ಲಖನೌ (ಉತ್ತರ ಪ್ರದೇಶ): ಪ್ರಿಯಾಂಕಾ ಗಾಂಧಿ ಅವರ ಜೀವನದ ಮೊದಲ ಚುನಾವಣೆ ಸೋಲಿನೊಂದಿಗೆ ಪ್ರಾರಂಭವಾಗಲಿದೆ ಬಿಜೆಪಿ ನಾಯಕ ಮತ್ತು ಉತ್ತರ ಪ್ರದೇಶದ ಮಾಜಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಭವಿಷ್ಯ ನುಡಿದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ನಿಂತು ಗೆಲುವು ಸಾಧಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈಗ ಉತ್ತರ ಪ್ರದೇಶದ ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಖಾಲಿಯಾಗಲಿರುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸಲಿದ್ದಾರೆ.
ಸೋಮವಾರ ಪ್ರಿಯಾಂಕಾ ಗಾಂಧಿ ಅವರನ್ನು ಅದ್ಧೂರಿಯಾಗಿ ವಯನಾಡಿಗೆ ಸ್ವಾಗತಿಸಲಾಗಿದ್ದು, ಮುಂಬರುವ ಉಪಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ದಾಖಲೆಯ ಗೆಲುವಿನ ಅಂತರವನ್ನು ಗಳಿಸಲಿದ್ದಾರೆ ಎಂದು ಕಾಂಗ್ರೆಸ್ ವಿಶ್ವಾಸ ಕೂಡ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ದಿನೇಶ್ ಶರ್ಮಾ, ಪ್ರಿಯಾಂಕಾ ಗಾಂಧಿಯವರ ಜೀವನದ ಮೊದಲ ಚುನಾವಣೆ ಸೋಲಿನೊಂದಿಗೆ ಪ್ರಾರಂಭವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ರಾಹುಲ್ ಗಾಂಧಿ ಅವರು ರಾಯ್‌ಬರೇಲಿಗೆ ರಾಜೀನಾಮೆ ನೀಡಿದರೆ ಮತ್ತೆ ಗೆಲ್ಲುವೆ ಎಂಬ ಆತ್ಮವಿಶ್ವಾಸ ಇಲ್ಲ. ಅದು ಅವರಿಗೂ ಗೊತ್ತು. ಇದೊಂದು ಬಾರಿ ರಾಯ್‌ಬರೇಲಿ ಕ್ಷೇತ್ರದಲ್ಲಿ ಅದೇಗೋ ಗೆದ್ದಿದ್ದಾರೆ. ಆದರೆ, ತಾವು ಮತ್ತೆ ಸ್ಪರ್ಧಿಸಿದರೆ ಉತ್ತರ ಪ್ರದೇಶದ ಜನ ಸೋಲಿಸುತ್ತಾರೆ ಎಂಬುವುದು ಅವರಿಗೂ ಗೊತ್ತು. ಅದಕ್ಕೇ ಅವರಿಗೆ ಉತ್ತರ ಪ್ರದೇಶದ ಭಯ. ಪ್ರಿಯಾಂಕಾ ಗಾಂಧಿ 'ಲಡ್ಕಿ ಹೂಂ, ಲಡ್ ಸಕ್ತಿ ಹೂ' ಎನ್ನುತ್ತಿದ್ದರು. ಹೋರಾಡಲು ಸಾಧ್ಯವಾದರೆ ಉತ್ತರ ಪ್ರದೇಶದಿಂದ ಬಂದು ಸ್ಪರ್ಧಿಸಲಿ. ವಯನಾಡಿನ ಜನತೆ ಕೂಡ ಎಚ್ಚೆತ್ತುಕೊಳ್ಳಲಿದ್ದು, ಪ್ರಿಯಾಂಕಾ ಗಾಂಧಿಯವರ ಮೊದಲ ಚುನಾವಣೆ ಸೋಲಿನೊಂದಿಗೆ ಆರಂಭವಾಗಲಿದೆ ಎಂದರು.
ಇದನ್ನೂ ಓದಿ: ವಯನಾಡ ಲೋಕಸಭಾ ಕ್ಷೇತ್ರದ ಉಪ ಚುನಾವಣೆ; ಪ್ರಿಯಾಂಕಾರನ್ನು ಸ್ವಾಗತಿಸಿದ ಕೇರಳ ಕಾಂಗ್ರೆಸ್ - Priyanka Gandhi
ಉತ್ತರ ಪ್ರದೇಶದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರವನ್ನು ರಾಹುಲ್ ಉಳಿಸಿಕೊಳ್ಳಲಿದ್ದಾರೆ. ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ಪರ್ಧಿಸಲಿರುವ ವಯನಾಡು ಕ್ಷೇತ್ರವನ್ನು ರಾಹುಲ್ ತೆರವು ಮಾಡಲಿದ್ದಾರೆ ಎಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ನವದೆಹಲಿಯಲ್ಲಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ರಾಜ್ಯ ಘಟಕದ ಪ್ರತಿಕ್ರಿಯೆ ಬಂದಿದೆ.
ನಿನ್ನೆ ನವದೆಹಲಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ , ರಾಹುಲ್, ಪ್ರಿಯಾಂಕಾ ಗಾಂಧಿ ಮತ್ತು ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸಿದ್ದರು. ರಾಹುಲ್ ಗಾಂಧಿ ಮಾತನಾಡಿ, ವಯನಾಡು ಕ್ಷೇತ್ರವನ್ನು ಬಿಟ್ಟುಕೊಡುತ್ತಿರುವುದು ಕಷ್ಟವಾಗುತ್ತಿದೆ. ಆದರೆ ಅನಿವಾರ್ಯವಾಗಿ ನಿರ್ಧಾರ ಮಾಡಬೇಕಾಗಿದೆ. ಈ ತೆರವಾಗುವ ಸ್ಥಾನದಿಂದ ಪ್ರಿಯಾಂಕಾ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದರು.