ವಯನಾಡ್(ಕೇರಳ): ಭೀಕರ ಭೂಕುಸಿತ ಮತ್ತು ಪ್ರವಾಹದ ನೀರಿನ ಅಬ್ಬರದಲ್ಲಿ ಕೊಚ್ಚಿ ಹೋಗಿದ್ದ ಮೂರು ದಿನಗಳ ನಂತರ ನಾಲ್ವರು ಪವಾಡ ರೀತಿಯಲ್ಲಿ ಜೀವಂತ ಪತ್ತೆಯಾಗಿದ್ದು, ಅಚ್ಚರಿ ಮೂಡಿಸಿದೆ. ಪಡವೆಟ್ಟಿಕ್ಕುನ್ನು ಸ್ಥಳದಲ್ಲಿ ಸೇನಾಪಡೆ ನಡೆಸಿದ ಪತ್ತೆ ಕಾರ್ಯದಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಸಾವು ಗೆದ್ದು ಬಂದಿದ್ದಾರೆ.
ಚೂರಲ್ಮಾಲದಿಂದ ಮೂರು ಕಿ.ಮೀ ದೂರದಲ್ಲಿರುವ ಪಡುವಟ್ಟಿ ಕುನ್ನದಲ್ಲಿ ಅವಶೇಷಗಳ ಅಡಿಯಲ್ಲಿ ಇವರು ಕಂಡುಬಂದಿದ್ದಾರೆ. ಜೀವಂತ ಪತ್ತೆಯಾದವರನ್ನು ಜಾನಿ, ಜೊಮೊಲ್, ಕ್ರಿಸ್ಟಿ ಮತ್ತು ಅಬ್ರಹಾಂ ಎಂದು ಗುರುತಿಸಲಾಗಿದ್ದು, ಇವರು ಒಂದೇ ಕುಟುಂಬದವರಾಗಿದ್ದಾರೆ. ಇದೀಗ ಈ ನಾಲ್ವರನ್ನೂ ಏರ್ಲಿಫ್ಟ್ ಮೂಲಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಭಾರತೀಯ ಸೇನೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಭೂಕುಸಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಆರಂಭವಾಗಿ ಈಗಾಗಲೇ ಮೂರು ದಿನ ಕಳೆದಿದೆ. ಕಂಡರಿಯದ ಭೀಕರ ದುರಂತದಲ್ಲಿ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 240ಕ್ಕೂ ಅಧಿಕ ಮಂದಿ ಇನ್ನೂ ಕೂಡ ಕಣ್ಮರೆಯಾಗಿದ್ದಾರೆ. ಇದುವರೆಗೆ 264 ಜನರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇರಳ ಆರೋಗ್ಯ ಇಲಾಖೆ ತಿಳಿಸಿದೆ.
ಜಿಲ್ಲೆಯ 91 ನಿರಾಶ್ರಿತ ಶಿಬಿರಗಳಲ್ಲಿ 9,328 ಮಂದಿ ಆಶ್ರಯ ಪಡೆದಿದ್ದಾರೆ.
ಇದನ್ನೂ ಓದಿ: ವಯನಾಡ್ ಭೂ ಕುಸಿತ: ಸಾವಿನ ಸಂಖ್ಯೆ 308ಕ್ಕೇರಿಕೆ: 300ಕ್ಕೂ ಹೆಚ್ಚು ಜನ ಕಣ್ಮರೆ, ಮುಂದುವರಿದ ಕಾರ್ಯಾಚರಣೆ