ನವದೆಹಲಿ: ಬಂಗಾಳ ವೈದ್ಯೆ ವಿದ್ಯಾರ್ಥಿನಿ ಅತ್ಯಾಚಾರ, ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಸಿಬಿಐ ಅಧಿಕಾರಿಗಳು ಆರೋಪಿಗಳಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಿದ್ದಾರೆ. ಭಾನುವಾರವಾದ ಇಂದು ಪ್ರಮುಖ ಆರೋಪಿ ಸಂಜಯ್ ರಾಯ್ಗೆ ಕೋಲ್ಕತ್ತಾ ಪ್ರೆಸಿಡೆನ್ಸಿ ಜೈಲಿನಲ್ಲಿ ಸುಳ್ಳು ಪತ್ತೆ ಪರೀಕ್ಷೆಗೆ ನಡೆಸಿದ್ದಾರೆ. ಇದರ ಜೊತೆಗೆ ಕೋಲ್ಕತ್ತಾದ ಸಿಬಿಐ ಕಚೇರಿಯಲ್ಲಿ ಇನ್ನಿಬ್ಬರಿಗೆ ಈ ಪರೀಕ್ಷೆ ನಡೆಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಘಟನೆ ನಡೆದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ತರಬೇತಿ ವಿದ್ಯಾರ್ಥಿಗಳು, ವೈದ್ಯರು ಮತ್ತು ಇತರ ಆರೋಪಿಗಳಿಗೆ ಸಿಬಿಐ ಕಚೇರಿಯಲ್ಲಿ ಸುಳ್ಳು ಪತ್ತೆ ಪರೀಕ್ಷೆಯನ್ನು ಶನಿವಾರ ನಡೆಸಲಾಗಿತ್ತು. ಪ್ರಮುಖ ಆರೋಪಿಯಾಗಿರುವ ಸಂಜಯ್ಗೆ ತಾಂತ್ರಿಕ ಕಾರಣದಿಂದಾಗಿ ಪರೀಕ್ಷೆ ನಡೆಸಲಾಗಿರಲಿಲ್ಲ. ಹೀಗಾಗಿ ಭಾನುವಾರ ಆತನಿಗೆ ಟೆಸ್ಟ್ ಮಾಡಲಾಗಿದೆ.
ದೆಹಲಿ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ ಪಾಲಿಗ್ರಾಫ್ ತಜ್ಞರ ತಂಡ ಕೋಲ್ಕತ್ತಾಕ್ಕೆ ಬಂದಿತ್ತು. ಪ್ರಕರಣದಲ್ಲಿ ಆರೋಪಿಗಳಾಗಿರುವ 7 ಜನರಿಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ. ಈ ಪರೀಕ್ಷೆಯನ್ನು ಹಂತ ಹಂತವಾಗಿ ಏಳು ಜನರ ಮೇಲೆ ನಡೆಸಲಾಗುವುದು. ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ದಿನಗಳು ಹಿಡಿಯಲಿವೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣದಲ್ಲಿ ತಮ್ಮನ್ನು ಬೇಕಂತಲೇ ಸಿಲುಕಿಸಲಾಗಿದೆ ಎಂದು ಸಂಜಯ್ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿರುವ ಕಾರಣ ಆತನಿಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಸಿಬಿಐ ನ್ಯಾಯಾಲಯಕ್ಕೆ ಕೋರಿತ್ತು. ಇದಕ್ಕೆ ಕೋರ್ಟ್ ಕೂಡ ಸಮ್ಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಸುಳ್ಳು ಪತ್ತೆ ಪರೀಕ್ಷೆಯಲ್ಲಿ ಆರೋಪಿ ಏನು ಬಾಯಿಬಿಡಲಿದ್ದಾನೆ ಎಂಬುದು ಕುತೂಹಲ ಮೂಡಿಸಿದೆ.
ಸಂದೀಪ್ ಘೋಷ್ ಮನೆ ಮೇಲೆ ಸಿಬಿಐ ದಾಳಿ: ಮತ್ತೊಂದೆಡೆ, ಕೇಂದ್ರೀಯ ತನಿಖಾ ಸಂಸ್ಥೆಯು ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರ ಆಸ್ತಿಗಳ ಮೇಲೆ ಭಾನುವಾರ ದಾಳಿ ಆರಂಭಿಸಿದೆ. ಅಧಿಕಾರಿಗಳ ತಂಡಗಳು ಏಕಕಾಲಕ್ಕೆ 15 ಸ್ಥಳಗಳಲ್ಲಿ ತಪಾಸಣೆ ನಡೆಸಿವೆ. ಆರ್ ಜಿ ಕರ್ ಮೆಡಿಕಲ್ ಕಾಲೇಜಿನಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಸಿಬಿಐ ಈಗಾಗಲೇ ಘೋಷ್ ವಿರುದ್ಧ ಅಕ್ರಮ ಎಸಗಿರುವ ಪ್ರಕರಣಗಳನ್ನು ದಾಖಲಿಸಿದೆ.
ಶಾಲೆಗಳಿಗೆ ಸರ್ಕಾರ ನೋಟಿಸ್: ವೈದ್ಯೆ ವಿದ್ಯಾರ್ಥಿನಿ ಹತ್ಯೆ ಘಟನೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಂಗಾಳ ಸರ್ಕಾರ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಹಲವು ಶಾಲೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಶಾಲಾ ಅವಧಿಯಲ್ಲಿ ಶಿಕ್ಷಕರು ಮತ್ತು ಮಕ್ಕಳು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಸುರಕ್ಷಿವಲ್ಲದ ಸಮಯದಲ್ಲಿ ಹೋರಾಟ ನಡೆಸಿದ್ದರ ಬಗ್ಗೆ 24 ಗಂಟೆಯೊಳಗೆ ಪ್ರತಿಕ್ರಿಯಿಸಲು ನೋಟಿಸ್ನಲ್ಲಿ ಸೂಚಿಸಲಾಗಿದೆ.