ಕೊಚ್ಚಿ/ನವದೆಹಲಿ: ಕುವೈತ್ನಲ್ಲಿ ಬಹು ಮಹಡಿ ಕಟ್ಟಡದ ಅಗ್ನಿ ದುರಂತದಲ್ಲಿ ಸಾವನ್ನಪ್ಪಿದ 45 ಭಾರತೀಯರ ಪಾರ್ಥಿವ ಶರೀರಗಳನ್ನು ಶುಕ್ರವಾರ ತವರು ರಾಷ್ಟ್ರಕ್ಕೆ ಸ್ಥಳಾಂತರಿಸಲಾಯಿತು. ಮೃತದೇಹಗಳನ್ನು ಹೊತ್ತು ಭಾರತೀಯ ವಾಯುಪಡೆಯ (ಐಎಎಫ್) ವಿಮಾನವು ನೇರವಾಗಿ ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಇಲ್ಲಿ 31 ಜನರ ಪಾರ್ಥಿವ ಶರೀರಗಳನ್ನು ಇಳಿಸಿ, ಉಳಿದ 14 ಶವಗಳನ್ನು ಅದೇ ವಿಮಾನದಲ್ಲಿ ದೆಹಲಿಗೆ ತರಲಾಯಿತು.
ದಕ್ಷಿಣ ಕುವೈತ್ನಲ್ಲಿ ಬುಧವಾರ ನಡೆದ ಏಳು ಅಂತಸ್ತಿನ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡದಲ್ಲಿ ಭಾರತೀಯರು ಮೃತಪಟ್ಟಿದ್ದಾರೆ. ಭಾರತೀಯ ವಾಯುಪಡೆಯ ವಿಮಾನದಲ್ಲಿ ಸ್ಥಳಾಂತರಿಸಿದ 45 ಜನರ ಪಾರ್ಥಿವ ಶರೀರಗಳ ಪೈಕಿ ಕೇರಳದ 23, ತಮಿಳುನಾಡಿನ 7 ಹಾಗೂ ಕರ್ನಾಟಕದ ಓರ್ವನ ಮೃತದೇಹವನ್ನು ಕೊಚ್ಚಿಯಲ್ಲಿ ಇಳಿಸಲಾಯಿತು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮೃತರ ಶವಪೆಟ್ಟಿಗೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶ್ರದ್ಧಾಂಜಲಿ ಸಲ್ಲಿಸಿದರು.
ಕೇಂದ್ರ ಪ್ರವಾಸೋದ್ಯಮ ಮತ್ತು ಪೆಟ್ರೋಲಿಯಂ ರಾಜ್ಯ ಸಚಿವ ಸುರೇಶ್ ಗೋಪಿ, ವಿಮಾನದಲ್ಲಿ ಪಾರ್ಥಿವ ಶರೀರಗಳ ಬಂದಿದ್ದ ವಿದೇಶಾಂಗ ವ್ಯವಹಾರಗಳ ಕೇಂದ್ರ ಸಚಿವ ಕೀರ್ತಿ ವರ್ಧನ್ ಸಿಂಗ್ ಮತ್ತು ತಮಿಳುನಾಡು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಅನಿವಾಸಿ ತಮಿಳರ ಕಲ್ಯಾಣ ಸಚಿವ ಗಿಂಗಿ ಕೆ.ಎಸ್.ಮಸ್ತಾನ್ ಅಂತಿಮ ಗೌರವ ಸಲ್ಲಿಸಿದರು. ಪೊಲೀಸ್ ಸಿಬ್ಬಂದಿಯಿಂದಲೂ ಗೌರವ ವಂದನೆ ಸಲ್ಲಿಸಲಾಯಿತು.
ಕಣ್ಣೀರಿನ ವಿದಾಯ: ಕೊಚ್ಚಿಯಿಂದ ಕೇರಳದ ನಿವಾಸಿಗಳ ಮೃತದೇಹಗಳನ್ನು ತವರು ಜಿಲ್ಲೆಗಳಿಗೆ ರವಾನಿಸಲು ಆಂಬ್ಯುಲೆನ್ಸ್ಗಳನ್ನು ಸಜ್ಜುಗೊಳಿಸಲಾಗಿತ್ತು. ಪೊಲೀಸ್ ವಾಹನಗಳ ಬೆಂಗಾವಲಿನಲ್ಲಿ ಶವಗಳನ್ನು ಮನೆಯವರೆಗೆ ತಲುಪಿಸಲಾಯಿತು. ಈ ವೇಳೆ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಜೆ ವೇಳೆ ಒಟ್ಟಾರೆ 23 ಜನ ಸಂತ್ರಸ್ತರಲ್ಲಿ ಹೆಚ್ಚಿನವರಿಗೆ ಕಣ್ಣೀರಿನ ವಿದಾಯ ಹೇಳಲಾಯಿತು.
ಧಾರ್ಮಿಕ ಪದ್ಧತಿಗಳ ಪ್ರಕಾರ, ಪಾರ್ಥಿವ ಶರೀರಗಳನ್ನು ಹೂಳಲಾಯಿತು ಅಥವಾ ಸುಡುವ ಮೂಲಕ ಅಂತ್ಯಸಂಸ್ಕಾರ ನಡೆಸಲಾಯಿತು. ಕೆಲವು ಕುಟುಂಬಗಳು ತಮ್ಮ ಪ್ರೀತಿಪಾತ್ರರ ಮೃತದೇಹಗಳ ಅಂತ್ಯಕ್ರಿಯೆ ಮಾಡದೆ ಇರಿಸಿಕೊಂಡಿವೆ. ಕೊನೆಯ ಬಾರಿಗೆ ಮುಖ ನೋಡಲು ವಿದೇಶ, ಇತರ ಭಾಗಗಳಿಂದ ಹತ್ತಿರದ ಸಂಬಂಧಿಕರ ಆಗಮನಕ್ಕಾಗಿ ಆ ಕುಟುಂಬಸ್ಥರು ಕಾಯುತ್ತಿದ್ದಾರೆ.
ದೆಹಲಿಗೆ 14 ಪಾರ್ಥಿವ ಶರೀರಗಳ ರವಾನೆ: ಕೊಚ್ಚಿ ವಿಮಾನ ನಿಲ್ದಾಣದಲ್ಲಿ 31 ಶವಗಳನ್ನು ಸ್ವೀಕರಿಸಿದ ನಂತರ, ಉಳಿದ 14 ಶವಗಳನ್ನು ಅದೇ ವಿಮಾನದಲ್ಲಿ ದೆಹಲಿಗೆ ರವಾನಿಸಲಾಯಿತು. ನೂತನ ಸಂಸದರಾದ ಯೋಗೇಂದರ್ ಚಂದೋಲಿಯಾ ಮತ್ತು ಕಮಲ್ಜೀತ್ ಸೆಹ್ರಾವತ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಇದನ್ನೂ ಓದಿ: ಕುವೈತ್ ಅಗ್ನಿ ದುರಂತ: ಕೇರಳದ 24, ತಮಿಳುನಾಡಿನ 5 ಮಂದಿ ಸಾವು, ನೀರಿನ ಟ್ಯಾಂಕ್ಗೆ ಜಿಗಿದು ಬದುಕಿದ ಓರ್ವ!