ಹೈದರಾಬಾದ್: ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಸಂಗೀತ್ ಕಾರ್ಯಕ್ರಮದಲ್ಲಿ ವಿಶ್ವವಿಖ್ಯಾತ ಗಾಯಕ ಜಸ್ಟಿನ್ ಬೀಬರ್ ಲೈವ್ ಗಾಯನ ಪ್ರದರ್ಶನ ನೀಡಿದ್ದು, ತಮ್ಮ ಅದ್ಭುತ ಗಾಯನದ ಮೂಲಕ ವೇದಿಕೆಯನ್ನು ರಂಗೇರಿಸಿದ್ದಾರೆ. ಮುಂಬೈಯಲ್ಲಿ ಶುಕ್ರವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಕೆನಡಾದ ಪಾಪ್ಸ್ಟಾರ್ ನೀಡಿದ ಪ್ರದರ್ಶನದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮುಂದಿನ ಶುಕ್ರವಾರ ಹಸೆಮಣೆಯೇರಲಿದ್ದು, ಅದ್ಧೂರಿ ವಿವಾಹಪೂರ್ವ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿವೆ. ಶುಕ್ರವಾರ ರಾತ್ರಿ ಆಯೋಜಿಸಿದ್ದ ಸಂಗೀತ್ ಕಾರ್ಯಕ್ರಮದಲ್ಲಿ ಸಿನಿಮಾ, ಉದ್ಯಮ, ರಾಜಕೀಯ ಸೇರಿದಂತೆ ಎಲ್ಲ ವರ್ಗದ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಇದರೊಂದಿಗೆ ಸಂಗೀತ್ ಕಾರ್ಯಕ್ರಮದಲ್ಲಿ ವಿಶ್ವವಿಖ್ಯಾತ ಗಾಯಕ ಜಸ್ಟಿನ್ ಬೀಬರ್ ಅದ್ಭತ ಹಾಡುಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಕಳೆ ತಂದಿದೆ.
ಜಸ್ಟಿನ್ ಹಾಡುತ್ತಿರುವ ಸಂದರ್ಭದಲ್ಲಿ ಜಾವೇದ್ ಜಾಫೆರಿ ಅವರ ಮಗಳು ಅಲವಿಯಾ ಜಾಫೆರಿ, ಜಸ್ಟಿನ್ ಅವರನ್ನು ಪ್ರೀತಿಯಿಂದ ತಬ್ಬಿಕೊಳ್ಳುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋ ಹಂಚಿಕೊಂಡಿರುವ ಅಲವಿಯಾ ಜಾಫೇರಿ ಕೂಡ, ಜಸ್ಟಿನ್ ಬೀಬರ್ ಅವರ ಬಗೆಗಿನ ತಮ್ಮ ದೀರ್ಘಕಾಲದ ಅಭಿಮಾನದ ಬಗ್ಗೆ ಬರೆದುಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ಮುಂಬೈಗೆ ಬಂದಿಳಿದ ಜಸ್ಟಿನ್ ಬೀಬರ್ ರಾತ್ರಿ ಸಂಗೀತ್ ಕಾರ್ಯಕ್ರಮದ ನಂತರ ಶೀಘ್ರವೇ ಮತ್ತೆ ಅಮೆರಿಕಕ್ಕೆ ಮರಳಿದ್ದಾರೆ. 2017ರಲ್ಲಿ ಭಾರತದಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ಲಿಪ್ - ಸಿಂಕ್ಗಾಗಿ ಟೀಕೆಯನ್ನು ಎದುರಿಸಿದ್ದ ಬೈಬರ್, ನೆವರ್ ಲೆಟ್ ಯು ಗೋ, ಲವ್ ಯುವರ್ಸೆಲ್ಫ್ ಹಾಗೂ ಸಾರಿ ಮುಂತಾದ ಹಿಟ್ ಹಾಡುಗಳೊಂದಿಗೆ ಮತ್ತೆ ಕಮ್ ಬ್ಯಾಕ್ ಮಾಡಿದವರು. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಸಂಗೀತ್ ಕಾರ್ಯಕ್ರಮದಲ್ಲಿ ಜಸ್ಟಿನ್ ಬೀಬರ್ ಲೈಬ್ ಪ್ರದರ್ಶನ ಪ್ರೇಕ್ಷಕರಿಗೆ ಜೋಶ್ ನೀಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳಿಗೆ ಇಂಟರ್ನೆಟ್ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿದ್ದು, ಕೆಲವರು ಜಸ್ಟಿನ್ ವಿಶಿಷ್ಠ ಶೈಲಿಯ ಸಂಗೀತವನ್ನು ಹೊಗಳಿದರೆ, ಇನ್ನೂ ಕೆಲವರು ಅವರ ಹಾಡುಗಳು ಸಾಂಪ್ರದಾಯಿಕ ಸಂಗೀತ ವಾತಾವರಣಕ್ಕೆ ಸರಿಸಾಟಿಯಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಸ್ಟಾರ್- ಸ್ಟಡ್ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಆಲಿಯಾ ಭಟ್, ರಣಬೀರ್ ಕಪೂರ್, ಸಲ್ಮಾನ್ ಖಾನ್, ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ, ಕ್ರಿಕೆಟಿಗರಾದ ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಬಾಲಿವುಡ್ ತಾರೆಗಳು ಜಮಾಯಿಸಿದ್ದರು.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈನ ಬಾಂದ್ರಾದ ಜಿಯೋ ಕನ್ವೆನ್ಷನ್ ಸೆಂಟರ್ನಲ್ಲಿ ವಿವಾಹವಾಗಲಿದ್ದಾರೆ. ಅದಕ್ಕೂ ಮುನ್ನ ರಿಹಾನ್ನಾ, ದಿಲ್ಜಿತ್ ದೋಸಾಂಜ್ ಮತ್ತು ಕೇಟಿ ಪೆರಿಯಂತಹ ಜಾಗತಿಕ ತಾರೆಗಳ ಖಾಸಗಿ ಸಂಗೀತ ಕಾರ್ಯಕ್ರಮಗಳನ್ನು ಒಳಗೊಂಡ ಅದ್ಧೂರಿ ವಿವಾಹಪೂರ್ವ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ: ಅಂಬಾನಿ ಸಂಗೀತ ಸಮಾರಂಭದಲ್ಲಿ ಬಾಲಿವುಡ್, ಕ್ರಿಕೆಟ್ ತಾರೆಯರು: ವಿಡಿಯೋ ಇಲ್ಲಿದೆ - Anant Radhika Sangeet Night