ಚಿತ್ತೂರು(ಆಂಧ್ರಪ್ರದೇಶ): ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟು, 30 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಪಲಮನೇರುವಿನಲ್ಲಿ ನಡೆದಿದೆ. ಚಿತ್ತೂರು - ಬೆಂಗಳೂರು ಮುಖ್ಯರಸ್ತೆಯ ಬಂಗೂರಪಾಳ್ಯಂ ಮಂಡಲದ ಮೊಗಲಿ ಕನುಮ ರಸ್ತೆಯಲ್ಲಿ ಬಸ್ ಮತ್ತು ಎರಡು ಲಾರಿಗಳ ನಡುವೆ ಡಿಕ್ಕಿಯಾದ ಪರಿಣಾಮ ಈ ದುಘರ್ಟನೆ ಸಂಭವಿಸಿದೆ.
ಚಿತ್ತೂರು ಕಡೆಯಿಂದ ಪಲಮನೇರು ಕಡೆಗೆ ಹೋಗುತ್ತಿದ್ದ ಎಪಿಎಸ್ಆರ್ಟಿಸಿ ಬಸ್ ಹಾಗೂ ಪಲಮನೇರು ಕಡೆಯಿಂದ ಬರುತ್ತಿದ್ದ ಕಬ್ಬಿಣದ ಸರಳುಗಳನ್ನು ಹೊತ್ತ ಲಾರಿ ಹಾಗೂ ಮತ್ತೊಂದು ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಗಾಯಾಳುಗಳನ್ನು ಪಲಮನೇರು ಆಸ್ಪತ್ರೆಗೆ ರವಾನಿಸಲಾಗಿದೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಿತ್ತೂರಿಗೆ ರವಾನಿಸಲಾಗಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಸಿಎಂ ಚಂದ್ರಬಾಬು ನಾಯ್ಡು ಸಂತಾಪ ಸೂಚಿಸಿದರು. ರಸ್ತೆ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿರುವುದು ನೋವಿನ ಸಂಗತಿ. ಮೃತರ ಕುಟುಂಬಗಳಿಗೆ ಸರ್ಕಾರ ನೆರವು ನೀಡಲಿದೆ ಎಂದಿರುವ ಅವರು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ.
ಸಚಿವ ನಾರಾ ಲೋಕೇಶ್ ಪ್ರತಿಕ್ರಿಯಿಸಿ, ಮುಗಿಲಿಘಾಟ್ ರಸ್ತೆ ಅಪಘಾತ ನನಗೆ ಆಘಾತ ಉಂಟುಮಾಡಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬಗಳ ಜೊತೆಗೆ ಸರ್ಕಾರ ನಿಲ್ಲಲಿದೆ ಎಂದು ಧೈರ್ಯ ತುಂಬಿದ್ದಾರೆ.
ಭೀಕರ ರಸ್ತೆ ಅಪಘಾತ ಮೃತಪಟ್ಟವರಿಗೆ ಸಾರಿಗೆ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ನೀಡುತ್ತಿರುವ ಚಿಕಿತ್ಸೆ ಬಗ್ಗೆ ಸಚಿವರು ವೈದ್ಯರೊಂದಿಗೆ ಚರ್ಚಿಸಿದರು. ಮೃತರ ಕುಟುಂಬಗಳಿಗೆ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಫುಟ್ಬೋರ್ಡ್ನಲ್ಲಿ ನೇತಾಡುತ್ತಾ ಬಸ್ ಸಂಚಾರ, ಕೈಜಾರಿ ಬಿದ್ದ ವಿದ್ಯಾರ್ಥಿ - ವಿಡಿಯೋ ವೈರಲ್ - Student Falls From Bus