ಫತೇಪುರ್(ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭವಾಗಿದೆ. ಅಯೋಧ್ಯೆ ಮಂದಿರದಲ್ಲಿ ಮಾತ್ರವಲ್ಲ, ಇಡೀ ದೇಶದ ಮನೆ-ಮನೆಗಳಲ್ಲೂ ಭಕ್ತರು ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ನೋಡಲು ಕಾತರದಿಂದ ಕಾದು ಕುಳಿತಿದ್ದಾರೆ. ಇದರ ಜೊತೆಗೆ ಅನೇಕರು ಒಂದಲ್ಲೊಂದು ರೀತಿಯಲ್ಲಿ ಕಾರ್ಯಕ್ರಮಕ್ಕೆ ತಮ್ಮಲ್ಲ ಕೈಲಾದ ಕೊಡುಗೆ ನೀಡುತ್ತಿದ್ದಾರೆ. ಫತೇಫುರ್ ಜಿಲ್ಲಾ ಕಾರಾಗೃಹದ ಕೈದಿಗಳೂ ಕೂಡ ತಮ್ಮ ಕೊಡುಗೆ ನೀಡಿ, ಭಕ್ತಿ ಸಮರ್ಪಿಸಿದ್ದಾರೆ.
ಜಿಲ್ಲಾ ಕಾರಾಗೃಹದ ಮುಸ್ಲಿಂ ಕೈದಿಯೊಬ್ಬ ತಾನು ಜೈಲು ಗುಡಿಸಿ ಸಂಗ್ರಹಿಸಿದ ಹಣದಲ್ಲಿ 1,100 ರೂಪಾಯಿಯನ್ನು ಚೆಕ್ ಮೂಲಕ ಶ್ರೀ ರಾಮ ಮಂದಿರಕ್ಕೆ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಾರಾಗೃಹದಲ್ಲಿರುವ ಕೈದಿ ಜಿಯಾವುಲ್ಲಾ ಹಸನ್ ಅವರಿಗೆ ಕಸ ಗುಡಿಸಿದ್ದಕ್ಕೆ ದಿನಕ್ಕೆ 25 ರೂಪಾಯಿ ಕೂಲಿ ಸಿಗುತ್ತಿತ್ತು. ಹೀಗೆ ಸಂಗ್ರಹವಾದ ಹಣದಲ್ಲಿ 45 ದಿನಗಳ ವೇತನವನ್ನು ಅವರು ರಾಮಮಂದಿರಕ್ಕೆ ನೀಡಿದ್ದಾರೆ.
ಕಾರಾಗೃಹದ ಇತರ ಕೈದಿಗಳು ಕಳೆದ ಹಲವು ದಿನಗಳಿಂದ ಪ್ರಾಣ ಪ್ರತಿಷ್ಠಾಪನಾ ಸಂದರ್ಭದಲ್ಲಿ ಪ್ರಸಾದ ವಿತರಿಸಲು ತಯಾರಿಸಿದ್ದ ಚೀಲಗಳನ್ನು ಜಿಲ್ಲೆಯ ಸಂಸದೆ ಹಾಗೂ ಕೇಂದ್ರ ಸಚಿವೆ ಸಾದ್ವಿ ನಿರಂಜನ ಜ್ಯೋತಿ ಮೂಲಕ ರಾಮ ಮಂದಿರಕ್ಕೆ ಒಪ್ಪಿಸಿದ್ದಾರೆ. ಭಾನುವಾರ ಕಾರಾಗೃಹಕ್ಕೆ ಭೇಟಿ ನೀಡಿದ್ದ ಅವರು ಇವೆರಡನ್ನೂ ಸ್ವೀಕರಿಸಿದರು. ರಾಮ ಲಲ್ಲಾ ಮೇಲೆ ಕೈದಿಗಳ ಸಮರ್ಪಣಾ ಭಾವ ಕಂಡು ಕೇಂದ್ರ ಸಚಿವೆ ಭಾವುಕರಾದರು.
ಇದನ್ನೂ ಓದಿ: 'ಆಹ್ವಾನ ಅನಿರೀಕ್ಷಿತ, ರಾಮನೇ ಕರೆದಂತಿದೆ': ಅಯೋಧ್ಯೆಯಲ್ಲಿ 'ರಾಮಾಯಣ' ಪಾತ್ರಧಾರಿ ಸೀತೆ