ಬಂದಾ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಗ್ಯಾಂಗ್ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಮರಣೋತ್ತರ ವರದಿ ಬಹಿರಂಗವಾಗಿದೆ. ಅನ್ಸಾರಿ ಹೃದಯದಲ್ಲಿ ಸೆಂಟಿ ಮೀಟರ್ಗಳಷ್ಟು ಪ್ರದೇಶವು ಹೆಪ್ಪುಗಟ್ಟಿ ಹಳದಿ ಬಣ್ಣಕ್ಕೆ ತಿರುಗಿತ್ತು ಎಂಬುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ.
ಬಂದಾ ಜೈಲಿನಲ್ಲಿ ಅನ್ಸಾರಿ ಮಾರ್ಚ್ 28ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅನ್ಸಾರಿ ಸಾವಿನ ಒಂದು ದಿನದ ನಂತರ ಶುಕ್ರವಾರ ಐವರು ವೈದ್ಯರ ಸಮಿತಿಯು ಮರಣೋತ್ತರ ಪರೀಕ್ಷೆಯನ್ನು ನಡೆಸಿದೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮತ್ತಷ್ಟು ಹೆಪ್ಪುಗಟ್ಟುವಿಕೆಯ ಪ್ರದೇಶವನ್ನು ನಿರ್ಧರಿಸಲು ವೈದ್ಯರು ಹೃದಯದ ಭಾಗದಲ್ಲಿ ಹಳದಿ ಆಗಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮಾರ್ಚ್ 29ರಂದು ನಡೆಸಿದ ಮರಣೋತ್ತರ ಪರೀಕ್ಷೆಯ ಫಲಿತಾಂಶಗಳು, ಮುಖ್ತಾರ್ ಅನ್ಸಾರಿ ಹೃದಯಾಘಾತ/ಹೃದಯ ಸ್ನಾಯುವಿನ ಊತದಿಂದ ಮೃತಪಟ್ಟಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿವೆ. ಹೃದಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸ್ಪಷ್ಟ ಚಿಹ್ನೆಗಳು ಇದ್ದವು. 1.9 x 1.5 ಸೆಂ.ಮೀ ಅಳತೆಯ ಭಾಗವು ಹಳದಿಯಾಗಿತ್ತು ಎಂದು ವೈದ್ಯಕೀಯ ಅಧಿಕಾರಿಗಳು ಹೇಳಿದ್ದಾರೆ.
ಉತ್ತರ ಪ್ರದೇಶ, ಪಂಜಾಬ್, ನವದೆಹಲಿ ಮತ್ತು ಇತರ ರಾಜ್ಯಗಳಲ್ಲಿ ಅನ್ಸಾರಿ ವಿರುದ್ಧ ಸುಮಾರು 60 ಪ್ರಕರಣಗಳು ದಾಖಲಾಗಿದ್ದವು. 19 ವರ್ಷಗಳಿಂದ ದೇಶದ ವಿವಿಧ ಜೈಲುಗಳಲ್ಲಿದ್ದ. 2021ರಲ್ಲಿ ಅನ್ಸಾರಿಯನ್ನು ಪಂಜಾಬ್‌ನಿಂದ ಬಂದಾಗೆ ವರ್ಗಾಯಿಸಲಾಗಿತ್ತು. ಆ ಸಮಯದಲ್ಲಿ ರೂಪನಗರ ಜೈಲಾಧಿಕಾರಿಗಳು ಯುಪಿ ಪೊಲೀಸರಿಗೆ ವೈದ್ಯಕೀಯ ಮಾಹಿತಿ ಒದಗಿಸಿದ್ದರು.
ಈ ವೈದ್ಯಕೀಯ ಮಾಹಿತಿ ಪ್ರಕಾರ, ಅನ್ಸಾರಿ ಖಿನ್ನತೆ, ಮಧುಮೇಹ, ಮತ್ತು ಚರ್ಮದ ಅಲರ್ಜಿಗಳು ಸೇರಿದಂತೆ ಹೃದ್ರೋಗ ಮತ್ತು ಇತರ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದರು. ಅನ್ಸಾರಿಗೆ ನೀಡಲಾಗುತ್ತಿರುವ ಔಷಧಿಗಳಿಂದಲೂ ಸಹ ಆರೋಗ್ಯ ಸಮಸ್ಯೆಗಳ ಸಂಪೂರ್ಣ ಮಾಹಿತಿ ಅರಿಯಲಾಗಿತ್ತು. ಮತ್ತೊಂದೆಡೆ, ಈಗಾಗಲೇ ಅನ್ಸಾರಿ ಸಾವಿನ ಬಗ್ಗೆ ನ್ಯಾಯಾಂಗ ತನಿಖೆಯೂ ಆದೇಶಿಸಲಾಗಿದೆ.
ಜೈಲಿನಲ್ಲೇ ಅನ್ಸಾರಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಅವರ ಸಾವಿನ ಕುರಿತು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಅನ್ಸಾರಿ ಅವರಿಗೆ ವಿಷಪ್ರಾಶನ ಮಾಡಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡುವಂತೆಯೂ ಅವರು ಆಗ್ರಹಿಸಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಮ್ಮ ತಂದೆಯನ್ನು ಜಿಲ್ಲಾ ಕಾರಾಗೃಹದಿಂದ ನೇರವಾಗಿ ಪ್ರತ್ಯೇಕ ಬ್ಯಾರಕ್‌ಗೆ ಹಾಕಿದ್ದರು. ಇತ್ತೀಚೆಗಷ್ಟೇ ಅಪ್ಪನನ್ನು ನೋಡಲು ಕಾರಾಗೃಹಕ್ಕೆ ಭೇಟಿ ನೀಡಿದ್ದೆ. ಈ ವೇಳೆ, ಅವರು ತಮಗೆ ವಿಷ ನೀಡಲಾಗುತ್ತಿದೆ ಎಂಬುದಾಗಿ ನಮ್ಮಪ್ಪ ಕಳವಳ ವ್ಯಕ್ತಪಡಿಸಿದ್ದರು ಎಂದು ಕಿರಿಯ ಪುತ್ರ ಒಮರ್ ಅನ್ಸಾರಿ ಹೇಳಿದ್ದರು.
ಇದನ್ನೂ ಓದಿ: ಪುತ್ರನ ಸ್ಫೋಟಕ ಹೇಳಿಕೆ ಬೆನ್ನಲ್ಲೇ ಜಾಲತಾಣದಲ್ಲಿ ವೈರಲ್ ಆದ ಮುಖ್ತಾರ್ ಅನ್ಸಾರಿ ವಿಷಪ್ರಾಶನದ ಪತ್ರ!