ಪಾಲ್ಘರ್ (ಮಹಾರಾಷ್ಟ್ರ): ಮ್ಯಾಟ್ರಿಮೋನಿಯಲ್ನಲ್ಲಿ ಪರಿಚಯ, ವಿಧವೆಯರು, ವಿಚ್ಛೇದಿತರೇ ಟಾರ್ಗೆಟ್, ಮದುವೆಯಾದ ಬಳಿಕ ಮಹಿಳೆಯರ ಹಣ, ಒಡವೆಗಳೊಂದಿಗೆ ನಾಪತ್ತೆ. ಇದು ಮದುವೆಯ ಹೆಸರಿನಲ್ಲಿ ವ್ಯಕ್ತಿಯೊಬ್ಬ ವಂಚಿಸುತ್ತಿದ್ದ ಪರಿ. ಈವರೆಗೆ ಈತ ದೇಶದ ವಿವಿಧ ರಾಜ್ಯಗಳಲ್ಲಿ 20ಕ್ಕೂ ಅಧಿಕ ಮಹಿಳೆಯರಿಗೆ ಪಂಗನಾಮ ಹಾಕಿರುವ ವಿಚಾರ ಹೊರಬಿದ್ದಿದೆ.
ಇತ್ತೀಚಿಗೆ ಮಹಿಳೆಯೊಬ್ಬರನ್ನು ವಿವಾಹವಾಗಿ ಆಕೆಯ ಬೆಲೆಬಾಳುವ ವಸ್ತುವಿನೊಂದಿಗೆ ಪರಾರಿಯಾಗಿದ್ದ. ಆ ಮಹಿಳೆ ನೀಡಿದ ದೂರಿನ ಮೇರೆಗೆ ವಂಚಕನನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ವಿಚಾರಣೆಯ ವೇಳೆ ಆತನ ಮೋಸದ ಜಾಲ ಬಯಲಾಗಿದೆ. ಸದ್ಯ ಆತನನ್ನು ಸ್ಥಳೀಯ ಜೈಲಿನಲ್ಲಿ ಬಂಧಿಸಿಡಲಾಗಿದೆ.
ಪ್ರಕರಣ ವಿವರ: 43 ವರ್ಷದ ಫಿರೋಜ್ ನಿಯಾಜ್ ಶೇಖ್ ಮದುವೆ ಹೆಸರಿನಲ್ಲಿ ಮಹಿಳೆಯರನ್ನು ವಂಚಿಸುತ್ತಿದ್ದ ಕಿರಾತಕ. ಥಾಣೆ ಜಿಲ್ಲೆಯ ಕಲ್ಯಾಣ್ ನಗರದ ನಿವಾಸಿಯಾಗಿರುವ ಈತ ವಿವಾಹವಾಗುವುದನ್ನು ಖಯಾಲಿ ಮಾಡಿಕೊಂಡಿದ್ದ. ಆರೋಪಿಯು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನ ಮೂಲಕ ನಲ್ಲ ಸೋಪಾರ ಮೂಲದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಬಳಿಕ ಕಳೆದ ವರ್ಷವಷ್ಟೇ ಇಬ್ಬರೂ ವಿವಾಹವಾಗಿದ್ದರು. ಇದಾದ ಬಳಿಕ ಕೆಲ ದಿನಗಳ ನಂತರ ಮಹಿಳೆಗೆ ಸೇರಿದ 6.5 ಲಕ್ಷ ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್, ಇತರ ಬೆಲೆಬಾಳುವ ವಸ್ತುಗಳು ಮತ್ತು ನಗದನ್ನು ಕದ್ದು ಪರಾರಿಯಾಗಿದ್ದ.
ಈ ಬಗ್ಗೆ ಮಹಿಳೆ 2023 ರ ನವೆಂಬರ್‌ನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಆತ ಪಾಲ್ಘರ್ನಲ್ಲಿ ಇರುವುದನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಹಲವು ರಾಜ್ಯಗಳ ಮಹಿಳೆಯರಿಗೆ ಮೋಸ: ಆರೋಪಿ ಫಿರೋಜ್ ನಿಯಾಜ್ ಶೇಖ್ನನ್ನು ಪೊಲೀಸರು ಪಾಲ್ಘರ್ ಜಿಲ್ಲೆಯಲ್ಲಿ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾಗ ಅಚ್ಚರಿಯ ಸಂಗತಿಗಳನ್ನು ಆತ ಬಾಯ್ಬಿಟ್ಟಿದ್ದಾನೆ. ಆರೋಪಿಯು ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಮತ್ತು ಗುಜರಾತ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ 2015 ರಿಂದ 20ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದಾಗಿ ಹೇಳಿಕೊಂಡಿದ್ದಾನೆ.
ಹಲವು ಮಹಿಳೆಯರ ಬಳಿಕ ಚಿನ್ನ, ಒಡೆವೆ, ನಗದನ್ನು ಕದ್ದು ಪರಾರಿಯಾಗುತ್ತಿದ್ದ. ವೈವಾಹಿಕ ಸಂಬಂಧಗಳನ್ನು ಜೋಡಿಸಿಕೊಡುವ ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ವಿಚ್ಛೇದಿತರು ಮತ್ತು ವಿಧವೆಯರನ್ನೇ ಈತ ಟಾರ್ಗೆಟ್ ಮಾಡುತ್ತಿದ್ದ. ಬಳಿಕ ಅವರನ್ನು ನಂಬಿಸಿ ಮದುವೆಯಾಗುತ್ತಿದ್ದ. ಕೆಲ ದಿನಗಳ ಬಳಿಕ ಆತ ಮಹಿಳೆಯರ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಜಯಸಿಂಗ್ ಭಾಗಲ್ ತಿಳಿಸಿದ್ದಾರೆ.
ಆರೋಪಿಯಿಂದ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು, ಚೆಕ್‌ಬುಕ್‌ಗಳು ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅನ್ಯಾಯಕ್ಕೊಳಗಾದ ಮಹಿಳೆಯರನ್ನು ಪತ್ತೆ ಮಾಡಿ, ನ್ಯಾಯ ಕೊಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.