ನವದೆಹಲಿ: ಜೂನ್ 1 ರಿಂದ ಆರಂಭವಾಗಿರುವ ಮಾನ್ಸೂನ್ ಅವಧಿಯಲ್ಲಿ ಭಾರತದಲ್ಲಿ ಶೇ 20 ರಷ್ಟು ಕಡಿಮೆ ಮಳೆಯಾಗಿದೆ. ಜೂನ್ 12 ಮತ್ತು 18 ರ ನಡುವೆ ಮಾನ್ಸೂನ್ ಮಳೆ ಬೀಳುವಿಕೆಯಲ್ಲಿ ಗಮನಾರ್ಹ ಪ್ರಗತಿ ಕಂಡು ಬಂದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಆದಾಗ್ಯೂ, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಹಾರಾಷ್ಟ್ರ, ಛತ್ತೀಸ್‌ಗಢ, ಒಡಿಶಾ, ಕರಾವಳಿ ಆಂಧ್ರಪ್ರದೇಶ, ವಾಯುವ್ಯ ಬಂಗಾಳ ಕೊಲ್ಲಿ, ಬಿಹಾರ ಮತ್ತು ಜಾರ್ಖಂಡ್‌ನ ಭಾಗಗಳಲ್ಲಿ ಮಾನ್ಸೂನ್ ಚುರುಕಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭರವಸೆ ವ್ಯಕ್ತಪಡಿಸಿದೆ. ಭಾರತವು ಜೂನ್ 1 ಮತ್ತು 18 ರ ನಡುವೆ 64.5 ಮಿಮೀ ಮಳೆಯನ್ನು ಮಾತ್ರವೇ ಪಡೆದಿದೆ, ಇದು ದೀರ್ಘಾವಧಿಯ ಸರಾಸರಿ (ಎಲ್‌ಪಿಎ) 80.6 ಮಿಮೀಗಿಂತ ಅಂದರೆ ಶೇ 20ರಷ್ಟು ಕಡಿಮೆಯಾಗಿದೆ ಎಂದು ಇಲಾಖೆ ಹೇಳಿದೆ.
ಜೂನ್ 1 ರಿಂದ ವಾಯುವ್ಯ ಭಾರತದಲ್ಲಿ 10.2 ಮಿಮೀ ಮಳೆಯಾಗಿದೆ ಇದು ಸಾಮಾನ್ಯಕ್ಕಿಂತ ಶೇ 70ರಷ್ಟು ಕಡಿಮೆಯಾಗಿದೆ. ಈ ಮಧ್ಯ ಭಾರತದಲ್ಲಿ 50.5 ಮಿಮೀ ಮಳೆ ಸುರಿದಿದ್ದು, ಸಾಮಾನ್ಯಕ್ಕಿಂತ ಶೇ 31ರಷ್ಟು ಕಡಿಮೆಯಾಗಿದೆ. ಆದರೆ, ದಕ್ಷಿಣ ಪೆನಿನ್ಸುಲಾ 106.6 ಮಿಮೀ ಮಳೆಯಾಗಿದ್ದು, ಇದು ಸಾಮಾನ್ಯಕ್ಕಿಂತ ಶೇ16ರಷ್ಟು ಹೆಚ್ಚು ಮತ್ತು ಪೂರ್ವ ಮತ್ತು ಈಶಾನ್ಯ ಭಾರತ 146.7 ಮಿಮೀ ಮಳೆ ಆಗಿದ್ದು, ಇದು ಸಾಮಾನ್ಯಕ್ಕಿಂತ 15 ಪ್ರತಿಶತ ಕಡಿಮೆ ಎಂದು ಇಲಾಖೆ ಅಂಕಿ - ಅಂಶಗಳ ಸಮೇತ ಮಾಹಿತಿ ನೀಡಿದೆ.
ನೈರುತ್ಯ ಮಾನ್ಸೂನ್ ಮೇ 19 ರಂದು ನಿಕೋಬಾರ್ ದ್ವೀಪಗಳಿಗೆ ಕಾಲಿಟ್ಟಿತ್ತು, ನಂತರ ಮೇ 26 ರ ಹೊತ್ತಿಗೆ ದಕ್ಷಿಣದ ಹೆಚ್ಚಿನ ಭಾಗಗಳನ್ನು ಆವರಿಸಿಕೊಂಡಿತ್ತು. ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳನ್ನು ರೆಮಲ್ ಚಂಡಮಾರುತದೊಂದಿಗೆ ದಾಂಗುಡಿ ಇಟ್ಟಿತ್ತು.
ಇನ್ನು ಏಕಕಾಲದಲ್ಲಿ ಕೇರಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮೇ 30 ರಂದು ಪ್ರವೇಶ ಮಾಡಿತ್ತು. ಸಾಮಾನ್ಯಕ್ಕಿಂತ ಎರಡರಿಂದ ಆರು ದಿನ ಮುಂಚಿತವಾಗಿ ಕೇರಳ ಪ್ರವೇಶಿಸಿದ್ದ ಮುಂಗಾರು ರೈತರಲ್ಲಿ ಹರ್ಷವನ್ನುಂಟು ಮಾಡಿತ್ತು. ಆದರೆ, ನಿರೀಕ್ಷೆಯಂತೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯಲು ವಿಫಲವಾಗಿದೆ. ಜೂನ್ 12 ರ ಹೊತ್ತಿಗೆ ಕೇರಳ, ಕರ್ನಾಟಕ, ಗೋವಾ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಮುಂಗಾರು ಆವರಿಸಿತ್ತು. ದಕ್ಷಿಣ ಮಹಾರಾಷ್ಟ್ರದ ಹೆಚ್ಚಿನ ಭಾಗಗಳು ಮತ್ತು ದಕ್ಷಿಣ ಛತ್ತೀಸ್‌ಗಢ ಮತ್ತು ದಕ್ಷಿಣ ಒಡಿಶಾದ ಕೆಲವು ಭಾಗಗಳು; ಮತ್ತು ಉಪ - ಹಿಮಾಲಯ ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಎಲ್ಲ ಈಶಾನ್ಯ ರಾಜ್ಯಗಳ ಹೆಚ್ಚಿನ ಭಾಗಗಳಲ್ಲಿ ಮುಂಗಾರು ಆವರಿಸಿದೆ. ಆದರೆ, ನಿರೀಕ್ಷಿತ ಪ್ರಮಾಣದ ಮಳೆ ಸುರಿಸಲು ಸಾಧ್ಯವಾಗಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 1 ಮತ್ತು 18 ರ ನಡುವೆ ದೇಶದ 11 ಹವಾಮಾನ ಉಪವಿಭಾಗಗಳಲ್ಲಿ ಸಾಮಾನ್ಯ ಮತ್ತು ಹೆಚ್ಚುವರಿ ಮಳೆಯನ್ನು ಪಡೆದಿವೆ ಎಂದು IMD ಇದೇ ವೇಳೆ ವರದಿ ಮಾಡಿದೆ. ಆದರೆ 25ಕ್ಕೂ ಹೆಚ್ಚು ದೊಡ್ಡ ವಲಯಗಳು ಹೆಚ್ಚಿನ ಪ್ರಮಾಣದ ಮಳೆಯನ್ನು ಪಡೆಯಲು ಸಾಧ್ಯವಾಗಿಲ್ಲ. ಜೂನ್‌ನಲ್ಲಿ ದೇಶದಾದ್ಯಂತ ಸರಾಸರಿ ಮಳೆಯು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ ಎಂದು ಹವಾಮಾನ ಇಲಾಖೆ ಇದೇ ವೇಳೆ ಮುನ್ಸೂಚನೆಯನ್ನು ನೀಡಿದೆ. ಇದು ಎಲ್‌ಪಿಎಯ ಶೇಕಡಾ 92 ಕ್ಕಿಂತ ಕಡಿಮೆ ಎಂದು IMD ಅಂದಾಜಿಸಿದೆ.
ದಕ್ಷಿಣ ಪ್ರಾಂತ್ಯದ ಹೆಚ್ಚಿನ ಪ್ರದೇಶಗಳಲ್ಲಿ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗಿದೆ. ಆದರೆ, ವಾಯುವ್ಯ ಮತ್ತು ಪಕ್ಕದ ಮಧ್ಯ ಭಾರತದ ಅನೇಕ ಪ್ರದೇಶಗಳಲ್ಲಿ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ನಿರೀಕ್ಷಿಸಲಾಗಿದೆ ಎಂದು ಇಲಾಖೆ ಹೇಳಿದೆ
ಈಶಾನ್ಯ ಭಾರತದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಾನ್ಸೂನ್ ಮಳೆಯನ್ನು ನಿರೀಕ್ಷಿಸಲಾಗಿದೆ, ವಾಯವ್ಯದಲ್ಲಿ ಸಾಮಾನ್ಯ ಮತ್ತು ದೇಶದ ಮಧ್ಯ ಮತ್ತು ದಕ್ಷಿಣ ಪರ್ಯಾಯದ್ವೀಪದ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ. ದೇಶದ ಬಹುತೇಕ ಮಳೆಯಾಧಾರಿತ ಕೃಷಿ ಪ್ರದೇಶಗಳನ್ನು ಒಳಗೊಂಡಿರುವ ಭಾರತದ ಕೋರ್ ಮಾನ್ಸೂನ್ ವಲಯವು ಈ ಋತುವಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಪಡೆಯುತ್ತದೆ ಎಂದು ಹವಾಮಾನ ಕಚೇರಿ ತಿಳಿಸಿದೆ.
ಜೂನ್ ಮತ್ತು ಜುಲೈ ಅನ್ನು ಕೃಷಿಗೆ ಅನುಕೂಲವಾಗುವ ಮಾನ್ಸೂನ್ ತಿಂಗಳುಗಳೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಖಾರಿಫ್ ಬೆಳೆಗೆ ಹೆಚ್ಚಿನ ಬಿತ್ತನೆಯು ಈ ಅವಧಿಯಲ್ಲಿ ನಡೆಯುತ್ತದೆ. ಎಲ್ ನಿನೋ ಪರಿಸ್ಥಿತಿಗಳು ಪ್ರಸ್ತುತ ಚಾಲ್ತಿಯಲ್ಲಿವೆ ಮತ್ತು ಲಾ ನಿನಾ ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಪ್ರಾರಂಭವಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇದನ್ನು ಓದಿ:ಕ್ರೀಡಾ ಸಂಕೀರ್ಣ ಪ್ರಧಾನಿ ದಿಢೀರ್ ಭೇಟಿ ಕಾಮಗಾರಿ ವೀಕ್ಷಣೆ: ವಾರಾಣಾಸಿಯಲ್ಲಿ ಮೋದಿ - surprise visits PM MODI