ಪ್ರಯಾಗರಾಜ್(ಉತ್ತರ ಪ್ರದೇಶ): ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ ಪ್ರಯಾಗ್‌ರಾಜ್‌ಗೆ ಆಗಮಿಸಿರುವ ಸಾಧು ಆವಾಹನ್ ಅಖಾರದ ಸಂತ ಗೀತಾನಂದ ಜಿ.ಮಹಾರಾಜ್ ಅವರು 45 ಕೆ.ಜಿ ತೂಕದ ರುದ್ರಾಕ್ಷಿ ಜಪಮಾಲೆಯನ್ನೇ ತಮ್ಮ ತಲೆ ಮೇಲೆ ಕಿರೀಟದಂತೆ ತೊಟ್ಟುಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಸುಮಾರು 2,200 ರುದ್ರಾಕ್ಷಿ ಜಪಮಾಲೆಗಳಿಂದ ಕಿರೀಟವನ್ನು ಮಾಡಿಕೊಂಡಿದ್ದಲ್ಲದೇ, ತಮ್ಮ ದೇಹದ ಮೇಲೆ ರುದ್ರಾಕ್ಷಿ ರಕ್ಷಾಕವಚವನ್ನೂ ಧರಿಸಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ವಿಶಿಷ್ಟ ವೇಷಭೂಷಣಗಳಿಂದ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಈ ಸಂತನನ್ನು ಕಂಡ ಜನರು, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದಾರೆ.
2019ರಲ್ಲಿ ನಡೆದ ಅರ್ಧ ಕುಂಭ ಮೇಳದಲ್ಲಿ ಗೀತಾನಂದ ಜಿ.ಮಹಾರಾಜ್ ಅವರು ಲೋಕಕಲ್ಯಾಣ ಮತ್ತು ಸನಾತನ ಧರ್ಮವನ್ನು ಬಲಪಡಿಸುವ ಆಶಯದೊಂದಿಗೆ ಇಂತಹದ್ದೊಂದು ಪ್ರತಿಜ್ಞೆ ಮಾಡಿದ್ದರು. ಇದೀಗ ರುದ್ರಾಕ್ಷಿಯ ಕಿರೀಟ ಧರಿಸಿ ಪ್ರಯಾಗ್‌ರಾಜ್ ಮಹಾಕುಂಭ ಮೇಳಕ್ಕೆ ಆಗಮಿಸಿದ್ದಾರೆ. ಕಳೆದ ಐದು ವರ್ಷಗಳಿಂದಲೂ ರುದ್ರಾಕ್ಷಿ ಕಿರೀಟ ಧರಿಸಿಕೊಂಡೇ ಇರುವ ಇವರು 2031ರ ಕುಂಭದಲ್ಲಿ ಕೊನೆಗೊಳಿಸುತ್ತಾರಂತೆ.
ಹರಿಯಾಣದಿಂದ ಬಂದಿರುವ ಗೀತಾನಂದ ಅವರು ತಲೆಯಿಂದ ಹಿಡಿದು ಹೊಟ್ಟೆಯವರೆಗೆ ಎರಡು ಲಕ್ಷಕ್ಕೂ ಹೆಚ್ಚು ರುದ್ರಾಕ್ಷಿ ಧರಿಸುವುದರಿಂದ ಜನರು ಇವರನ್ನು ರುದ್ರಾಕ್ಷ್ ಬಾಬಾ ಎಂಬ ಹೆಸರಿನಿಂದಲೂ ಕರೆಯುತ್ತಾರಂತೆ.
''ಆರಂಭದ ದಿನಗಳಲ್ಲಿ ಭಾರವಾದ ರುದ್ರಾಕ್ಷಿ ಕಿರೀಟವನ್ನು ನಿಭಾಯಿಸಲು ಕೆಲವು ತೊಂದರೆಗಳು ಎದುರಾದವು. ಆದರೆ, ದಿನ ಕಳೆದಂತೆ ರುದ್ರಾಕ್ಷಿ ಕಿರೀಟ ನನ್ನ ಜೀವನದ ಭಾಗವಾಯಿತು. ಕಠಿಣ ಸಾಧನೆಯ ಮೂಲಕವೇ ದೇವರನ್ನು ಮೆಚ್ಚಿಸುವ ಪ್ರತಿಜ್ಞೆ ಇದು. 2031ರಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭಮೇಳದವರೆಗೂ ಈ ಪ್ರತಿಜ್ಞೆ ಮುಂದುವರಿಯುತ್ತದೆ'' ಎಂದು ಗೀತಾನಂದ ಮಹಾರಾಜ್ ಹೇಳಿದರು.
ಉತ್ತರ ಪ್ರದೇಶದ ಪ್ರಯಾಗ್‌ರಾಜ್ (ಅಲಹಾಬಾದ್)ನಲ್ಲಿ ಮುಂದಿನ ವರ್ಷದ ಜನವರಿ 13ರಂದು ಆರಂಭವಾಗಲಿರುವ ಮಹಾಕುಂಭ ಮೇಳಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. 2025ರ ಜನವರಿ 13ರಿಂದ ಆರಂಭಗೊಳ್ಳಲಿರುವ ಮಹಾಕುಂಭ ಸುಮಾರು 50 ದಿನಗಳವರೆಗೆ ನಡೆಯಲಿದೆ. ಹಾಗಾಗಿ ಸಾರ್ವಜನಿಕರು, ಭಕ್ತರು, ಸಾಧು-ಸಂತರು, ಋಷಿ ಮುನಿಗಳು, ಯೋಗಿಗಳು ಪ್ರಯಾಗ್‌ರಾಜ್‌ಗೆ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಮಹಾಕುಂಭ ಮೇಳದ ರೋಡ್ ಶೋ ನಡೆಸಲು ಯುಪಿ ಸರ್ಕಾರ ನಿರ್ಧಾರ: ಪ್ರತಿಪಕ್ಷಗಳಿಂದ ಟೀಕೆ