ಲಾತೂರ್ (ಮಹಾರಾಷ್ಟ್ರ): ವೈದ್ಯಕೀಯ ಪ್ರವೇಶ ಪರೀಕ್ಷೆ (NEET) ಪತ್ರಿಕೆ ಸೋರಿಕೆ ಪ್ರಕರಣ ಇದೀಗ ಮಹಾರಾಷ್ಟ್ರದ ಲಾತೂರ್ನಲ್ಲೂ ಸದ್ದು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತರನ್ನು ನಾಂದೇಡ್‌ನ ಎಟಿಎಸ್ ತಂಡವು ಶನಿವಾರ ಬಂಧಿಸಿದೆ. ಸಂಜಯ್ ತುಕಾರಾಮ್ ಜಾಧವ್ ಮತ್ತು ಜಾಲೀಲ್ ಉಮಾರ್ ಖಾನ್ ಪಠಾಣ್ ಅವರನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಶಂಕೆ ಆರೋಪದ ಮೇಲೆ ಬಂಧಿಸಲಾಗಿದ್ದು, ಭಾನುವಾರ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿತು. ಆದರೆ, ಭಾನುವಾರ ಸಂಜೆ ಜಿಲ್ಲಾ ಪರಿಷದ್ ಶಾಲೆಯ ಶಿಕ್ಷಕರಾಗಿದ್ದ ಸಂಜಯ್ ತುಕಾರಂ ಜಾಧವ್ ಮತ್ತು ಜಾಲೀಲ್ ಉಮಾರ್ ಖಾನ್ ಬಂಧಿಸಲಾಗಿದೆ. ಸದ್ಯ ಪ್ರಕರಣದಲ್ಲಿ ನಾಲ್ವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಲಾತೂರ್‌ನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೆಹಲಿಯ ಈರಣ್ಣ ಮಷ್ಣಜಿ ಕೊಂಗಾಲ್ವಾರ್ ಮತ್ತು ಗಂಗಾಧರ್ (ಪೂರ್ಣ ಹೆಸರು ಮರೆ ಮಾಚಲಾಗಿದೆ) ಸೇರಿದಂತೆ ನಾಲ್ವರ ವಿರುದ್ಧ ಸೆಕ್ಷನ್ 3(ವಿ), ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಕಾಯಿದೆ 4 ಮತ್ತು 10, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 120 (ಬಿ) ಮೇಲೆ ಪ್ರಕರಣ ದಾಖಲಿಸಲಾಗಿದೆ.
ಜೊತೆಗೆ ಲಾತೂರ್ ಸಿಟಿ ಉಪವಿಭಾಗದ ಪೊಲೀಸ್ ಅಧಿಕಾರಿ ಭಗವತ್ ಫಂಡೆ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದ್ದು, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ನಾಂದೇಡ್‌ನ ಎಟಿಎಸ್ ತಂಡವೂ ಶನಿವಾರ ಲಾತೂರ್ನಲ್ಲಿ ನೀಟ್ ಪರೀಕ್ಷೆ ಅಕ್ರಮದ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ದಾಳಿ ನಡೆಸಿತು. ಈ ಇಬ್ಬರು ಶಿಕ್ಷಕರು ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಶಂಕಿಸಲಾಗಿದೆ.
ಲಾತೂರ್ ನಿವಾಸಿಯಾಗಿರುವ ಸಂಜಯ್ ಜಾಧವ್ ಸೋಲಾಪುರದ ಟಕ್ಲಿ ಜಿಲ್ಲಾ ಪರಿಷದ್ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಅಂಬಜೊಗಯ್ ರಸ್ತೆಯಲ್ಲಿ ವಾಸವಾಗಿರುವ ಉಮರ್ ಖಾನ್ ಪಠಾಣ್ ಲಾತೂರ್ ತಾಲೂಕಿನಲ್ಲಿರುವ ಕಟ್ಪುರ್ನ ಜಿಲ್ಲಾ ಪರಿಷದ್ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರೂ ಲಾತೂರ್ನಲ್ಲಿ ಖಾಸಗಿಯಾಗಿ ಕೋಚಿಂಗ್ ಕೇಂದ್ರವನ್ನು ನಡೆಸುತ್ತಿದ್ದು, ಶನಿವಾರ ಇಬ್ಬರ ಬಂಧನದ ಬಳಿಕ ನಾಂದೇಡ್‌ನ ಎಟಿಎಸ್ ರಾತ್ರಿ ಪೂರ್ತಿ ತನಿಖೆಯನ್ನು ನಡೆಸಿದರು. ಸದ್ಯ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಗವತ್ ಪಂಡೆ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.
ಈ ಇಡೀ ಪ್ರಕರಣದಿಂದ ಲಾತೂರ್ ಅಕಾಡೆಮಿಗಳ ಹೆಸರಿಗೆ ಧಕ್ಕೆ ಉಂಟಾಗಿದ್ದು, ಭವಿಷ್ಯದಲ್ಲಿ ಇನ್ನು ಕೆಲವರ ಹೆಸರು ಪ್ರಕರಣದಲ್ಲಿ ಸೇರಲಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿಯ ನೇತೃತ್ವದಲ್ಲಿ ನೀಟ್ ಅಕ್ರಮ ತನಿಖೆಯಾಗಲಿ: ರಶೀದ್ ಅಲ್ವಿ