ನವದೆಹಲಿ: ಭಾರ್ತಿ ಏರ್ಟೆಲ್ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 4,160 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿರುವುದಾಗಿ ಸೋಮವಾರ ತಿಳಿಸಿದೆ. ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ನಿವ್ವಳ ಲಾಭ ಶೇಕಡಾ 158ರಷ್ಟು ಏರಿಕೆಯಾಗಿದೆ ಮತ್ತು ಆದಾಯವು 38,506 ಕೋಟಿ ರೂ.ಗೆ ತಲುಪಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು ಭಾರತದಲ್ಲಿನ ವ್ಯವಹಾರದಿಂದ 29,046 ಕೋಟಿ ರೂ. ಆದಾಯ ಗಳಿಸಿದ್ದು, ಇದು ಶೇ 10.1ರಷ್ಟು ಹೆಚ್ಚಳವಾಗಿದೆ.
2025 ರ ಮೊದಲ ತ್ರೈಮಾಸಿಕದಲ್ಲಿ ಭಾರ್ತಿ ಏರ್ಟೆಲ್ 0.8 ಮಿಲಿಯನ್ (8 ಲಕ್ಷ) ಹೊಸ ಚಂದಾದಾರರನ್ನು ಪಡೆದಿದ್ದು, ಕಂಪನಿಯ ಒಟ್ಟಾರೆ ಗ್ರಾಹಕರ ಸಂಖ್ಯೆ 24 ಮಿಲಿಯನ್ಗೆ ತಲುಪಿದೆ. ಸ್ಮಾರ್ಟ್ಫೋನ್ ವಿಭಾಗದಲ್ಲಿ ಕಂಪನಿಯು 29.7 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಈ ಪ್ರಮಾಣ ಶೇಕಡಾ 12.9ರಷ್ಟು ಹೆಚ್ಚಳವಾಗಿದೆ.
ಹೆಚ್ಚಿನ ಸಂಖ್ಯೆಯ 4ಜಿ ಮತ್ತು 5ಜಿ ಗ್ರಾಹಕರ ಸೇರ್ಪಡೆ, ವಿಭಿನ್ನ ಗ್ರಾಹಕರ ಸೇರ್ಪಡೆ ಮತ್ತು ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯದಲ್ಲಿನ (ಎಆರ್ಪಿಯು) ಹೆಚ್ಚಳದಿಂದಾಗಿ ಭಾರತದಲ್ಲಿ ಕಂಪನಿಯ ಮೊಬೈಲ್ ಸೇವಾ ವಿಭಾಗದ ಆದಾಯವು ಶೇಕಡಾ 10.5ರಷ್ಟು ಹೆಚ್ಚಾಗಿದೆ. 2024ರ ಮೊದಲ ತ್ರೈಮಾಸಿಕದಲ್ಲಿ 200 ರೂ. ಇದ್ದ ಎಆರ್ಪಿಯು ಪ್ರಸಕ್ತ ತ್ರೈಮಾಸಿಕದಲ್ಲಿ 211 ರೂ.ಗೆ ಏರಿಕೆಯಾಗಿದೆ.
ಆರ್ಥಿಕ ಸ್ಥಿರತೆಗಾಗಿ ಉದ್ಯಮಕ್ಕೆ ಕನಿಷ್ಠ 300 ಎಆರ್ಪಿಯು ಪ್ರಮಾಣದಲ್ಲಿ ಆದಾಯದ ಅಗತ್ಯವಿದೆ ಎಂದು ಭಾರ್ತಿ ಏರ್ಟೆಲ್ ಎಂಡಿ ಗೋಪಾಲ್ ವಿಠಲ್ ಹೇಳಿದರು. ಭಾರತದಲ್ಲಿ ಕಂಪನಿಯ ಆದಾಯವು ಶೇಕಡಾ 1.9ರ ಪ್ರಮಾಣದಲ್ಲಿ ಬೆಳೆಯುತ್ತಿದೆ ಮತ್ತು ಇಬಿಐಟಿಡಿಎ ಮಾರ್ಜಿನ್ ಶೇಕಡಾ 53.7ಕ್ಕೆ ವಿಸ್ತರಣೆಯಾಗಿದೆ ಎಂದು ಅವರು ತಿಳಿಸಿದರು.
ಸದ್ಯ ಏರ್ಟೆಲ್ ವೈ-ಫೈ ಸೇವೆಗಳು (ಎಫ್ಟಿಟಿಎಚ್ ಮತ್ತು ಎಫ್ಡಬ್ಲ್ಯೂಎ) ಈಗ 1,300ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದೆ. ಇತ್ತೀಚೆಗೆ ಮುಕ್ತಾಯಗೊಂಡ ಸ್ಪೆಕ್ಟ್ರಮ್ ಹರಾಜಿನಲ್ಲಿ, ಏರ್ಟೆಲ್ ಆರು ವಲಯಗಳಲ್ಲಿ ಲೈಸೆನ್ಸ್ ಮುಕ್ತಾಯಗೊಳ್ಳಲಿದ್ದ ಸ್ಪೆಕ್ಟ್ರಮ್ ಅನ್ನು ಯಶಸ್ವಿಯಾಗಿ ನವೀಕರಿಸಿಕೊಂಡಿದೆ ಮತ್ತು 6,857 ಕೋಟಿ ರೂ.ಗಳನ್ನು ಹೂಡಿಕೆ ಮಾಡುವ ಮೂಲಕ ಪ್ರಮುಖ ವಲಯಗಳಲ್ಲಿ ತನ್ನ ಸಬ್-ಗಿಗಾ ಹರ್ಟ್ಜ್ ಮತ್ತು ಮಿಡ್-ಬ್ಯಾಂಡ್ ಹೋಲ್ಡಿಂಗ್ ಅನ್ನು ಮತ್ತಷ್ಟು ಹೆಚ್ಚಿಸಿದೆ.
ತಡೆರಹಿತ ಮೊಬೈಲ್ ನೆಟ್ವರ್ಕ್ ಒದಗಿಸಲು ಕಂಪನಿಯು ತ್ರೈಮಾಸಿಕದಲ್ಲಿ ಹೆಚ್ಚುವರಿ 6,300 ಟವರ್ಗಳು ಮತ್ತು 15,5000 ಮೊಬೈಲ್ ಬ್ರಾಡ್ ಬ್ಯಾಂಡ್ ಕೇಂದ್ರಗಳನ್ನು ಸ್ಥಾಪಿಸಿದೆ. ತ್ರೈಮಾಸಿಕದ ಕೊನೆಯಲ್ಲಿ ಡಿಜಿಟಲ್ ಟಿವಿ ವಿಭಾಗವು 16.3 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಈ ವಿಭಾಗದ ಆದಾಯವು ಸ್ಥಿರವಾಗಿದೆ ಎಂದು ಕಂಪನಿ ತಿಳಿಸಿದೆ.
ಇದನ್ನೂ ಓದಿ: ಅಡುಗೆ ಪದಾರ್ಥಗಳು, ವೆಜ್, ನಾನ್ ವೆಜ್ ಥಾಲಿಗಳ ಬೆಲೆ ಏರಿಕೆ - Food Prices Hiked