ಅಹಮದಾಬಾದ್ (ಗುಜರಾತ್): ಅಮೆರಿಕ, ಬ್ರಿಟನ್, ಕೆನಡಾದಂತಹ ದೇಶಗಳಿಂದ ಬಂದ ಪಾರ್ಸೆಲ್‌ಗಳಿದ್ದ 3.50 ಕೋಟಿ ರೂಪಾಯಿ ಮೌಲ್ಯದ ಹೈಬ್ರಿಡ್ ಗಾಂಜಾ ಮತ್ತು ಇತರ ಶಂಕಿತ ಮಾದಕವಸ್ತುಗಳನ್ನು ಗುಜರಾತ್ನಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಮಾದಕವಸ್ತುಗಳನ್ನು ಪಾರ್ಸೆಲ್ನಲ್ಲಿ ಬಂದ ಮಕ್ಕಳ ಆಟಿಕೆಗಳು ಮತ್ತು ಡೈಪರ್‌ಗಳಂತಹ ವಸ್ತುಗಳಲ್ಲಿ ಬಚ್ಚಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಯುಎಸ್‌ಎ, ಕೆನಡಾ ಮತ್ತು ಯುಕೆ ಮೂಲದ ಶಂಕಿತ ಕೊರಿಯರ್‌ಗಳಲ್ಲಿ ಅಡಗಿಸಿದ್ದ ಡ್ರಗ್‌ಗಳನ್ನು ಸಾಮಾಜಿಕ ಮಾಧ್ಯಮ, ಟೆಲಿಗ್ರಾಮ್ ಮತ್ತು ಡಾರ್ಕ್ ವೆಬ್ ಮೂಲಕ ಆರ್ಡರ್ ಮಾಡಲಾಗಿತ್ತು. ಇದಕ್ಕೆ ಬೇಕಾದ ಹಣವನ್ನು ವಿದೇಶದಲ್ಲಿರುವ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಿದ ಕ್ರಿಪ್ಟೋ ಕರೆನ್ಸಿಗಳಲ್ಲಿ ಪಾವತಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿದೇಶದಿಂದ ಬಂದ 58 ಕೊರಿಯರ್‌ಗಳ ವಶಕ್ಕೆ: ಶುಕ್ರವಾರ ಅಹಮದಾಬಾದ್ ಕ್ರೈಂ ಬ್ರಾಂಚ್ ಮತ್ತು ಕಸ್ಟಮ್ಸ್ ಇಲಾಖೆಯು ಜಂಟಿ ಶೋಧ ಕಾರ್ಯಾಚರಣೆ ನಡೆಸಿ, ಈ ಹೈಬ್ರಿಡ್ ಗಾಂಜಾ ಮತ್ತು ಕ್ರ್ಯಾಟೋಮ್‌ನಂತಹ ಮಾದಕವಸ್ತುಗಳನ್ನು ಪತ್ತೆ ಹಚ್ಚಲಾಗಿದೆ. ವಿದೇಶದಿಂದ ರವಾನಿಸಲಾದ 58 ಕೊರಿಯರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಬೇಬಿ ಡೈಪರ್‌ಗಳು, ಕಥೆ ಪುಸ್ತಕಗಳು: ಈ ಕೊರಿಯರ್‌ಗಳಲ್ಲಿ ಮಕ್ಕಳ ಆಟಿಕೆಗಳು, ಬೇಬಿ ಡೈಪರ್‌ಗಳು, ಕಥೆ ಪುಸ್ತಕಗಳು, ಚಾಕೊಲೇಟ್‌ಗಳು, ಜಾಕೆಟ್‌ಗಳು, ಸ್ಪೀಕರ್‌ಗಳು, ವಿಟಮಿನ್ ಕ್ಯಾಂಡಿ ಇತ್ಯಾದಿಗಳಲ್ಲಿ ಬಚ್ಚಿಟ್ಟಿದ್ದ 11.6 ಕೆಜಿ ಹೈಬ್ರಿಡ್ ಗಾಂಜಾ (ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 3.48 ಕೋಟಿ ರೂ.) ಮತ್ತು 60 ಬಾಟಲಿಗಳ ದ್ರವರೂಪದ ಕ್ರ್ಯಾಟೋಮ್ ಸಾರ (72,000 ರೂ. ಮೌಲ್ಯ) ಪತ್ತೆಯಾಗಿದೆ ಎಂದು ವಿವರಿಸಿದ್ದಾರೆ.
ಪೆಡ್ಲರ್‌ಗಳ ಕಾರ್ಯಾಚರಣೆ ಹೇಗೆ?: ಇದನ್ನು ಮನೆಗಳಿಗೆ ಹೇಗೆ ತಲುಪಿಸಲಾಗುತ್ತಿತ್ತು ಎಂದರೆ, ಪೆಡ್ಲರ್‌ಗಳು ಕೊರಿಯರ್‌ನಲ್ಲಿ ನೀಡಲಾದ ವಿಳಾಸವು ಬದಲಾಗಿದೆ ಎಂದು ಹೇಳಿ ಡೆಲಿವರಿ ಏಜೆಂಟ್ಗಳನ್ನು ಸಂಪರ್ಕಿಸುತ್ತಿದ್ದರು. ಬಳಿಕ ಬದಲಾದ ಹೊಸ ವಿಳಾಸಕ್ಕೆ ತಲುಪಿಸಬೇಕು ಎಂದು ತಿಳಿಸುತ್ತಿದ್ದರು. ಈ ಬಗ್ಗೆ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಇದರಲ್ಲಿ ಭಾಗಿಯಾದ ನವದೆಹಲಿ, ಬೆಂಗಳೂರು, ಮುಂಬೈ ಮತ್ತು ಅಹಮದಾಬಾದ್ ಮೂಲದ ಐವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಅಹಮದಾಬಾದ್ ಕ್ರೈಂ ಬ್ರಾಂಚ್ ನೀಡಿದ ಮೇರೆಗೆ ಸೂರತ್ ಪೊಲೀಸರು, ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕೊರಿಯರ್ ಮೂಲಕ ಕಳುಹಿಸಲಾದ 28 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಇದನ್ನೂಓದಿ: 15 ದಿನಗಳಲ್ಲಿ 61 ಗಾಂಜಾ ಪ್ರಕರಣ ದಾಖಲು, 15 ಕೆ.ಜಿ ಗಾಂಜಾ ವಶ: ಎಸ್ಪಿ ಮಿಥುನ್ ಕುಮಾರ್