ಲಖನೌ (ಉತ್ತರ ಪ್ರದೇಶ): ಇಟಾಹ್ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ವೇಳೆಯಲ್ಲಿ ಯುವಕನೊಬ್ಬ ಮತಗಟ್ಟೆಯಲ್ಲಿ ಹಲವು ಬಾರಿ ವೋಟ್ ಮಾಡಿರುವ ಹಿನ್ನೆಲೆ ಉತ್ತರ ಪ್ರದೇಶ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಂಡಿದೆ. ಈ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಜೊತೆಗೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಆರೋಪಿ ಯುವಕನನ್ನು ಬಂಧಿಸಲಾಗಿದೆ.
ಈ ಮತಗಟ್ಟೆಯಲ್ಲಿ ಮರು ಚುನಾವಣೆ ನಡೆಸಲು ಚುನಾವಣಾ ಆಯೋಗ ಶಿಫಾರಸು ಮಾಡಿದೆ. ಈ ವಿಚಾರವಾಗಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.
ಆರೋಪಿ ಯುವಕ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗೆ ನಿರಂತರವಾಗಿ ಹಲವು ಬಾರಿ ಮತ ಹಾಕುತ್ತಿರುವುದು ಕಂಡುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗದ ಮೇಲೆ ಪ್ರತಿಪಕ್ಷಗಳು ಒತ್ತಡ ಹೇರಿದ್ದವು. ಇದಾದ ಬಳಿಕ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಹೇಳಿಕೆ: ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಮಾತನಾಡಿ, ''ವ್ಯಕ್ತಿಯೊಬ್ಬರು ಹಲವು ಬಾರಿ ಮತ ಚಲಾಯಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಇಟಾ ಜಿಲ್ಲೆಯ ನಯಾಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ'' ಎಂದು ಹೇಳಿದರು.
ವಿಡಿಯೋದಲ್ಲಿ ಹಲವು ಬಾರಿ ಮತದಾನ ಮಾಡುತ್ತಿರುವ ವ್ಯಕ್ತಿಯನ್ನು ಖಿರಿಯಾ ಪಾಮ್ರಾನ್ ಗ್ರಾಮದ ನಿವಾಸಿ ರಾಜನ್ ಸಿಂಗ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಮತಗಟ್ಟೆಯ ಎಲ್ಲ ಸಿಬ್ಬಂದಿಯನ್ನು ಅಮಾನತುಗೊಳಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ'' ಎಂದ ಅವರು, ''ಸಂಬಂಧಪಟ್ಟ ಮತಗಟ್ಟೆಯಲ್ಲಿ ಮರು ಮತದಾನ ಮಾಡುವಂತೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ'' ಎಂದು ತಿಳಿಸಿದರು.
''ಉತ್ತರ ಪ್ರದೇಶದ ಉಳಿದ ಹಂತಗಳ ಚುನಾವಣೆಯಲ್ಲಿ ಮತದಾರರ ಗುರುತಿನ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಅನುಸರಿಸಲು ಎಲ್ಲಾ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ'' ಎಂದರು.