ಬೀಡ್(ಮಹಾರಾಷ್ಟ್ರ): ಜಿಜಾವು ಮಲ್ಟಿಸ್ಟೇಟ್ ಹಗರಣದಲ್ಲಿ ಉದ್ಯಮಿಯೊಬ್ಬರ ಮೇಲೆ ಇರುವ ಆರೋಪದ ತಡೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೀಡ್ ಜಿಲ್ಲಾ ಪೊಲೀಸ್ ಆರ್ಥಿಕ ಅಪರಾಧ ವಿಭಾಗದ (ಇಒಬಿ) ಪೊಲೀಸ್ ಇನ್ಸ್‌ಪೆಕ್ಟರ್ ಹರಿಭಾವು ಖಾಡೆ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳವು ಶುಕ್ರವಾರ (ಎಸಿಬಿ) ದಾಳಿ ನಡೆಸಿದೆ. ದಾಳಿ ವೇಳೆ, ಇಒಡಬ್ಲ್ಯು ಪೊಲೀಸ್ ಇನ್ಸ್‌ಪೆಕ್ಟರ್ ಖಾಡೆ ಮನೆಯಲ್ಲಿದ್ದ ಕೋಟ್ಯಂತರ ನಗದು, ಚಿನ್ನ ಬೆಳ್ಳಿ ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ಶೋಧ ಮುಂದುವರಿಸಿದ್ದಾರೆ.
1 ಕೋಟಿ 8 ಲಕ್ಷ ರೂ ನಗದು, 970 ಗ್ರಾಂ ಚಿನ್ನಾಭರಣ, 5,5 ಕೆ ಜಿ ಬೆಳ್ಳಿ, ಖಾಡೆಗೆ ಸೇರಿದ್ದ ನಾಲ್ಕು ಪ್ಲಾಟ್ಗಳು, ವಾಣಿಜ್ಯ ಮಳಿಗೆಗೆ ಸಂಬಂಧಿಸಿದ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲಿಸಿದ್ದಾರೆ.
ಜಿಜಾವು ಮಲ್ಟಿಸ್ಟೇಟ್‌ನಲ್ಲಿ ಹಗರಣ: ಕೆಲವು ದಿನಗಳ ಹಿಂದೆ ಬೀಡ್ ಜಿಜಾವು ಮಲ್ಟಿಸ್ಟೇಟ್‌ನಲ್ಲಿ ಹಗರಣ ನಡೆದಿತ್ತು. ಪ್ರಕರಣ ದಾಖಲಾದ ನಂತರ ತನಿಖೆಯನ್ನು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಹಸ್ತಾಂತರ ಮಾಡಲಾಗಿತ್ತು. ಈ ವೇಳೆ ಜಿಜಾವು ಮಲ್ಟಿಸ್ಟೇಟ್ ಹಗರಣದಲ್ಲಿ ಉದ್ಯಮಿಯೊಬ್ಬರ ಮೇಲೆ ಇರುವ ಆರೋಪ ತಡೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಹರಿಭಾವು ಖಾಡೆ ಮತ್ತು ಕಾನ್ಸ್ಟೇಬಲ್ ಜಾಧವ್ 1 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪ ಇತ್ತು.
ಆರಂಭಿಕವಾಗಿ 5 ಲಕ್ಷ ರೂ ಲಂಚವನ್ನು ಸಂಗ್ರಹಿಸಿದ್ದ ಆರೋಪಿಗಳಲ್ಲಿ ಒಬ್ಬನಾದ ಕುಶಾಕ್ ಜೈನ ಅವರನ್ನು ಎಸಿಬಿ ಮೊದಲು ಬಲೆಗೆ ಬೀಳಿಸಿದೆ. ಈ ಮಾಹಿತಿ ಬಹಿರಂಗ ಆಗುತ್ತಿದ್ದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಹರಿಭಾವು ಖಾಡೆ ಮತ್ತು ಜಾಧವ್ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಇದೀಗ ಡಿಸಿಪಿ ಶಂಕರ್ ಶಿಂಧೆ ನೇತೃತ್ವದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನೂಓದಿ:ಪಶ್ಚಿಮ ಬಂಗಾಳ: ಟಿಎಂಸಿ ನಾಯಕನ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ - TMC LEADER SHOT AT in Bengal