ಚಂಡೀಗಢ (ಪಂಜಾಬ್): ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪತ್ನಿ ಡಾ.ಗುರ್ಪ್ರೀತ್ ಕೌರ್ ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಪುಟ್ಟ ಮಗಳನ್ನು ಹೂವಿನ ಮಳೆ ಸುರಿಸಿ, ವಾದ್ಯಗಳೊಂದಿಗೆ ಮನೆಗೆ ಸ್ವಾಗತಿಸಲಾಗಿದೆ. ಪುಟಾಣಿ ಮಗುವನ್ನು ತಾವೇ ಎತ್ತಿಕೊಂಡು ಮನೆಗೆ ಪ್ರವೇಶಿಸುವ ಮೂಲಕ ಸಿಎಂ ಮಾನ್ ಸಂತಸ ಹೆಚ್ಚಿಸಿಕೊಂಡರು.
ಸಿಎಂ ಭಗವಂತ್ ಮಾನ್, ಪತ್ನಿ ಡಾ.ಗುರ್ಪ್ರೀತ್ ಕೌರ್ ದಂಪತಿಗೆ ಗುರುವಾರ ಹೆಣ್ಣು ಮಗು ಜನಿಸಿದೆ. ಈ ವಿಷಯವನ್ನು ಖುದ್ದು ಮಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಂತರ ರಾತ್ರಿ ಆಸ್ಪತ್ರೆಗೆ ತೆರಳಿ ಸಿಎಂ ತಮ್ಮ ಮಗಳ ಮುಖ ನೋಡಿದ್ದರು. ಸೆಕ್ಯೂರಿಟಿ ಪ್ರೋಟೋಕಾಲ್ ಕಾರಣದಿಂದಾಗಿ ಇತರ ರೋಗಿಗಳಿಗೆ ತೊಂದರೆ ಉಂಟಾಗಬಾರದು ಎಂದು ರಾತ್ರಿ ಆಸ್ಪತ್ರೆಗೆ ತೆರಳಿದ್ದರು.
ಮಾನ್ ಅವರಿಗೆ ಗುರ್ಪ್ರೀತ್ ಕೌರ್ ಎರಡನೇ ಪತ್ನಿಯಾಗಿದ್ದು, ಈ ದಾಂಪತ್ಯಕ್ಕೆ ಮೊದಲ ಮಗು ಇದಾಗಿದೆ. ಆದ್ದರಿಂದ ಎರಡೂ ಕುಟುಂಬಗಳಲ್ಲಿ ಸಂಭ್ರಮ ಮನೆ ಮಾಡಿದೆ. ಇದೇ ಸಂತಸದಲ್ಲಿ ತಮ್ಮ ಮಗುವನ್ನು ಸ್ವತಃ ಸಿಎಂ ತೋಳುಗಳಲ್ಲಿ ಎತ್ತಿಕೊಂಡು ಮನೆಗೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಪತ್ನಿ ಗುರ್ಪ್ರೀತ್ ಕೌರ್ ಸೇರಿದಂತೆ ಕುಟುಂಬದ ಸದಸ್ಯರು ಕೂಡ ಉಪಸ್ಥಿತರಿದ್ದರು. ಈ ಮಗುವಿಗೆ ನಿಯಾಮತ್ ಎಂದು ನಾಮಕರಣ ಮಾಡಲಾಗಿದೆ. ಮಗುವಿನ ತಂದೆಯಾದ ಮಾನ್ ಅವರನ್ನು ದೆಹಲಿ ಸಿಎಂ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷದ ಹಲವು ನಾಯಕರು ಅಭಿನಂದಿಸಿದ್ದಾರೆ.
ಭಗವಂತ್ ಮಾನ್ ಈ ಮೊದಲು ಇಂದರ್‌ಪ್ರೀತ್ ಕೌರ್ ಅವರನ್ನು ಮದುವೆಯಾಗಿದ್ದರು. 2015ರಲ್ಲಿ ಮಾನ್ ಮತ್ತು ಇಂದರ್‌ಪ್ರೀತ್ ಕೌರ್ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರು. ರಾಜಕೀಯದ ಕಾರಣದಿಂದ ಪತ್ನಿಗೆ ವಿಚ್ಛೇದನ ನೀಡುತ್ತಿದ್ದೇನೆ ಎಂದು ಮಾನ್ ಹೇಳಿದ್ದರು. ಈ ದಾಂಪತ್ಯಕ್ಕೆ ದಿಲ್ಶನ್ ಮಾನ್ ಮತ್ತು ಸೀರತ್ ಕೌರ್ ಮಾನ್ ಎಂಬ ಇಬ್ಬರು ಮಕ್ಕಳು ಇದ್ದಾರೆ. ಈ ಮಕ್ಕಳು ತಮ್ಮ ತಾಯಿ ಇಂದರ್‌ಪ್ರೀತ್ ಕೌರ್ ಅವರೊಂದಿಗೆ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.
ತಮ್ಮ ತಂದೆ ಮಾನ್ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇಬ್ಬರೂ ಮಕ್ಕಳು ಭಾಗವಹಿಸಿದ್ದರು. ಇದಾದ ಬಳಿಕ 2022ರ ಜುಲೈನಲ್ಲಿ ಹರಿಯಾಣದ ಡಾ.ಗುರ್ಪ್ರೀತ್ ಕೌರ್ ಅವರೊಂದಿಗೆ ಭಗವಂತ್ ಮಾನ್ ಎರಡನೇ ವಿವಾಹವಾಗಿದ್ದರು. ಗುರ್ಪ್ರೀತ್ ಕೌರ್ ಕುಟುಂಬಕ್ಕೂ ರಾಜಕೀಯ ನಂಟು ಇದೆ. ಈಗ ಮೂರನೇ ಮಗುವಿಗೆ ಮಾನ್ ತಂದೆಯಾಗಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಗುವಿನ ತಂದೆಯಾದ ಪಂಜಾಬ್ ಸಿಎಂ ಭಗವಂತ್ ಮಾನ್