ಕೋಟ(ರಾಜಸ್ಥಾನ): ಇಲ್ಲಿನ ಆರ್.ಕೆ.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕನನ್ನು ವಿವಸ್ತ್ರಗೊಳಿಸಿ, ಆತನ ಮೇಲೆ ಹಲ್ಲೆ ನಡೆಸಿ ಅದೇ ಸ್ಥಿತಿಯಲ್ಲಿ ಬಲವಂತವಾಗಿ ಡ್ಯಾನ್ಸ್ ಮಾಡಿಸಿ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟ ಘಟನೆ ಶಹೀದ್ ಸುಭಾಷ್ ಚಂದ್ರ ಶರ್ಮಾ ವೃತ್ತದ ಗಣೇಶ್ ಪಂಡಲ್ ಬಳಿ ನಡೆದಿದೆ.
"ಈ ಘಟನೆ ಸಂಬಂಧ ಶಿವಪುರ ನಿವಾಸಿ ಕ್ಷಿತಿಜ್ ಕಸಾನ ಅಲಿಯಾಸ್ ಬಿಟ್ಟು ಗುರ್ಜರ್, ದಾದಾಬರಿ ಶಾಸ್ತ್ರಿನಗರ ನಿವಾಸಿ ಯಯಾತಿ ಉಪಾಧ್ಯಾಯ ಅಲಿಯಾಸ್ ಗುಂಗುನ್, ಆತನ ತಂದೆ ಆಶಿಶ್ ಉಪಾಧ್ಯಾಯ ಅಲಿಯಾಸ್ ಮಿಕ್ಕಿ, ದಾದಾಬರಿಯ ಹನುಮಾನ್ ಬಸ್ತಿ ನಿವಾಸಿ ಗೌರವ್ ಸೈನಿ, ಉಮೈದ್‌ಗಂಜ್ ನಿವಾಸಿ ಬಂದೀಪ್ ಸಿಂಗ್ ಅಲಿಯಾಸ್ ಗ್ರಾಲಿಯಾಸ್ ಸೇರಿದಂತೆ 6 ಮಂದಿಯನ್ನು ಬಂಧಿಸಲಾಗಿದೆ" ಎಂದು ಡಿವೈಎಸ್‌ಪಿ ಮನೀಶ್ ಶರ್ಮಾ ತಿಳಿಸಿದ್ದಾರೆ.
ಘಟನೆ ಬಗ್ಗೆ ಪೊಲೀಸರು ಹೇಳಿದ್ದು ಹೀಗಿದೆ; "ಆರೋಪಿಗಳು ಮಾಡಿರುವ ವಿಡಿಯೋ ನಮಗೆ ಸಿಕ್ಕಿದೆ. ಘಟನೆ ಸಂಬಂಧ 12 ವರ್ಷದ ಸಂತ್ರಸ್ತ ಬಾಲಕನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯಿದೆ. ಎಸ್‌ಸಿ-ಎಸ್‌ಟಿ ಮತ್ತು ಜೆಜೆ ಕಾಯಿದೆಯ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉಪ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಶರ್ಮಾ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ಆರ್.ಕೆ.ಪುರಂ ಪೊಲೀಸ್ ಠಾಣಾಧಿಕಾರಿ ಅಜಿತ್ ಬಾಗ್ಡೋಲಿಯಾ ಮಾಹಿತಿ ನೀಡಿದ್ದಾರೆ.
ಕುಟುಂಬಸ್ಥರ ಆರೋಪವೇನು?: ಸಂತ್ರಸ್ತ ಬಾಲಕ ಡಿಜೆ ಸೌಂಡ್ ಸಿಸ್ಟಂ ಬದಲಿಸಿದ್ದ. ಇದರಿಂದ ಕುಪಿತಗೊಂಡ ಆರೋಪಿಗಳು ಬಾಲಕನಿಗೆ ಥಳಿಸಿದ್ದರು. ಬಾಲಕನಿಗೆ ಒತ್ತಾಯಪೂರ್ವಕವಾಗಿ ಸಿಗರೇಟ್ ಮತ್ತು ಮದ್ಯ ಸೇವನೆ ಮಾಡಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಘಟನೆಯೂ ಸೆಪ್ಟೆಂಬರ್ 10ರ ಮಧ್ಯರಾತ್ರಿ ವೇಳೆ ನಡೆದಿದೆ. ಈ ಸಂಬಂಧ ಶುಕ್ರವಾರ ತಡರಾತ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪ ತಳ್ಳಿ ಹಾಕಿದ ಮಾಜಿ ಕೌನ್ಸಿಲರ್: ಈ ಪ್ರಕರಣದಲ್ಲಿ ಮಾಜಿ ಕೌನ್ಸಿಲರ್ ಮತ್ತು ಗಣೇಶೋತ್ಸವ ಸಮಿತಿ ಅಧ್ಯಕ್ಷ ದೇವೇಂದ್ರ ಚೌಧರಿ ಮಾಮಾ ವಿರುದ್ಧವೂ ಆರೋಪಗಳು ಕೇಳಿ ಬರುತ್ತಿವೆ. ಆದರ ಅವರು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.
ಮತ್ತೊಂದೆಡೆ, ಇಲ್ಲಿ ಗಣೇಶ ಪ್ರತಿಷ್ಠಾಪಿಸಲು ವ್ಯಾಪಾರಿಗಳಿಂದ ಒತ್ತಾಯಪೂರ್ವಕವಾಗಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಕುರಿತು ಪ್ರಮೋದ್ ಕುಮಾರ್ ಗೋಸ್ವಾಮಿ ಎಂಬುವವರು ಜಿಲ್ಲಾಧಿಕಾರಿ, ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಬಾಲಕಿ ಮೇಲೆ ಮೂವರು ಯುವಕರಿಂದ ಲೈಂಗಿಕ ದೌರ್ಜನ್ಯ: ಕಾಲುವೆಗೆ ತಳ್ಳಿ ಪರಾರಿಯಾದ ದುಷ್ಕರ್ಮಿಗಳು - girl student molested