ಹೈದರಾಬಾದ್: ಕರ್ನಾಟಕದಲ್ಲಿ ಖಾಸಗಿ ಕಂಪನಿಗಳ ಹುದ್ದೆಗಳಲ್ಲಿ ಸ್ಥಳೀಯರಿಗೆ ಶೇಕಡಾ 100 ರಷ್ಟು ಮೀಸಲಾತಿ ನೀಡಬೇಕು ಎಂಬ ವಿಧೇಯಕವನ್ನು ಪ್ರಸ್ತಾಪಿಸಿದ ಬೆನ್ನಲ್ಲೇ, ನೆರೆಹೊರೆಯ ರಾಜ್ಯಗಳು ಅಲ್ಲಿನ ಕಂಪನಿಗಳನ್ನು ಸೆಳೆಯಲು ಮುಂದಾಗಿವೆ. ತಮ್ಮ ರಾಜ್ಯದಲ್ಲಿ ಕಂಪನಿಗಳನ್ನು ಮುಂದುವರಿಸಲು ಆಹ್ವಾನಿಸುತ್ತಿವೆ.
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ, ಸಚಿವ ನಾರಾ ಲೋಕೇಶ್ ಅವರು ನಾಸ್ಕಾಮ್ಗೆ ತಮ್ಮ ರಾಜ್ಯಕ್ಕೆ ಬರಲು ವಿಶೇಷ ಆಹ್ವಾನ ನೀಡಿದ್ದಾರೆ. ಕಂಪನಿಯ ಆಕ್ಷೇಪವನ್ನು ತಮ್ಮ ಸರ್ಕಾರ ಅರ್ಥ ಮಾಡಿಕೊಂಡಿದೆ. ಆಂಧ್ರದಲ್ಲಿ ಐಟಿ ಸೇವೆಗಳನ್ನು ವಿಸ್ತರಿಸಬಹುದು ಎಂದು ಕಂಪನಿಗೆ ತಿಳಿಸಿದ್ದಾರೆ.
Dear @NASSCOM members,
— Lokesh Nara (@naralokesh) July 17, 2024
We understand your disappointment. We welcome you to expand or relocate your businesses to our IT, IT services, AI and data center cluster at Vizag.
We will offer you best-in-class facilities, uninterrupted power, infrastructure and the most suitable… https://t.co/x2N0CTbnfp
ನಮ್ಮಲ್ಲಿ ನಿರ್ಬಂಧವಿಲ್ಲ, ಹೂಡಿಕೆ ಮಾಡಿ: ಕರ್ನಾಟಕ ಸರ್ಕಾರದ ಮೀಸಲಾತಿ ಪ್ರಸ್ತಾಪಕ್ಕೆ ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್‌ವೇರ್ ಅಂಡ್ ಸರ್ವೀಸ್ ಕಂಪನಿಯು(ನಾಸ್ಕಾಮ್) ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಕ್ಸ್ ಖಾತೆಯಲ್ಲಿನ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಚಿವ ನಾರಾ ಲೋಕೇಶ್, ತಮ್ಮ ಕಂಪನಿಯನ್ನು ಸ್ವಾಗತಿಸಲು ಆಂಧ್ರಪ್ರದೇಶ ಸರ್ಕಾರ ಸಿದ್ಧವಿದೆ. ಕರ್ನಾಟಕ ಸರ್ಕಾರ ಪರಿಚಯಿಸಿದ ಕೈಗಾರಿಕೆಗಳ ವಿಧೇಯಕದ ಬಗ್ಗೆ ಇರುವ ಅಸಮಾಧಾನವನ್ನು ನಮ್ಮ ಸರ್ಕಾರ ಅರ್ಥಮಾಡಿಕೊಂಡಿದೆ. ಇಲ್ಲಿ ತಮ್ಮ ಐಟಿ ಸೇವೆಗಳನ್ನು ವಿಸ್ತರಿಸಬಹುದು ಎಂದು ರತ್ನಗಂಬಳಿ ಹಾಸಿದ್ದಾರೆ.
ರಾಜ್ಯದಲ್ಲಿ ಐಟಿ ಸೇವೆ ವಿಸ್ತರಣೆಗೆ ಹೆಚ್ಚಿನ ಅವಕಾಶಗಳಿವೆ. ಇಲ್ಲಿ ಯಾವುದೇ ನಿರ್ಬಂಧಗಳು ಮತ್ತು ನಿಯಮಗಳಿಲ್ಲ. ಮುಕ್ತವಾಗಿ ಹೂಡಿಕೆ ಮಾಡಬಹುದು. ವಿಶಾಖಪಟ್ಟಣವು ಐಟಿ, ಐಟಿ ಸೇವೆಗಳು, ಕೃತಕ ಬುದ್ಧಿಮತ್ತೆ, ಡೇಟಾ ಸೆಂಟರ್ ಕ್ಲಸ್ಟರ್ನಂತಹ ವ್ಯವಹಾರಗಳಿಗೆ ಅನುಕೂಲಕರವಾಗಿದೆ. ಇಲ್ಲಿಗೆ ತಮ್ಮ ವ್ಯವಹಾರಗಳನ್ನು ವರ್ಗಾಯಿಸಬಹುದು ಅಥವಾ ವಿಸ್ತರಿಸಬಹುದು ಎಂದು ಸಚಿವರು ಹೇಳಿದ್ದಾರೆ.
ಎಪಿಯಲ್ಲಿ ಹೂಡಿಕೆಗೆ ಅತ್ಯುತ್ತಮ ಸೌಲಭ್ಯಗಳು, ನಿರಂತರ ವಿದ್ಯುತ್ ಮತ್ತು ಮೂಲಸೌಕರ್ಯ ಒದಗಿಸುವುದಾಗಿಯೂ ಭರವಸೆ ನೀಡಿರುವ ಸಚಿವ ಲೋಕೇಶ್, ಆಂಧ್ರ ಸರ್ಕಾರ ಯಾವುದೇ ನಿರ್ಬಂಧ ಮತ್ತು ನಿಬಂಧನೆಗಳನ್ನು ವಿಧಿಸುವುದಿಲ್ಲ. ಸರ್ಕಾರ ಖಾಸಗಿ ಕಂಪನಿಗಳಿಗೆ ಸಂಪೂರ್ಣ ಸಹಕಾರ ನೀಡಲಿದೆ. ರಾಜ್ಯದಲ್ಲಿ ಸಾಕಷ್ಟು ವೃತ್ತಿಪರ ಯುವಕರು ಮತ್ತು ಮಾನವ ಸಂಪನ್ಮೂಲವಿದೆ. ಹೂಡಿಕೆಗೆ ಅವಕಾಶ ನೀಡಲಾಗುವುದು ಎಂದು ಆಹ್ವಾನವಿತ್ತಿದ್ದಾರೆ.
ವಿಧೇಯಕಕ್ಕೆ ವಿರೋಧ, ಬೆನ್ನಲ್ಲೇ ತಾತ್ಕಾಲಿಕ ತಡೆ: ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಪ್ರಸ್ತಾವಿತ ವಿಧೇಯಕಕ್ಕೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಸಚಿವ ಸಂಪುಟ ಅನುಮೋದಿತ ಮಸೂದೆಗೆ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಜಾರಿಗೆ ತರಲು ಉದ್ದೇಶಿಸಿದ್ದ ವಿಧೇಯಕವು ಇನ್ನೂ ಸಿದ್ಧತೆಯ ಹಂತದಲ್ಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.