ಕಿಶನ್‌ಗಂಜ್(ಬಿಹಾರ): ಇಲ್ಲಿನ ಮಹಿಳೆಯೊಬ್ಬರು ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಎಲ್ಲ ಶಿಶುಗಳು ಆರೋಗ್ಯವಾಗಿವೆ. ಬಿಹಾರದ ಕಿಶನ್‌ಗಂಜ್ ಜಿಲ್ಲೆಯ ಠಾಕೂರ್‌ಗಂಜ್‌ನ ನಿವಾಸಿ ತಾಹಿರಾ ಬೇಗಂ ಈ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ.
ತಾಹಿರಾ ಎರಡು ತಿಂಗಳ ಗರ್ಭಿಣಿಯಾಗಿದ್ದಾಗ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ್ದು, ಹೊಟ್ಟೆಯಲ್ಲಿ ನಾಲ್ಕು ಮಕ್ಕಳಿರುವುದು ಗೊತ್ತಾಗಿದೆ. ಇದಾಗಿ 2 ತಿಂಗಳ ನಂತರ ಮತ್ತೆ ತಪಾಸಣೆ ನಡೆಸಿದಾಗ ಐದು ಶಿಶುಗಳಿವೆ ಎಂದು ವೈದ್ಯರು ತಿಳಿಸಿದ್ದರು.
ಇತ್ತೀಚೆಗಷ್ಟೇ ಬೆನ್ನುನೋವು ಕಾಣಿಸಿಕೊಂಡಿದ್ದರಿಂದ ಕುಟುಂಬಸ್ಥರು ಠಾಕೂರ್‌ಗಂಜ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಅಲ್ಲಿ ವೈದ್ಯರು ತಾಹಿರಾ ಅವರಿಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಸದ್ಯ ಐವರು ಹೆಣ್ಣು ಮಕ್ಕಳು ಆರೋಗ್ಯವಾಗಿವೆ. ತಾಹಿರಾಗೆ ಈಗಾಗಲೇ ಒಬ್ಬ ಮಗನಿದ್ದಾನೆ.
'ಆನುವಂಶಿಕ ಕಾರಣ': ಈ ಬಗ್ಗೆ ಡಾ.ಅನಿಲ್ ಕುಮಾರ್ ಮಾತನಾಡಿ, ಗರ್ಭಾವಸ್ಥೆಯಲ್ಲಿ ಬಹು ಅಂಡಾಣುಗಳ ಫಲೀಕರಣ ಆಗುವುದರಿಂದ ಒಂದೇ ಭ್ರೂಣದಲ್ಲಿ ಹೆಚ್ಚು ಶಿಶುಗಳು ಜನಿಸುತ್ತವೆ. ಆನುವಂಶಿಕ ಕಾರಣಗಳಿಂದಲೂ ಇದು ಸಂಭವಿಸಬಹುದು ಎಂದು ಹೇಳಲಾಗುತ್ತದೆ. ಒಂದೇ ಹೆರಿಗೆಯಲ್ಲಿ ಎರಡು ಅಥವಾ ಮೂರು ಮಕ್ಕಳು ಹುಟ್ಟುವುದು ಸಹಜ. ಆದರೆ ಮೂರಕ್ಕಿಂತ ಹೆಚ್ಚು ಶಿಶುಗಳನ್ನು ವೈದ್ಯಕೀಯ ಪರಿಭಾಷೆಯಲ್ಲಿ ಪಾಲಿಜಿಗೋಟಿಕ್ ಎಂದು ಕರೆಯಲಾಗುತ್ತದೆ" ಎಂದು ಅವರು ಹೇಳಿದರು.
ಏಳು ವರ್ಷಗಳ ಬಳಿಕ ಐದು ಮಕ್ಕಳಿಗೆ ಜನ್ಮ ನೀಡಿದ ತಾಯಿ: ಕೆಲ ವರ್ಷಗಳ ಹಿಂದೆ ಮಕ್ಕಳಿಲ್ಲದ ನೋವಿನಲ್ಲೇ ಕಾಲ ಕಳೆಯುತ್ತಿದ್ದ ಮಹಿಳೆ ಏಕಕಾಲಕ್ಕೆ ಐದು ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ, ಹೆರಿಗೆ ಪೂರ್ವ ಅವಧಿಯಲ್ಲಿ ಮಕ್ಕಳು ಹುಟ್ಟಿರುವ ಕಾರಣ ಮೂರು ಶಿಶುಗಳು ಸಾವನ್ನಪ್ಪಿದ್ದವು. ಈ ಸುದ್ದಿಗೆ ಈ ಲಿಂಕ್ ಕ್ಲಿಕ್ ಮಾಡಿ..