ಕನ್ನಡ ಚಿತ್ರರಂಗಕ್ಕೆ ಹೊಸಬರ ಆಗಮನ ಮುಂದುವರಿದಿದೆ. ಸಿನಿಪ್ರಿಯರನ್ನು ಚಿತ್ರಮಂದಿರಕ್ಕೆ ಕರೆತರಲು ತಮ್ಮ ಪ್ರಾಜೆಕ್ಟ್ಗಳಿಗೆ ವಿನೂತನ ಶೀರ್ಷಿಕೆಗಳನ್ನು ಇಡೋದು ಹಾಗೂ ವಿಭಿನ್ನ ಪ್ರಚಾರ ಮಾಡೋದು ಟ್ರೆಂಡ್ ಆಗಿದೆ. ಈ ಸಾಲಿಗೆ ಹೊಸ ಪ್ರತಿಭೆಗಳ 'ವೈಕುಂಠ ಸಮಾರಾಧನೆ' (Vaikunta Samaaraadhane) ಸಿನಿಮಾ ಹೊಸ ಸೇರ್ಪಡೆ. ಅಡ್ವೋಕೇಟ್ ವೃತ್ತಿಯಲ್ಲಿ ಹೆಸರು ಮಾಡಿರುವ ರಜತ್ ಮೌರ್ಯ ಅವರು ವಿಭಿನ್ನ ಟೈಟಲ್ನ ಸಿನಿಮಾದೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಸಿನಿಮಾ ಶೀರ್ಷಿಕೆಯೇ ವಿಭಿನ್ನ, ವಿಚಿತ್ರ ಅಂತಿದ್ದಾರೆ ನೆಟ್ಟಿಗರು.
ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿದೆ ಸಿನಿಮಾ: ರಜತ್ ಮೌರ್ಯ ಅವರು ತಮ್ಮ ವಕೀಲ ವೃತ್ತಿ ಜೊತೆಗೆ ಬಿಡುವಿನ ವೇಳೆ ನಟನೆ, ನಿರ್ದೇಶನದ ತರಬೇತಿ ಪಡೆದುಕೊಂಡಿದ್ದಾರೆ. ಜೊತೆಗೆ ಮಾಡೆಲ್ ಆಗಿದ್ದು, ಇವರ ಅಭಿನಯದ ಜಾಹೀರಾತುಗಳು ಐಪಿಎಲ್ ಪಂದ್ಯಗಳಲ್ಲಿ ಸ್ಟ್ರೀಮಿಂಗ್ ಆಗಿದೆ. ಇದರ ಅನುಭವದಿಂದಲೇ ಸಿನಿಮಾವೊಂದಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮತ್ತು ನಾಯಕನ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸದ್ಯ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, 'ವೈಕುಂಠ ಸಮಾರಾಧನೆ' ಗಾಂಧಿನಗರದಲ್ಲಿ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿದೆ.
ಡೆತ್ ಲುಕ್ ಪೋಸ್ಟರ್: ಇದು ನಮ್ಮ ಸಿನಿಮಾದ ಡೆತ್ ಲುಕ್ ಪೋಸ್ಟರ್ ಎಂದು ವೈಕುಂಠ ಸಮಾರಾಧನೆ ಪತ್ರಿಕೆ ರೀತಿಯಲ್ಲಿಯೇ ಕಪ್ಪು ಬಿಳುಪಿನಲ್ಲಿ ಸಿದ್ಧಗೊಂಡಿದ್ದು, ಜನನ, ಮರಣ ಇರುವಂತೆ 12.12.2025ರಂದು ಬಿಡುಗಡೆ ಆಗಲಿದೆ ಎಂದು ತಿಳಿಸಲಾಗಿದೆ. ಈಗಾಗಲೇ ಡೆತ್ ಲುಕ್ ಪೋಸ್ಟರ್ ರೀಲ್ಸ್ ವೈರಲ್ ಆಗಿದ್ದು, ಎಲ್ಲಾ ಕಡೆಗಳಲ್ಲಿ ಸದ್ದು ಮಾಡುತ್ತಿದೆ.
ಸದಭಿರುಚಿಯ ಚಿತ್ರಗಳಾದ ಬ್ಲಿಂಕ್, ಕೆರೆಬೇಟೆ, 4ಎನ್6 ಮತ್ತು ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು ಮತ್ತು ವಕೀಲರುಗಳು ಆಗಮಿಸಿ ಸ್ನೇಹಿತನ ಸಿನಿಮಾಗೆ ಹಾರೈಸಿದರು.
'ವೈಕುಂಠ ಸಮಾರಾಧನೆ' ಚಿತ್ರದಲ್ಲಿ ರಜತ್ ಮೌರ್ಯ ಅಭಿನಯಿಸಿ, ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕಥೆ, ಚಿತ್ರಕಥೆ ಜವಾಬ್ದಾರಿಯೂ ಇವರದ್ದಾಗಿದ್ದು ಒಂದೇ ಚಿತ್ರದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಈ 'ವೈಕುಂಠ ಸಮಾರಾಧನೆ' ಚಿತ್ರಕ್ಕೆ ಸಂಗೀತವನ್ನು ರುತ್ವಿಕ್‌ಮುರಳಿಧರ್ ನೀಡಲಿದ್ದಾರೆ. ಹರ್ಷಿತ್.ಬಿ. ಗೌಡ ಅವರ ಕ್ಯಾಮರಾ ಕೈಚಳಕವಿರಲಿದೆ. ಗೇರ್‌ಗಲ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಆಶಾ ಗೇರ್‌ಗಲ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ನಾಗೇಂದ್ರ ಯಡಿಯಾಳ್ ಚಿತ್ರ ತಂಡದ ಭಾಗವಾಗಿದ್ದಾರೆ. ಆದರ್ಶ್ ಬೆಳ್ಳೂರು, ದರ್ಶನ್‌ಕುಮಾರ್, ಸಿದ್ದಾನ್ ವಿಜಯ್, ನವೀನ್, ಸಚಿನ್ ನಿರ್ದೇಶನ ತಂಡದಲ್ಲಿರಲಿದ್ದಾರೆ. ಶೇಕಡ 60ರಷ್ಟು ಚಿತ್ರೀಕರಣವನ್ನು ಮಲೆನಾಡು, ಉಳಿದ ಭಾಗವನ್ನು ಬೆಂಗಳೂರು ಸುತ್ತಮತ್ತ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಸದ್ಯ ಪೋಸ್ಟರ್ ಸದ್ದು ಮಾಡುತ್ತಿದ್ದು, ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.