಚ್ 9ರಂದು ಮುಂಬೈನಲ್ಲಿ ನಡೆಯಲಿರುವ ವಿಶ್ವ ಸುಂದರಿ 2024 ಫಿನಾಲೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.