ನವದೆಹಲಿ: ಇಂದು ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಶುಭಕೋರಿದ್ದಾರೆ.
ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ, "ದೇಶವಾಸಿಗಳಿಗೆ ಮಹಾವೀರ ಜಯಂತಿಯ ಶುಭ ಸಂದರ್ಭದ ಶುಭಾಶಯಗಳು. ಭಗವಾನ್ ಮಹಾವೀರರ ಶಾಂತಿ, ಸಂಯಮ ಮತ್ತು ಸದ್ಭಾವನೆಯ ಸಂದೇಶಗಳು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಸ್ಫೂರ್ತಿಯಾಗಿದೆ" ಎಂದು ಬರೆದಿದ್ದಾರೆ.
ಗೃಹ ಸಚಿವ ಅಮಿತ್ ಶಾ ಶುಭಕೋರಿದ್ದು, ದೇಶದ ಸಮಸ್ತ ಜನತೆಗೆ ಭಗವಾನ್ ಮಹಾವೀರ ಜಯಂತಿಯ ಶುಭಾಶಯಗಳು. ತ್ಯಾಗ, ಸತ್ಯ ಮತ್ತು ಅಹಿಂಸೆಯ ಶಾಶ್ವತ ಸಂಕೇತವಾದ ಭಗವಾನ್ ಮಹಾವೀರರು ತಮ್ಮ ಬೋಧನೆಗಳ ಮೂಲಕ ಇಡೀ ಮಾನವ ಜನಾಂಗದ ಕಲ್ಯಾಣಕ್ಕೆ ದಾರಿ ಮಾಡಿಕೊಟ್ಟರು. ಅವರ ಪಂಚಶೀಲ ತತ್ವಗಳು ಜನರಿಗೆ ಮಾರ್ಗದರ್ಶನ ನೀಡುತ್ತಿವೆ" ಎಂದು ಪೋಸ್ಟ್ ಮಾಡಿದ್ದಾರೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಮಹಾವೀರರು ಜನಿಸಿದ ದಿನವಾದ ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿಯಂದು ಜಯಂತಿ ಆಚರಿಸಲಾಗುತ್ತದೆ. ಇದನ್ನು ಮಹಾವೀರ ಜಯಂತಿ ಅಥವಾ ಮಹಾವೀರ ಜನ್ಮ ಕಲ್ಯಾಣಕ್ ಎಂದೂ ಕರೆಯಲಾಗುತ್ತದೆ. ಈ ದಿನ ಜೈನ ಅನುಯಾಯಿಗಳು ಬಸದಿಗಳಲ್ಲಿ ಮಹಾವೀರರ ಮೂರ್ತಿಗೆ ಜಲಾಭಿಷೇಕ, ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಜೈನ ಪಂಥದ ಗುರುಗಳು ಭಗವಾನ್ ಮಹಾವೀರರ ಪಂಚಶೀಲ ತತ್ವಗಳನ್ನು ಬೋಧಿಸುತ್ತಾರೆ.
ಮಹಾವೀರರು ಬೋಧಿಸಿದ 5 ತತ್ವಗಳು:
ಅಹಿಂಸೆ: ಜೈನ ಧರ್ಮದಲ್ಲಿ ಅಹಿಂಸೆ ಮೂಲಭೂತ ತತ್ವ. ಈ ತತ್ವದ ಪ್ರಕಾರ ಹಿಂಸೆಯಿಂದ ದೂರವಿರಬೇಕು. ಅಪ್ಪಿತಪ್ಪಿಯೂ ಯಾರೊಬ್ಬರನ್ನು (ಪ್ರಾಣಿ, ಪಕ್ಷಿ, ಮನುಷ್ಯ) ನೋಯಿಸಬಾರದು.
ಸತ್ಯ: ಭಗವಾನ್ ಮಹಾವೀರರ ಎರಡನೇ ತತ್ವ ಸತ್ಯ. ಈ ತತ್ವದಲ್ಲಿ, ಸತ್ಯವನ್ನು ನಿಜವಾದ ಅಂಶವೆಂದು ಪರಿಗಣಿಸಿ ಅದನ್ನೇ ಅನುಸರಿಸಬೇಕು. ಸತ್ಯವನ್ನು ಪಾಲಿಸುವವನು ಬುದ್ಧಿವಂತನೆನಸಿಕೊಳ್ಳುತ್ತಾನೆ ಮತ್ತು ಮರಣವನ್ನೂ ದಾಟುತ್ತಾನೆ.
ಆಸ್ತೇಯ: ಭಗವಾನ್ ಮಹಾವೀರರ ಮೂರನೇ ತತ್ವ ಆಸ್ತೇಯ. ಈ ತತ್ವವು ಇನ್ನೊಬ್ಬರ ಆಸ್ತಿಯನ್ನು ಕದಿಯಬಾರದು. ಅನುಮತಿಯಿಲ್ಲದೆ ಬೇರೆಯವರಿಂದ ವಸ್ತುಗಳನ್ನು ತೆಗೆದುಕೊಳ್ಳಬಾರದು ಎಂದು ತಿಳಿಸುತ್ತದೆ.
ಅಪರಿಗ್ರಹ: ಭಗವಾನ್ ಮಹಾವೀರರ ನಾಲ್ಕನೇ ತತ್ವ ಅಪರಿಗ್ರಹ. ಅಪರಿಗ್ರಹವೆಂದರೆ ಯಾವುದೇ ವಸ್ತುಗಳ ಮೇಲೆ ಹೆಚ್ಚಿನ ವ್ಯಾಮೋಹ ಹೊಂದಬಾರದು. ಅದು ಹಣವಾಗಿರಬಹುದು, ಸಂಪತ್ತಾಗಿರಬಹುದು ಅಥವಾ ವಸ್ತುವೇ ಆಗಿರಬಹುದು. ಈ ತತ್ವವನ್ನು ಅನುಸರಿಸುವುದರಿಂದ ಪ್ರಜ್ಞಾವಂತರಾಗಿ ಲೌಕಿಕ ಮತ್ತು ಇಂದ್ರಿಯ ಸುಖಗಳನ್ನು ತ್ಯಜಿಸುತ್ತಾರೆ.
ಬ್ರಹ್ಮಚರ್ಯ: ಭಗವಾನ್ ಮಹಾವೀರರ ಕೊನೆಯ ತತ್ವ ಬ್ರಹ್ಮಚರ್ಯ. ಈ ತತ್ವವು ಬ್ರಹ್ಮಚರ್ಯ ಅನುಸರಿಸುವುದನ್ನು ತಿಳಿಸುತ್ತದೆ.
ಇದನ್ನೂ ಓದಿ: ಕೇದಾರನಾಥ ಧಾಮದಲ್ಲಿ ಶಿವಸ್ತೋತ್ರ ಪಠಿಸುತ್ತಿದ್ದ ಮೃತ್ಯುಂಜಯ ಹಿರೇಮಠ ಹಠಾತ್ ನಿಧನ - kedarnath vedpathi dies