ನವದೆಹಲಿ: ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರು ಮಾಡಿದ ಭಾಷಣ ವಿವಾದಕ್ಕೆ ಕಾರಣವಾಗಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟನೆ ಕೇಳಿದೆ.
ನ್ಯಾಯಮೂರ್ತಿ ಯಾದವ್ ಅವರು ನೆಲದ ಕಾನೂನುಗಳು ಇಲ್ಲಿನ ಬಹುಸಂಖ್ಯಾತ ಜನರ ಇಚ್ಚೆಯ ಮೇರೆಗೆ ಕೆಲಸ ಮಾಡುತ್ತವೆ ಎಂದು ಹೇಳಿದ್ದರು. ಈ ಬಗ್ಗೆ ವರದಿಗಳು ಪ್ರಕಟವಾಗಿದ್ದು, ಸುಪ್ರೀಂ ಕೋರ್ಟ್ ಇದನ್ನು ಗಮನಿಸಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ವಿವರಣೆ ನೀಡಲು ಅಲಹಾಬಾದ್ ಹೈಕೋರ್ಟ್ಗೆ ಸೂಚಿಸಿದೆ.
ಸಿಜೆಐಗೆ ವಿಪಕ್ಷಗಳಿಂದ ಪತ್ರ: ಹೈಕೋರ್ಟ್ ನ್ಯಾಯಾಧೀಶರ ಹೇಳಿಕೆಗಳು ದೇಶದ ನ್ಯಾಯ ವ್ಯವಸ್ಥೆಯ ಮೇಲೆ ಅನುಮಾನ ಮೂಡಿಸುತ್ತಿವೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ವಿಪಕ್ಷಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಪತ್ರ ಬರೆದಿವೆ.
ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಸಿಜೆಐ ಖನ್ನಾ ಅವರಿಗೆ ಪತ್ರ ಬರೆದು, ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಕಾರ್ಯವೈಖರಿ ಕುರಿತು ಆಂತರಿಕ ವಿಚಾರಣೆ ನಡೆಸಬೇಕು. ನ್ಯಾಯಾಧೀಶರು ನಿಷ್ಪಕ್ಷಪಾತ ನ್ಯಾಯಾಂಗ ಪದ್ಧತಿ, ಜಾತ್ಯತೀತತೆಯ ಸಾಂವಿಧಾನಿಕ ತತ್ವಗಳನ್ನು ಉಲ್ಲಂಘಿಸಿದ್ದಾರೆ. ನ್ಯಾಯದ ಮೇಲೆಯೆ ಕರಿಛಾಯೆ ಮೂಡಿಸುತ್ತಿವೆ. ಸಾರ್ವಜನಿಕ ನಂಬಿಕೆಯನ್ನು ನಾಶಪಡಿಸುವಂತಿವೆ ಎಂದು ಆರೋಪಿಸಿದ್ದಾರೆ.
ಸಿಪಿಐ (ಎಂ) ನಾಯಕಿ ಬೃಂದಾ ಕಾರಟ್ ಅವರು ಕೂಡ ಸಿಜೆಐಗೆ ಪತ್ರ ರವಾನಿಸಿದ್ದು, ನ್ಯಾಯಾಧೀಶರು ಸಂವಿಧಾನದ ಮೇಲೆ ಪ್ರಮಾಣ ಮಾಡಿರುತ್ತಾರೆ. ಇಂತಹ ಹೇಳಿಕೆಗಳು ಆ ಪ್ರಮಾಣವನ್ನೇ ಪ್ರಶ್ನಿಸುವಂತಿವೆ. ಅವರ ನ್ಯಾಯ ವಿಚಾರಣೆಯೇ ಪ್ರಶ್ನಾರ್ಥವಾಗಿದೆ. ನ್ಯಾಯಮೂರ್ತಿ ಯಾದವ್ ಅವರನ್ನು ಹುದ್ದೆಯಿಂದಲೇ ಕೆಳಗಿಳಿಸಬೇಕು ಎಂದು ಆಗ್ರಹಿಸಿದ್ದಾರೆ. ಭಾರತೀಯ ವಕೀಲರ ಸಂಘವೂ, ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ಹೇಳಿಕೆಯನ್ನು ಖಂಡಿಸಿ ನಿರ್ಣಯವನ್ನು ಅಂಗೀಕರಿಸಿದೆ.
ನ್ಯಾಯಾಧೀಶರು ಹೇಳಿದ್ದೇನು?: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಆಯೋಜಿಸಿದ್ದ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಪಟ್ಟ ಕಾರ್ಯಕ್ರಮದಲ್ಲಿ ಮಾತನಾಡಿರುವ ಅಲಹಾಬಾದ್ ಹೈಕೋರ್ಟ್ನ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ಅವರು, ಹಿಂದುಸ್ತಾನವು ಬಹುಸಂಖ್ಯಾತರ ಇಚ್ಚೆಯಂತೆಯೇ ನಡೆದುಕೊಳ್ಳುತ್ತದೆ. ಹೀಗೆ ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ದೇಶದ ಕಾನೂನು ಕೂಡ ವಾಸ್ತವವಾಗಿ ಬಹುಸಂಖ್ಯಾತರ ಅಭಿಪ್ರಾಯದಂತೆ ಕೆಲಸ ಮಾಡುತ್ತದೆ. ಅವರ ಸಂತೋಷ ಮತ್ತು ಹಿತಕ್ಕಾಗಿಯೇ ಅವುಗಳಿವೆ. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರುವುದರಿಂದ ಸೌಹಾರ್ದತೆ, ಜಾತ್ಯತೀತತೆ ನೆಲೆಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.
ಇದನ್ನೂ ಓದಿ: 'ಎನ್ಡಿಆರ್ಎಫ್ ವ್ಯಾಜ್ಯ ಶೀಘ್ರ ಇತ್ಯರ್ಥಪಡಿಸಿಕೊಳ್ಳಿ': ಕರ್ನಾಟಕ, ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಲಹೆ