ನವದೆಹಲಿ: ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದಲ್ಲಿ ಒಟ್ಟು ಇಂಟರ್‌ನೆಟ್ ಚಂದಾದಾರರ ಸಂಖ್ಯೆ 954.40 ಮಿಲಿಯನ್‌ನಿಂದ 969.60 ಮಿಲಿಯನ್ (ಸುಮಾರು 97 ಕೋಟಿ)ಗೆ ಏರಿಕೆಯಾಗಿದ್ದು, ತ್ರೈಮಾಸಿಕವಾಗಿ ಶೇಕಡಾ 1.59ರಷ್ಟು ಬೆಳವಣಿಗೆಯಾಗಿದೆ ಎಂದು ಸರ್ಕಾರ ಬುಧವಾರ ತಿಳಿಸಿದೆ.
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಅಂಕಿಅಂಶಗಳ ಪ್ರಕಾರ, 969.60 ಮಿಲಿಯನ್ ಇಂಟರ್‌ನೆಟ್ ಚಂದಾದಾರರ ಪೈಕಿ ವೈರ್ಡ್ ಇಂಟರ್‌ನೆಟ್ ಚಂದಾದಾರರ ಸಂಖ್ಯೆ 42.04 ಮಿಲಿಯನ್ ಮತ್ತು ವೈರ್‌ಲೆಸ್ ಇಂಟರ್ನೆಟ್ ಚಂದಾದಾರರ ಸಂಖ್ಯೆ 927.56 ಮಿಲಿಯನ್ ಆಗಿದೆ.
ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಚಂದಾದಾರರ ಸಂಖ್ಯೆ ಜೂನ್ ಅಂತ್ಯದ ವೇಳೆಗೆ 924.07 ಮಿಲಿಯನ್‌ನಿಂದ 940.75 ಮಿಲಿಯನ್‌ಗೆ ಅಂದರೆ ಶೇಕಡಾ 1.81ರಷ್ಟು ಏರಿಕೆಯಾಗಿದೆ. ನ್ಯಾರೋಬ್ಯಾಂಡ್ ಇಂಟರ್‌ನೆಟ್ ಚಂದಾದಾರರ ಸಂಖ್ಯೆ 30.34 ಮಿಲಿಯನ್‌ನಿಂದ 28.85 ಮಿಲಿಯನ್‌ಗೆ ಇಳಿಕೆಯಾಗಿದೆ.
ವೈರ್‌ಲೈನ್ ಚಂದಾದಾರ ಸಂಖ್ಯೆ ಜೂನ್ನಲ್ಲಿ 33.79 ಮಿಲಿಯನ್‌ನಿಂದ 35.11 ಮಿಲಿಯನ್‌ಗೆ ಏರಿಕೆಯಾಗಿದ್ದು, ತ್ರೈಮಾಸಿಕ ಬೆಳವಣಿಗೆ ದರ ಶೇಕಡಾ 3.90ರಷ್ಟಿದೆ. ವೈರ್‌ಲೈನ್ ಟೆಲಿ-ಸಾಂದ್ರತೆಯು ಶೇಕಡಾ 2.41ರಿಂದ 2.50ಕ್ಕೆ ಏರಿಕೆಯಾಗಿದ್ದು, ಇದು ತ್ರೈಮಾಸಿಕವಾಗಿ ಶೇಕಡಾ 3.67ರ ದರದಲ್ಲಿ ಬೆಳವಣಿಗೆಯಾಗಿದೆ.
ಟ್ರಾಯ್ ಪ್ರಕಾರ, ವೈರ್‌ಲೆಸ್ ಸೇವೆಗಳಲ್ಲಿ ಪ್ರತಿ ಬಳಕೆದಾರರಿಂದ ಕಂಪನಿಗಳಿಗೆ ಮಾಸಿಕ ಸರಾಸರಿ ಆದಾಯ (ಎಆರ್ಪಿಯು) ಶೇಕಡಾ 2.55ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಎಆರ್ಪಿಯು 153.54 ರೂ.ಗಳಿಂದ 157.45 ರೂ.ಗೆ ಏರಿಕೆಯಾಗಿದೆ. ವಾರ್ಷಿಕ ಆಧಾರದ ಮೇಲೆ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ವೈರ್‌ಲೆಸ್ ಸೇವೆಗಳ ಮಾಸಿಕ ಎಆರ್ಪಿಯು ಶೇಕಡಾ 8.11ರಷ್ಟು ಹೆಚ್ಚಾಗಿದೆ. ಪ್ರಿಪೇಯ್ಡ್ ಎಆರ್ಪಿಯು ಮಾಸಿಕ 150.74 ರೂ.ಗಳಿಂದ 154.80 ರೂ.ಗೆ ಮತ್ತು ಪೋಸ್ಟ್-ಪೇಯ್ಡ್ ಎಆರ್ಪಿಯು ಮಾಸಿಕ 187.85 ರೂ.ಗಳಿಂದ 189.17 ರೂ.ಗೆ ಏರಿಕೆಯಾಗಿದೆ.
ಅಖಿಲ ಭಾರತ ಸರಾಸರಿಯಲ್ಲಿ, ಪ್ರತಿ ಚಂದಾದಾರರ ತಿಂಗಳಿನ ಒಟ್ಟಾರೆ ಎಂಒಯು (ಬಳಕೆಯ ನಿಮಿಷಗಳು) 995ರಿಂದ 974ಕ್ಕೆ ಅಂದರೆ ಶೇಕಡಾ 2.16ರಷ್ಟು ಕಡಿಮೆಯಾಗಿದೆ. ಪ್ರತಿ ಚಂದಾದಾರರ ತಿಂಗಳ ಪ್ರಿಪೇಯ್ಡ್ ಎಂಒಯು ಈಗ 1,010 ಮತ್ತು ಪ್ರತಿ ಪೋಸ್ಟ್ಪೇಡ್ ಚಂದಾದಾರರ ಎಂಒಯು 539 ಆಗಿದೆ.
ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದಲ್ಲಿ ದೂರವಾಣಿ ಚಂದಾದಾರರ ಸಂಖ್ಯೆ 1,199.28 ಮಿಲಿಯನ್‌ನಿಂದ 1,205.64 ಮಿಲಿಯನ್ ಗೆ ಏರಿಕೆಯಾಗಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಶೇಕಡಾ 0.53ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ ಎಂದು ಟ್ರಾಯ್ ತಿಳಿಸಿದೆ. ಒಟ್ಟು ಚಂದಾದಾರಿಕೆಯಲ್ಲಿ, ಗ್ರಾಮೀಣ ಚಂದಾದಾರಿಕೆಯ ಪಾಲು ಶೇಕಡಾ 44.52ರಿಂದ 44.67ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: 10 ನೇ ಸಲವೂ ರೆಪೋ ರೇಟ್ನಲ್ಲಿ ಇಲ್ಲ ಯಾವುದೇ ಬದಲಾವಣೆ : ಗೃಹ ಸಾಲದ ಮೇಲಿಲ್ಲ ಹೆಚ್ಚಿನ ಬಡ್ಡಿ ಹೊರೆ