ಅಮರಾವತಿ (ಆಂಧ್ರಪ್ರದೇಶ): ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಬಗೆದಷ್ಟು ಅವ್ಯವಹಾರಗಳು ಹೊರಬರುತ್ತಿವೆ. ಲಡ್ಡು ತಯಾರಿಕೆಗೆ ಕಲಬೆರಕೆ ತುಪ್ಪ ಮಾತ್ರವಲ್ಲದೇ, ಕಡಿಮೆ ಗುಣಮಟ್ಟದ ಗೋಡಂಬಿ, ಒಣದ್ರಾಕ್ಷಿ, ಏಲಕ್ಕಿಯನ್ನು ಬಳಸಲಾಗಿದೆ. ಇವುಗಳ ಖರೀದಿಯಲ್ಲೂ ದೊಡ್ಡ ಗೋಲ್ಮಾಲ್ ನಡೆದಿದೆ ಎಂದು ವಿಚಕ್ಷಣಾ ದಳ ಮತ್ತು ಜಾರಿ ಇಲಾಖೆ ತನಿಖೆಯಲ್ಲಿ ಗೊತ್ತಾಗಿದೆ.
ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನದಲ್ಲಿ (ಟಿಟಿಡಿ) ನಡೆದಿರುವ ಅಕ್ರಮಗಳು ಮತ್ತು ಹಣ ದುರ್ಬಳಕೆ ಕುರಿತು ವಿಜಿಲೆನ್ಸ್ ಮತ್ತು ಜಾರಿ ಇಲಾಖೆಯು ತನಿಖೆ ನಡೆಸುತ್ತಿದೆ. ತುಪ್ಪದ ಜೊತೆಗೆ ಕಳಪೆ ಗುಣಮಟ್ಟದ ಗೋಡಂಬಿ, ಏಲಕ್ಕಿ, ಒಣದ್ರಾಕ್ಷಿ ಬಳಕೆ ಮಾಡಲಾಗಿದೆ. ಇವನ್ನು ಪೂರೈಕೆ ಮಾಡುವ ಗುತ್ತಿಗೆದಾರರಿಗೆ ಹೆಚ್ಚಿನ ಬೆಲೆ ನೀಡಲಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ.
ನಿಯಮಾನುಸಾರ 8 ಮಿ.ಮೀ. ಉದ್ದದ ಏಲಕ್ಕಿಯನ್ನು ಲಡ್ಡುವಿಗಾಗಿ ಪೂರೈಕೆ ಮಾಡಬೇಕು. ಆದರೆ, 4 ಮಿ.ಮೀ. ಗಾತ್ರದ ಏಲಕ್ಕಿ ಪೂರೈಸಲಾಗಿದೆ. ಇದು ಗೊತ್ತಿದ್ದರೂ, ಆಗಿನ ಟಿಟಿಡಿ ಆಡಳಿತ ಮಂಡಳಿ ಹಾಗೂ ಖರೀದಿ ಸಮಿತಿಯು ಈ ಬಗ್ಗೆ ಚಕಾರ ಎತ್ತಿರಲಿಲ್ಲ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಗುತ್ತಿಗೆದಾರರರು, ಇವುಗಳನ್ನು ಪೂರೈಸುವ ವೇಳೆ ಚೀಲಗಳಲ್ಲಿ ಮೇಲಿನ ಭಾಗದಲ್ಲಿ ಉತ್ತಮವಾದ ಪದಾರ್ಥ ಹಾಕಿ, ಕೆಳಗೆ ಕಳಪೆ ಪದಾರ್ಥ ಹಾಕಿ ಪೂರೈಕೆ ಮಾಡಿದ್ದಾರೆ. ಗುಣಮಟ್ಟದ ಚೀಲಗಳನ್ನು ಮಾತ್ರ ತಿರುಮಲದಲ್ಲಿರುವ ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಉಳಿದಿದ್ದನ್ನು ತಪಾಸಿಸದೇ ಸರಬರಾಜು ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ದೇಗುಲಗಳ ಜೀರ್ಣೋದ್ಧಾರದಲ್ಲೂ ಅಕ್ರಮ: ಇದರ ಜೊತೆಗೆ, ಶ್ರೀವಾಣಿ ಟ್ರಸ್ಟ್ ಹೆಸರಿನಲ್ಲಿ ದೇವಾಲಯಗಳ ಜೀರ್ಣೋದ್ಧಾರ/ಅಭಿವೃದ್ಧಿ ಹೆಸರಿನಲ್ಲೂ ಟಿಟಿಡಿ ಆಡಳಿತ ಮಂಡಳಿ ಮನಸೋಇಚ್ಛೆ ಹಣ ಬಿಡುಗಡೆ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ರಾಜಕೀಯ ಉದ್ದೇಶಕ್ಕಾಗಿ ವೈಎಸ್‌ಆರ್‌ಸಿಪಿ ನಾಯಕರಿಗೆ ಮನಸೋಇಚ್ಛೆ ಹಣ ನೀಡಲಾಗಿದೆ. ಚುನಾವಣೆಗೂ ಮುನ್ನವೇ ಕಾಮಗಾರಿ ನಡೆಸಲು ಆದೇಶ ನೀಡಲಾಗಿದೆ. 63 ದೇವಸ್ಥಾನಗಳಿಗೆ 35 ಲಕ್ಷ ರೂಪಾಯಿವರೆಗೆ ಹಂಚಿಕೆ ಮಾಡಲಾಗಿದೆ. ಇತರೆ ದೇವಸ್ಥಾನಗಳಿಗೆ ಗರಿಷ್ಠ 25 ಲಕ್ಷ ರೂ.ಗಳನ್ನು ನೀಡಲು ನಿಯಮಾವಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಪೂರ್ಣಗೊಂಡ ಕೆಲ ದೇವಸ್ಥಾನಗಳಿಗೂ ಹಣ ಬಿಡುಗಡೆ ಮಾಡಿರುವುದು ಗೊತ್ತಾಗಿದೆ. ವಿಜಿಲೆನ್ಸ್ ಇಲಾಖೆಯು ನಡೆಸಿದ ತನಿಖಾ ವರದಿಯನ್ನು ವಾರದೊಳಗೆ ಸರ್ಕಾರಕ್ಕೆ ಸಲ್ಲಿಸಲಿದೆ.
ಇದನ್ನೂ ಓದಿ: ತಿರುಪತಿ ಲಡ್ಡು ಪ್ರಸಾದ ತಯಾರಿ ಹೇಗೆ ಮಾಡ್ತಾರೆ, ಇದಕ್ಕೆ ಬಳಸುವ ಉತ್ಪನ್ನಗಳು ಯಾವುವು ಗೊತ್ತೆ? - laddu prasad tirupati