ರಾಂಚಿ (ಜಾರ್ಖಂಡ್): ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿರುವುದನ್ನು ವಿರೋಧಿಸಿ ನಾಳೆ (ಮಾರ್ಚ್ 31) ದೆಹಲಿಯ ರಾಮಲೀಲಾ ಮೈದಾನದ I.N.D.I.A ಮೈತ್ರಿ ಕೂಟ ಬೃಹತ್ ಪ್ರತಿಭಟನಾ ಜಾಥಾ ನಡೆಸಲಿದೆ. ಜಾಥಾದಲ್ಲಿ ಆಮ್ ಆದ್ಮಿ ಪಕ್ಷ, ಕಾಂಗ್ರೆಸ್‌ನ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಇಂಡಿಯಾ ಮೈತ್ರಿಕೂಟದಿಂದ ಹೊರಬಂದರೂ ಆಪ್ ಪಕ್ಷ ಎಲ್ಲ ನಾಯಕರಿಗೆ ಆಹ್ವಾನ ನೀಡಿದೆ. ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ಕೂಡ ಈ ಮೆಗಾ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇದೆ. ಅವರಷ್ಟೇ ಅಲ್ಲದೇ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಕೂಡ ಭಾಗವಹಿಸಲಿದ್ದಾರೆ. ಈ ಭಾಗವಾಗಿ ಕಲ್ಪನಾ ಸೊರೆನ್ ಅವರು ಶನಿವಾರ ದೆಹಲಿಗೆ ತೆರಳಿದ್ದು, ಸುನಿತಾ ಕೇಜ್ರಿವಾಲ್ ಅವರನ್ನು ಭೇಟಿ ಸಹ ಮಾಡಿದ್ದಾರೆ.
ರಾಷ್ಟ್ರೀಯ ವೇದಿಕೆಯಲ್ಲಿ ಕಲ್ಪನಾ ಸೊರೆನ್: ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಕಲ್ಪನಾ ಸೊರೆನ್ ಮೊದಲ ಬಾರಿ ಭಾಗವಹಿಸಿದ್ದರು. ಮುಖ್ಯಮಂತ್ರಿ ಚಂಪೈ ಸೊರೆನ್ ಅವರೊಂದಿಗೆ ತೆರಳಿದ್ದ ಕಲ್ಪನಾ ಸೊರೆನ್ ಕಾರ್ಯಕ್ರಮದಲ್ಲಿ ಸುಮಾರು 06 ನಿಮಿಷಗಳ ಭಾಷಣ ಮಾಡಿದ್ದರು. ಭಾಷಣದ ಉದ್ಧಕ್ಕೂ ಬಿಜೆಪಿ, ಪ್ರಧಾನಿ ಮತ್ತು ಇಡಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಈ ಕುತಂತ್ರ ರಾಜಕಾರಣಕ್ಕೆ ಜಾರ್ಖಂಡ್ ಯಾವತ್ತೂ ತಲೆಬಾಗುವುದಿಲ್ಲ ಎಂದು ಹೇಳಿದ್ದರು. ಇದೀಗ ಮತ್ತೆ ರಾಷ್ಟ್ರೀಯ ವೇದಿಕೆಯೊಂದರಲ್ಲಿ ಕಲ್ಪನಾ ಸೊರೆನ್ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಎಲ್ಲರ ಕಣ್ಣು ಈ ವೇದಿಕೆಯ ಮೇಲೆ ನೆಟ್ಟಿದೆ.
ಒಂದೇ ದೋಣಿಯಲ್ಲಿ ಕಲ್ಪನಾ-ಸುನೀತಾ: ಕಲ್ಪನಾ ಸೋರೆನ್ ಮತ್ತು ಸುನೀತಾ ಕೇಜ್ರಿವಾಲ್ ಅವರ ನೋವು ಒಂದೇ. ಉಭಯ ನಾಯಕಿಯರು ಒಂದೇ ದೋಣಿಯಲ್ಲಿದ್ದಾರೆ ಅನ್ನೋದು ರಾಜಕೀಯ ವಿಶ್ಲೇಷಕರ ಮಾತು. ಹೇಮಂತ್ ಸೋರೆನ್ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದಾಗ, ಪತ್ನಿ ಕಲ್ಪನಾ ಸೋರೆನ್ ಹೆಚ್ಚಾಗಿ ರಾಜ್ಯ ರಾಜಕೀಯದಿಂದ ದೂರವೇ ಇದ್ದರು. ಅದೇ ರೀತಿ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸುವವರೆಗೂ ಅವರ ಪತ್ನಿ ಸುನೀತಾ ಕೇಜ್ರಿವಾಲ್ ತಮ್ಮ ಮನೆ ಮತ್ತು ಕುಟುಂಬವನ್ನು ನೋಡಿಕೊಳ್ಳುವಲ್ಲಿ ನಿರತರಾಗಿದ್ದರು. ಆದರೆ, ಹೇಮಂತ್ ಸೊರೆನ್-ಅರವಿಂದ್ ಕೇಜ್ರಿವಾಲ್ ಬಂಧನದ ಬಳಿಕ ಉಭಯ ನಾಯಕರ ಪತ್ನಿಯರು ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹೋರಾಟದ ಮೂಲಕ ಒಗ್ಗಟ್ಟು ಪ್ರದರ್ಶನಕ್ಕೆ ಮುಂದಾಗಿದ್ದಾರೆ. ವೈಯಕ್ತಿಕ ಹಿತಾಸಕ್ತಿಯ ಜೊತೆ ಜೊತೆಗೆ ಪಕ್ಷವನ್ನು ಒಗ್ಗೂಡಿಸುವ ಕಾರ್ಯದಲ್ಲಿಯೂ ತೊಡಗಿದ್ದಾರೆ. ಇತ್ತೀಚೆಗೆ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಕಲ್ಪನಾ, ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಹೋರಾಟ ನಿರಂತರ ಇರುತ್ತದೆ ಎಂದಿದ್ದರು.
ಒಂದೇ ವೇದಿಕೆಯಲ್ಲಿ ಶಕ್ತಿ ಪ್ರದರ್ಶನ: ಮಾರ್ಚ್ 31 ರಂದು ನಡೆಯಲಿರುವ ಈ ಮಹಾ ರ‍್ಯಾಲಿಯಲ್ಲಿ ತಮಿಳುನಾಡು, ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಬಿಹಾರ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳ ವಿರೋಧ ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ. ಹಾಗಾಗಿ ಎಲ್ಲರ ಕಣ್ಣು ಈ ವೇದಿಕೆ ಮೇಲೆ ನೆಟ್ಟಿದೆ. ಕಲ್ಪನಾ ಸೋರೆನ್ ಮತ್ತು ಸುನೀತಾ ಸೊರೆನ್ ಅವರ ಮುಂದಾಳತ್ವದ ಈ ಹೋರಾಟ ಸಾರ್ವಜನಿಕರಿಗೆ ಯಾವ ಸಂದೇಶವನ್ನು ನೀಡುತ್ತದೆ? ಎಂಬುವು ನಾಳೆ ಗೊತ್ತಾಗಲಿದೆ.
ಇದನ್ನೂ ಓದಿ: ಇಡಿ ಕಸ್ಟಡಿಯಿಂದಲೇ ಪತ್ರ ಬರೆದ ಕೇಜ್ರಿವಾಲ್: ಈ ಸಂದೇಶ ಜನರಿಗೆ ಮುಟ್ಟಿಸಿದ ಪತ್ನಿ ಸುನಿತಾ - Sunita kejriwal Press meet