ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಸ್ಪರ್ಧೆ ಮತ್ತು ಭಾರತದ ಮಾರುಕಟ್ಟೆಯಲ್ಲಿನ ವಿಫುಲ ಅವಕಾಶದಿಂದಾಗಿ ಓಲಾ ತನ್ನ ಜಾಗತಿಕ ಕಾರ್ಯಾಚರಣೆಯನ್ನು ಬಂದ್ ಮಾಡಿ, ಭಾರತದ ಮಾರುಕಟ್ಟೆಗೆ ಮಾತ್ರ ಗಮನ ನೀಡುವುದಾಗಿ ಘೋಷಿಸಿದೆ.
ಆಸ್ಟ್ರೇಲಿಯಾ, ಯುಕೆ ಮತ್ತು ನ್ಯೂಜಿಲೆಂಡ್ನಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯಿಂದಾಗಿ ಈ ದೇಶದಲ್ಲಿನ ಓಲಾ ಸೇವೆ ಬಂದ್ ಮಾಡುವ ಮೂಲಕ ನಮ್ಮ ಜಾಗತಿಕ ಕಾರ್ಯಾಚರಣೆಯನ್ನು ನಿಲ್ಲಿಸುವುದಾಗಿ ಹೇಳಿದೆ. ಇದೇ ವೇಳೆ ಸಂಸ್ಥೆಯು ಭಾರತದಲ್ಲಿ ತಮ್ಮ ಮಾರುಕಟ್ಟೆ ವಿಸ್ತರಣೆಗೆ ಅದ್ಭುತ ಅವಕಾಶಗಳಿದ್ದು, ಅದರತ್ತ ಗುರಿ ನೆಟ್ಟಿರುವುದಾಗಿ ತಿಳಿಸಿದೆ.
ಭವಿಷ್ಯದ ವಾಹನಗಳು ಎಲೆಕ್ಟ್ರಿಕ್ ಆಗಿವೆ. ಇದು ಕೇವಲ ವೈಯಕ್ತಿಕ ಓಡಾಟಕ್ಕೆ ಮಾತ್ರ ಸೀಮಿತವಾಗಿಲ್ಲ. ರೈಡ್ ಹೈಲಿಂಗ್ನಂತಹ ಉದ್ಯಮಕ್ಕೂ ಸೂಕ್ತ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಣೆಗೆ ಸಾಕಷ್ಟು ಅವಕಾಶವಿದೆ ಎಂದು ಓಲಾ ವಕ್ತಾರರು ಪ್ರಕಟಣೆ ಹೊರಡಿಸಿದ್ದಾರೆ.
ಸ್ಪಷ್ಟ ಗುರಿಯೊಂದಿಗೆ ನಾವು ನಮ್ಮ ಆದ್ಯತೆಯ ಮರು ಮೌಲ್ಯಮಾಪನ ಮಾಡಿದ್ದೇವೆ. ಪ್ರಸ್ತುತ ಯುಕೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿರುವ ಸಾಗರದಾಚೆಗಿನ ರೈಡ್ ಹೈಲಿಂಗ್ ಉದ್ಯಮವನ್ನು ಮುಚ್ಚುವುದಾಗಿ ಹೇಳಿದ್ದಾರೆ.
2023ರಲ್ಲಿ ಆದಾಯ ಹೆಚ್ಚಳ: ಸಂಸ್ಥೆಯು ದ್ವಿಚಕ್ರ ಸೇರಿದಂತೆ ಹಲವು ಮಾದರಿಯ ಸಾರಿಗೆ ಸೌಲಭ್ಯವನ್ನು ನೂರಾರು ಸ್ಥಳಗಳಲ್ಲಿ ನೀಡುತ್ತಿದೆ. ಈ ನಡುವೆ ಭಾರತದಲ್ಲಿ ಓಲಾ ಚಲನಶೀಲತೆ ಉದ್ಯಮ 2022ರ ಆರ್ಥಿಕ ವರ್ಷದಲ್ಲಿ 66 ಕೋಟಿ ರೂ ನಷ್ಟದ ನಡುವೆ 2023ರ ಆರ್ಥಿಕ ವರ್ಷದಲ್ಲಿ 250 ಕೋಟಿ ಲಾಭಗಳಿಸಿದೆ.
2022ರ ಆರ್ಥಿಕ ವರ್ಷದಲ್ಲಿ ಸಂಸ್ಥೆ 1,350 ಕೋಟಿ ಆದಾಯ ಗಳಿಸಿದರೆ, 2023ರಲ್ಲಿ ಶೇ 58ರಷ್ಟು ಆದಾಯ ಹೆಚ್ಚಿಸಿಕೊಂಡು 2,135 ಕೋಟಿ ರೂ ಸಂಪಾದಿಸಿದೆ. 2023ರ ಆರ್ಥಿಕ ವರ್ಷ ಕೇವಲ ಬೆಳವಣಿಗೆ ಮತ್ತು ಗಾತ್ರದಿಂದ ಅಲ್ಲ, ಬದಲಾಗಿ ಲಾಭದಿಂದಾಗಿಯೂ ನಮಗೆ ಸವಾಲುದಾಯಕವಾಗಿದೆ. ನಮ್ಮ ಆದಾಯ ಶೇ 58ರಷ್ಟು ಏರಿಕೆಯೊಂದಿಗೆ ಬಲವಾದ ಬೆಳವಣಿಗೆಯನ್ನು ಭಾರತದಲ್ಲಿ ಕಂಡಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ನಮ್ಮ ಗುರಿ 1 ಬಿಲಿಯನ್ ಭಾರತೀಯರಿಗೆ ಸೇವೆ ನೀಡುವುದಾಗಿದೆ. ಹೊಸ ಅವಿಷ್ಕಾರದ ಮುನ್ನಡೆ, ದೇಶದ ಚಲನಶೀಲತೆ ಗುರಿಯನ್ನು ವಿಸ್ತಾರ ಮಾಡುವುದರೊಂದಿಗೆ ಈ ಗುರಿಯನ್ನು ಮುಂದಿನ ಹಂತದ ಬೆಳವಣಿಗೆಗೆ ಕೊಂಡೊಯ್ಯಲಾಗುವುದು ಎಂದು ಸಂಸ್ಥೆ ಹೇಳಿದೆ.(ಐಎಎನ್ಎಸ್)
ಇದನ್ನೂ ಓದಿ: ಚೀನಾದ ಆರ್ಥಿಕ ಬೆಳವಣಿಗೆ ಅಂದಾಜನ್ನು ಋಣಾತ್ಮಕಕ್ಕೆ ಇಳಿಸಿದ ಫಿಚ್