ಹೈದರಾಬಾದ್: ಲಖನೌ ಜಿಲ್ಲಾ ಕಾರಾಗೃಹದಲ್ಲಿ 38 ಖೈದಿಗಳಲ್ಲಿ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (ಎಚ್‌ಐವಿ) ಇರುವುದು ದೃಢಪಟ್ಟಿದೆ. ಈ ಮೂಲಕ ಜೈಲಿನಲ್ಲಿ ಎಚ್‌ಐವಿ ಸೋಂಕಿತರ ಪ್ರಕರಣ ಸಂಖ್ಯೆ 66ಕ್ಕೆ ಏರಿದೆ. ಜೈಲಿನಲ್ಲಿ ಆತಂಕಕಾರಿ ಮಟ್ಟದಲ್ಲಿ ಎಚ್‌ಐವಿ ಪ್ರಕರಣಗಳ ಏರಿಕೆ ಅಲ್ಲಿನ ಆಡಳಿತ ಸಿಬ್ಬಂದಿ ಹೆಚ್ಚಿನ ಜಾಗೃತರಾಗಿರುವಂತೆ ಮಾಡಿದೆ.
ಈ ಮುಂಚೆ ಜೈಲು ಸಿಬ್ಬಂದಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಒಟ್ಟು 38 ರೋಗಿಗಳಲ್ಲಿ ಎಚ್‌ಐವಿ ಸೋಂಕು ದೃಢಪಟ್ಟಿತು. ಎಚ್‌ಐವಿ ಸೋಂಕಿತ ಎಲ್ಲ ರೋಗಿಗಳನ್ನು ಲಖನೌದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶ ಆರೋಗ್ಯ ಇಲಾಖೆ ಖೈದಿಗಳಿಗೆ ನಡೆಸಿದ ಆರೋಗ್ಯ ಪರೀಕ್ಷೆಯಲ್ಲಿ ಸೋಂಕಿತರ ಮಾಹಿತಿ ಬಯಲಾಗಿತ್ತು. ಇದಾದ ಬಳಿಕ ಜೈಲು ಆಡಳಿತವು ಸೋಂಕಿತ ಖೈದಿಗಳಿಗೆ ಚಿಕಿತ್ಸೆಯ ಭಾಗವಾಗಿ ಸಮಾಲೋಚನೆ ಪ್ರಾರಂಭಿಸಿತು. ಸೋಂಕಿತರಿಗೆ ಆಹಾರದಲ್ಲಿ ಬದಲಾವಣೆ ತರಲು ಕೂಡ ಅಧಿಕಾರಿಗಳು ಅನುಮತಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಐಎಸ್ಎಚ್ಟಿಎಚ್ ಅಭಿಯಾನದ ಅಡಿ 2023ರ ಡಿಸೆಂಬರ್ 3 ರಿಂದ 2024ರ ಜನವರಿ 3 ರವರೆಗೆ ಖೈದಿಗಳ ಪರೀಕ್ಷೆ ನಡೆಸಲಾಯಿತು. ಈ ವೇಳೆ, ಅವರಲ್ಲಿ ಎಸ್ಐಟಿ, ಎಚ್‌ಐವಿ, ಹೆಪಟೈಟಿಸ್ ಬಿ ಮತ್ತು ಟಿಬಿ ಪರೀಕ್ಷೆಗೆ ಒಳಪಡಿಸಿದಾಗ, ಸೋಂಕಿತರ ಮಾಹಿತಿ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಪಿ ಏಡ್ಸ್ ನಿಯಂತ್ರಣ ಸೊಸೈಟಿಯ ಜಂಟಿ ನಿರ್ದೇಶಕ ಡಾ.ರಮೇಶ್ ಮಾತನಾಡಿ, ಎಚ್‌ಐವಿ ಸೋಂಕಿನ ಪ್ರಕರಣಗಳು ವರದಿಯಾದ ಬಳಿಕ ಈ ಕುರಿತು ಅಧಿಕಾರಿಗಳು ಜಾಗರೂಕರಾಗಿದ್ದಾರೆ. ಸೋಂಕಿತ ಖೈದಿಗಳ ಆಹಾರ ಕ್ರಮವನ್ನು ಬದಲಾವಣೆ ಮಾಡಲಾಗಿದೆ. ಎಚ್‌ಐವಿ ಪಾಸಿಟಿವ್ ಕಂಡು ಬಂದ ಎಲ್ಲ ಖೈದಿಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗಿದೆ. ಈ ಖೈದಿಗಳು ಕೆಜಿಎಂಯುನನ ಆಂಟಿ - ರೆಟ್ರೋವೈರಲ್ ಥೆರಪಿ (ಎಆರ್ಟಿ) ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಲಕ್ನೋ ಸಿಎಮ್‌ಒ ಡಾ ಮನೋಜ್ ಅಗರ್ವಾಲ್ ಮಾತನಾಡಿ, ಎಚ್‌ಐವಿ ಪಾಸಿಟಿವ್ ಬಂದ ಖೈದಿಗಳನ್ನು ವೈದರ ನಿಗಾದಲ್ಲಿ ಇರಿಸಲಾಗಿದೆ. ಜೈಲಿನಲ್ಲಿ ವೈರಸ್ ಹರಡುವುದನ್ನು ನಿಯಂತ್ರಿಸಲು ಮುನ್ನೆಚ್ಚರಿಕೆಗಳನ್ನು ಕಾರಾಗೃಹದ ಅಧಿಕಾರಿಗಳು ನಡೆಸಿದ್ದಾರೆ ಎಂದರು.
ಉತ್ತರಾಖಂಡ ಖೈದಿಗಳಲ್ಲೂ ಪತ್ತೆಯಾಗಿದ್ದ ಸೋಂಕು: ಕಳೆದ ಏಪ್ರಿಲ್ನಲ್ಲಿ ಉತ್ತರಾಖಂಡದ ಕುಮಾವೂನ್‌ನ ಹಲ್ದ್ವಾನಿ ಜೈಲಿನಲ್ಲಿ ನಡೆಸಿದ ಆರೋಗ್ಯ ತಪಾಸಣೆ ವೇಳೆಗೆ ಮಹಿಳಾ ಖೈದಿಗಳು ಸೇರಿದಂತೆ 40 ಮಂದಿಗೆ ಎಚ್‌ಐವಿ ಸೋಂಕು ಕಂಡು ಬಂದಿತು. ಸೋಂಕಿತರಲ್ಲಿ ಬಹುತೇಕ ಮಂದಿ ಮಾದಕ ವ್ಯಸನಿಗಳು ಎಂದು ಅಧಿಕಾರಿಗಳು ತಿಳಿಸಿದ್ದರು. ಈ ಎಚ್‌ಐವಿ ರೋಗಿಗಳಿಗಾಗಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಎಆರ್ಟಿ ಕೇಂದ್ರ ಸ್ಥಾಪಿಸಿ, ಅಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೇ, ಸೋಂಕು ಇತರ ಖೈದಿಗೆ ಹರಡದಂತೆ ಎಚ್ಚರಿಕೆ ಮತ್ತು ಮುಂಜಾಗ್ರತೆ ವಹಿಸುವುದಾಗಿ ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ: ಜೈಲಿನ 40 ಕೈದಿಗಳಲ್ಲಿ ಎಚ್‌ಐವಿ ಸೋಂಕು ಪತ್ತೆ: ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ.