ವಯನಾಡ್: ಭೀಕರ ಭೂ ಕುಸಿತಕ್ಕೆ ಒಳಗಾದ ವಯನಾಡಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಹಾನಿಗೊಳಗಾದ ಪ್ರದೇಶದ ವೈಮಾನಿಕ ಸಮೀಕ್ಷೆ ನಡೆಸಿದರು. ಈ ವೇಳೆ ಹಾನಿಗೊಳಗಾದ ವೆಲ್ಲಾರ್ಮಾಲಾದ ಜಿವಿಹೆಚ್ಎಸ್ ಶಾಲೆಗೆ ಭೇಟಿ ನೀಡಿದ ಅವರು, ಘಟನೆಯಲ್ಲಿ ಎಷ್ಟು ಮಕ್ಕಳು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ ಎಂದು ಗದ್ಗದಿತವಾಗಿ ಕೇಳಿದರು.
ದುರಂತದಲ್ಲಿ ಹೆಚ್ಚು ಹಾನಿಗೊಂಡಿರುವ ಚೂರಾಲ್ಮಾಲ, ಮುಂಡಕೈ ಪ್ರದೇಶಕ್ಕೆ ಭಾರತೀಯ ಸೇನಾ ಹೆಲಿಕಾಪ್ಟರ್ನಿಂದ ಬಂದಿಳಿದ ಅವರು, ಅಲ್ಲಿನ ಪುನರ್ವಸತಿ ಕಾರ್ಯಾಚರಣೆಯನ್ನು ಪರಿಶೀಲನೆ ನಡೆಸಿದರು. ಇದಕ್ಕೆ ಮುನ್ನ ಕಣ್ಣೂರು ವಿಮಾನ ನಿಲ್ದಾಣಕ್ಕೆ ದೆಹಲಿಯಿಂದ ಬಂದಿಳಿದ ಅವರನ್ನು ಕೇರಳ ರಾಜ್ಯಪಾಲರು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ವಾಗತಿಸಿದರು.
ಇದೇ ವೇಳೆ ಭೂ ಕುಸಿತದಿಂದ ಹಾನಿಗೊಳಗಾದ ಕಲಪೆಟ್ಟ ಶಾಲೆಗೆ ಮೊದಲು ಭೇಟಿ ನೀಡಿದರು. ಈ ವೇಳೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇಂದ್ರ ಸಚಿವ ಸುರೇಶ್ ಗೋಪಿನಾಥ್, ಆಂತರಿಕ ಸಚಿವರ ಕೇಂದ್ರ ತಂಡ ಅವರ ಜೊತೆಗಿದ್ದರು.
ಹಾನಿಗೊಳಗಾದ ಶಾಲೆ ನೋಡಿ ತೀವ್ರ ಬೇಸರ ಹೊಂದಿದ ಅವರು, ಭೂಕುಸಿತ ಸಂತ್ರಸ್ತರ ಪುನರ್ವಸತಿ ಕಾರ್ಯ ಸೇರಿದಂತೆ ಅನೇಕ ವಿಚಾರಗಳ ಕುರಿತು ಸಿಎಂ ಪಿಣರಾಯಿ ವಿಜಯನ್ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು. ಶಾಲೆಯಲ್ಲಿ 15 ನಿಮಿಷ ಕಳೆದ ಅವರು, ಹೊಸ ಶಾಲಾ ಕಟ್ಟಡ ನಿರ್ಮಾಣದ ಯೋಜನೆ ಕುರಿತು ವಿಚಾರಿಸಿದರು.
ಹಾನಿಗೊಳಗಾದ ಜಿವಿಹೆಚ್ ಶಾಲೆ ವೆಲ್ಲಾರ್ಮಾಲಾದಲ್ಲಿ 582 ವಿದ್ಯಾರ್ಥಿಗಳಿದ್ದು, 27 ಮಂದಿ ನಾಪತ್ತೆಯಾಗಿದ್ದಾರೆ ಎಂಬ ವರದಿಯಾಗಿದೆ.
ಇದಾದ ಬಳಿಕ ಭಾರತೀಯ ಸೇನೆ ನಿರ್ಮಾಣ ಮಾಡಿರುವ 190 ಅಡಿ ಉದ್ದದ ಬೈಲಿ ಸೇತುವೆ ಮೇಲೆ ಅವರು ನಡೆದು, ಸೇನಾ ಅಧಿಕಾರಿಗಳೊಂದಿಗೆ ಮಾತುಕತಡೆ ನಡೆಸಿದರು.
ಸಂತ್ರಸ್ತರೊಂದಿಗೆ ಮಾತುಕತೆ: ಮಧ್ಯಾಹ್ನ 2.30ರ ಸಮಯದಲ್ಲಿ ಮೆಪ್ಪಾಡಿಯಲ್ಲಿನ ನಿರಾಶ್ರಿತ ಶಿಬಿರಕ್ಕೆ ತೆರಳಿದ ದುರಂತದಲ್ಲಿ ಗಾಯಗೊಂಡವರು ಮತ್ತು ಆಶ್ರಯ ಪಡೆದ ಸಂತ್ರಸ್ತರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಅವರು, ಸಂತ್ರಸ್ತರಿಗೆ ಮಾತುಗಳನ್ನು ಕಾಳಜಿಯಿಂದ ಆಲಿಸಿ, ಅವರ ಸಾಂತ್ವನ ನೀಡಿದರು.
ಚೂರಲ್ಮಾಲಕ್ಕೆ ವಾಹನದಲ್ಲಿ ಆಗಮಿಸಿದ ಅವರು ರಕ್ಷಣಾ ಸಿಬ್ಬಂದಿ, ರಾಜ್ಯ ಮುಖ್ಯ ಕಾರ್ಯದರ್ಶಿ ವಿ ವೇಣು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಪರಿಸ್ಥಿತಿ ಅವಲೋಕಿಸಿದರು. ಈ ವೇಳೆ ಕಾಲಿನಲ್ಲಿ ನಡೆದು ಹೋಗಿ ಅವಶೇಷ, ಕುಸಿದ ಕಟ್ಟಡಗಳ ಪ್ರದೇಶವನ್ನು ನೋಡಿದರು.
ಹಾನಿಗೊಳಗಾದ ಪುಂಚಿರಿಮಟ್ಟಂ, ಮುಂಡಕ್ಕೈಮ ಚೂರಲ್ಮಾಲದಲ್ಲೂ ಅವರು ಪರಿಶೀಲನೆ ನಡೆಸಿದರು. ಬಳಿಕ ಕೇರಳ ರಾಜ್ಯಪಾಲ ಅರೀಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರೆ ಅಧಿಕಾರಿಗಳೊಂದಿಗೆ ಅವರು ಉನ್ನತ ಮಟ್ಟದ ಸಭೆ ನಡೆಸಿದರು.
ಪ್ರಧಾನಿ ಭೇಟಿಗೆ ಮುನ್ನ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕೇರಳ ಸಿಎಂ, ಪುನರ್ವಸತಿ ಮತ್ತು ರಕ್ಷಣಾ ಕಾರ್ಯಕ್ಕೆ 2 ಸಾವಿರ ಕೋಟಿ ಆರ್ಥಿಕ ಸಹಾಯವನ್ನು ಕೇಂದ್ರದಿಂದ ಕೋರಿದ್ದರು. (ಐಎಎನ್ಎಸ್/ಪಿಟಿಐ)
ಇದನ್ನೂ ಓದಿ: ವಯನಾಡ್ಗೆ ಭೇಟಿ ನೀಡಿದ ಪ್ರಧಾನಿ, ವೈಮಾನಿಕ ಸಮೀಕ್ಷೆ; ಸಂತ್ರಸ್ತರಿಗೆ ಮೋದಿ ಸಾಂತ್ವನ