ಬಹ್ರೈಚ್(ಉತ್ತರ ಪ್ರದೇಶ): ತಮ್ಮ ಕೋಳಿ ಫಾರಂನಿಂದ 5 ಕೆ.ಜಿ ಗೋಧಿ ಕದ್ದಿದ್ದಾರೆಂದು ಶಂಕಿಸಿ ಪರಿಶಿಷ್ಟ ಜಾತಿಯ ಮೂವರು ಬಾಲಕರನ್ನು ಥಳಿಸಿ, ತಲೆ ಬೋಳಿಸಿ ಮೆರವಣಿಗೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ನಾನ್‌ಪಾರಾ ಪೊಲೀಸ್ ಠಾಣಾ ವ್ಯಾಪ್ತಿಯ ತಾಜ್‌ಪುರ ಟೆಡಿಯಾ ಗ್ರಾಮದಲ್ಲಿ ಮಂಗಳವಾರ ಈ ಅಮಾನವೀಯ ಘಟನೆ ವರದಿಯಾಗಿದೆ.
ಮಕ್ಕಳ ತಲೆ ಬೋಳಿಸಿ, ತಲೆ ಹಾಗೂ ಮುಖದ ಮೇಲೆ ಕಳ್ಳ ಎಂದು ಕಪ್ಪುಬಣ್ಣದಿಂದ ಬಳಿದು ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಮೆರವಣಿಗೆಯ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ಸಂತ್ರಸ್ತ ಬಾಲಕರ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಮೂವರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಾಜಿಮ್ ಖಾನ್ ಎಂಬಾತ ಕೋಳಿ ಫಾರಂ ನಡೆಸುತ್ತಿದ್ದು, ಚಿಕ್ಕ ಮಕ್ಕಳನ್ನು ಅಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದಾನೆ. ಆಗಾಗ್ಗೆ ಹಳ್ಳಿಯಿಂದ ಚಿಕ್ಕ ಮಕ್ಕಳನ್ನು ಕರೆದುಕೊಂಡು ಹೋಗುವ ಆತ ಕೆಲಸಕ್ಕೆ ಪ್ರತಿಯಾಗಿ 10-20 ರೂಪಾಯಿ ನೀಡುತ್ತಾನೆ. ಮಂಗಳವಾರ ಮಧ್ಯಾಹ್ನ ನಾಜಿಮ್ ಖಾನ್, ಅವರ ಮಗ ಖಾಸಿಂ ಖಾನ್, ಇನಾಯತ್ ಮಗ ಅಬ್ದುಲ್ ಸಲಾಂ ಎಂಬವರು ಸೇರಿ ನನ್ನ ಹಾಗೂ ನಮ್ಮ ನೆರೆಹೊರೆಯವರ ಮಕ್ಕಳನ್ನು ಕೋಳಿ ಫಾರಂನಿಂದ ಐದು ಕಿಲೋ ಗೋಧಿ ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮನಬಂದಂತೆ ಥಳಿಸಿದರು. ಆ ಬಳಿಕ ಮಕ್ಕಳ ತಲೆ ಬೋಳಿಸಿದ್ದಾರೆ. ನಂತರ ಕಳ್ಳನೆಂದು ತಲೆ ಮತ್ತು ಮುಖದ ಮೇಲೆ ಕಪ್ಪು ಬಣ್ಣ ಬಳಿದು ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ರಜಿತ್ ರಾಮ್ ಪಾಸ್ವಾನ್ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಈ ದೂರಿನನ್ವಯ ನಾಲ್ವರ ವಿರುದ್ಧ ಕೊಲೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜಾತಿ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಒ ನನ್ಪಾರ ಪ್ರದ್ಯುಮನ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ದೇಗುಲ ಪ್ರವೇಶಿಸಿದ ದಲಿತ ಯುವಕನಿಗೆ ಕಂಬಕ್ಕೆ ಕಟ್ಟಿ ಥಳಿಸಿದ ಆರೋಪ; 6 ಮಂದಿ ಸೆರೆ - Dalit Youth Assaulted