ನವದೆಹಲಿ: ಮಾಜಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು "ಒಂದು ರಾಷ್ಟ್ರ, ಒಂದು ಚುನಾವಣೆ"ಯ ಅಧ್ಯಯನವನ್ನು ಚುರುಕುಗೊಳಿಸಿದೆ. ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಹಣಕಾಸು ತಜ್ಞರು, ವಿರೋಧ ಪಕ್ಷಗಳ ನಾಯಕರು, ಖ್ಯಾತ ನ್ಯಾಯಶಾಸ್ತ್ರಜ್ಞರ ಅಭಿಪ್ರಾಯ, ಸಲಹೆಗಳನ್ನು ಸಂಗ್ರಹಿಸುತ್ತಿದೆ.
ಸಮಿತಿಯ ಮುಖ್ಯಸ್ಥ ಕೋವಿಂದ್ ಮಂಗಳವಾರ ವಿವಿಧ ವಿರೋಧ ಪಕ್ಷಗಳ ನಾಯಕರ ಜೊತೆ ಸಂವಾದ ನಡೆಸಿದರು. ತೃಣಮೂಲ ಕಾಂಗ್ರೆಸ್ ನಾಯಕರಾದ ಸುದೀಪ್ ಬಂಡೋಪಾಧ್ಯಾಯ, ಕಲ್ಯಾಣ್ ಬ್ಯಾನರ್ಜಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಮಾಜಿ ರಾಜ್ಯಸಭಾ ಸಂಸದ ನೀಲೋತ್ಪಾಲ್ ಬಸು, ಕೆ.ಕೆ.ಶ್ರೀವಾಸ್ತವ, ಡಾ.ಹರೀಶ್ ಚಂದರ್ ಯಾದವ್ ಮತ್ತಿತರ ನಾಯಕರು ತಮ್ಮ ಅಭಿಪ್ರಾಯ, ಸಲಹೆಗಳನ್ನು ಸಮಿತಿ ಮುಂದೆ ಮಂಡಿಸಿದ್ದಾರೆ.
ರಾಜಕೀಯ ಪಕ್ಷಗಳೊಂದಿಗೆ ತಮ್ಮ ಚರ್ಚೆಯನ್ನು ಮುಂದುವರೆಸಿರುವ ಸಮಿತಿಯು, ಗೋವಾದ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಅಧ್ಯಕ್ಷ ದೀಪಕ್ ಪಾಂಡುರಂಗ ಧವಲೀಕರ್ ಅವರೊಂದಿಗೆ ಸಂವಾದ ನಡೆಸಿತು. ಈ ವೇಳೆ ಅವರು ಒಂದು ರಾಷ್ಟ್ರ ಒಂದು ಚುನಾವಣೆ ಕಲ್ಪನೆಗೆ ತನ್ನ ಬೆಂಬಲ ನೀಡಿದರು. ಇದಲ್ಲದೇ, ಕೇಂದ್ರ ಸಚಿವ, ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಪಶುಪತಿ ಕುಮಾರ್ ಪರಸ್, ಸಂಸದ ಪ್ರಿನ್ಸ್ ರಾಜ್, ವಕ್ತಾರ ಸಂಜಯ್ ಸರ್ರಾಫ್, ಪ್ರಧಾನ ಕಾರ್ಯದರ್ಶಿ ರಾಮ್‌ಜಿ ಸಿಂಗ್ ಅವರ ಅಭಿಪ್ರಾಯ ಪಡೆದುಕೊಂಡಿದೆ.
ನ್ಯಾಯಶಾಸ್ತ್ರಜ್ಞರ ಅಭಿಪ್ರಾಯ: ಜನವರಿ 27ರಂದು ಕೋವಿಂದ್ ಅವರು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್, ಮದ್ರಾಸ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಮತ್ತು ಭಾರತೀಯ ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು. ಇದಲ್ಲದೇ, ಅಲಹಾಬಾದ್ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ದಿಲೀಪ್ ಭೋಸಲೆ, ದೆಹಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ರಾಜೇಂದ್ರ ಮೆನನ್ ಅವರೊಂದಿಗೂ ಸಮಾಲೋಚನೆ ನಡೆಸಿದ್ದರು.
ಹಣಕಾಸು ಮತ್ತು ಆರ್ಥಿಕ ತಜ್ಞರೊಂದಿಗೂ ಚರ್ಚೆ ಆರಂಭಿಸಿರುವ ಸಮಿತಿಯು, ಸ್ಪೈಸ್‌ಜೆಟ್ ಏರ್‌ಲೈನ್ಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅಜಯ್ ಸಿಂಗ್, ASSOCHAMನ ಪ್ರಧಾನ ಕಾರ್ಯದರ್ಶಿ ಮತ್ತು ಸಹಾಯಕ ಪ್ರಧಾನ ಕಾರ್ಯದರ್ಶಿ ಜೊತೆಗೂ ಸಂವಾದ ನಡೆಸಿದೆ. ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಆಗುವ ಆರ್ಥಿಕ ಅನುಕೂಲಗಳ ಕುರಿತು ಅಜಯ್ ಸಿಂಗ್ ವಿವರವಾಗಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.
ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ: ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ಸಾರ್ವಜನಿಕ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಅಸ್ತಿತ್ವದಲ್ಲಿರುವ ಕಾನೂನು, ಆಡಳಿತಾತ್ಮಕ ಚೌಕಟ್ಟಿನಲ್ಲಿ ಏನೆಲ್ಲಾ ಬದಲಾವಣೆಗಳನ್ನು ಮಾಡಲು ಸಾಧ್ಯ ಎಂಬುದರ ಬಗ್ಗೆ ಜನರು ಅಭಿಪ್ರಾಯಗಳನ್ನು ಸಲ್ಲಿಸಬಹುದು.
ಇದನ್ನೂ ಓದಿ: ಒಂದು ರಾಷ್ಟ್ರ, ಒಂದು ಚುನಾವಣೆ : ಕೋವಿಂದ್ ಸಮಿತಿ ವಿಸರ್ಜನೆಗೆ ಖರ್ಗೆ ಆಗ್ರಹ