ಫರಿದಾಬಾದ್ (ಹರಿಯಾಣ): ಯುವಕನೊಬ್ಬನನ್ನು ಗೋವು ಕಳ್ಳಸಾಗಣೆದಾರನೆಂದು ತಪ್ಪಾಗಿ ತಿಳಿದು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಹರಿಯಾಣದ ಫರಿದಾಬಾದ್‍ನಲ್ಲಿ ನಡೆದಿದೆ. ಆರ್ಯನ್ ದುಷ್ಕರ್ಮಿಗಳ ದಾಳಿಗೆ ಬಲಿಯಾದ ದುರ್ದೈವಿ. ಆ.23 ರಂದು ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ವರುಣ್, ಆದೇಶ್, ಸೌರಭ್, ಅನಿಲ್ ಮತ್ತು ಕೃಷ್ಣ ಎಂದು ಗುರುತಿಸಲಾಗಿದೆ. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿ ಹಲವು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಗೋವು ಕಳ್ಳಸಾಗಣೆದಾರನೆಂದು ತಪ್ಪಾಗಿ ಭಾವಿಸಿ ಆರ್ಯನ್ ಮಿಶ್ರಾ ಮೇಲೆ ಗುಂಡು ಹಾರಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇನ್ನು ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಕೂಡ ಹೊರಬಂದಿವೆ. ಇದರಲ್ಲಿ ಆರೋಪಿಗಳು ಡಸ್ಟರ್ ಕಾರನ್ನು ಹಿಂಬಾಲಿಸುತ್ತಿರುವುದು ಕಂಡು ಬಂದಿದೆ.
ನಡೆದಿದ್ದೇನು?: ಆ.23ರಂದು ರೆನಾಲ್ಟ್ ಡಸ್ಟರ್ ಮತ್ತು ಟೊಯೊಟಾ ಫಾರ್ಚುನರ್ ಕಾರುಗಳಲ್ಲಿ ಕೆಲವು ಜಾನುವಾರು ಕಳ್ಳಸಾಗಣೆದಾರರು ನಗರ ದಾಟಿ ಜಾನುವಾರುಗಳನ್ನು ಎತ್ತಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಗಳಿಗೆ ಮಾಹಿತಿ ಸಿಕ್ಕಿತ್ತು. ಆರೋಪಿಗಳು ಜಾನುವಾರು ಕಳ್ಳಸಾಗಾಣಿಕೆದಾರರನ್ನು ಹುಡುಕುತ್ತಿದ್ದಾಗ ಪಟೇಲ್ ಚೌಕ್‌ನಲ್ಲಿ ಡಸ್ಟರ್ ಕಾರನ್ನು ನೋಡಿದ್ದರು.
ಅದೇ ದಿನ ರಾತ್ರಿ ಆರ್ಯನ್ ಮಿಶ್ರಾ ಮತ್ತು ನೆರೆಮನೆಯ ಶಾಂಕಿ, ಅವನ ಸಹೋದರ ಹರ್ಷಿತ್, ತಾಯಿ ಮತ್ತು ಇನ್ನೊಬ್ಬ ಮಹಿಳೆಯೊಂದಿಗೆ ಮ್ಯಾಗಿ ತಿನ್ನಲು ಡಸ್ಟರ್ ಕಾರಿನಲ್ಲಿ ಮನೆಯಿಂದ ಹೊರಟಿದ್ದರು. ಈ ವೇಳೆ ಆರೋಪಿಗಳು ಆರ್ಯನ್ ಕಾರನ್ನು ಹಿಂಬಾಲಿಸಲು ಆರಂಭಿಸಿದ್ದರು. ಡಸ್ಟರ್ ಕಾರಿನ ಮುಂಭಾಗದ ಸೀಟಿನಲ್ಲಿ ಆರ್ಯನ್ ಕುಳಿತಿದ್ದು, ಶಾಂಕಿಯ ಸಹೋದರ ಹರ್ಷಿತ್ ಕಾರು ಚಲಾಯಿಸುತ್ತಿದ್ದ. ಹಿಂದಿನ ಸೀಟಿನಲ್ಲಿ ಶಾಂಕಿ, ಅವನ ತಾಯಿ ಮತ್ತು ಇನ್ನೊಬ್ಬ ಮಹಿಳೆ ಕುಳಿತಿದ್ದರು. ಅಷ್ಟರಲ್ಲಿ ಹಿಂದಿನಿಂದ ಬಂದ ಕಾರಿನಲ್ಲಿ ಬಂದ ಆರೋಪಿಗಳು, ಡಸ್ಟರ್ ಕಾರನ್ನು ನಿಲ್ಲಿಸುವಂತೆ ಹೇಳಿದ್ದರು.
ಈ ವೇಳೆ ಶಾಂಕಿ ತನ್ನ ಸಹೋದರ ಹರ್ಷಿತ್ಗೆ ಕಾರನ್ನು ವೇಗವಾಗಿ ಓಡಿಸಲು ಹೇಳುತ್ತಾನೆ. ಅದರ ನಂತರ ಹರ್ಷಿತ್ ಕಾರನ್ನು ವೇಗವಾಗಿ ಓಡಿಸುತ್ತಾನೆ. ಇದರಿಂದ ಆರೋಪಿಗಳು ಅವರ ಕಾರಿನ ಮೇಲೆ ಗುಂಡು ಹಾರಿಸಿದ್ದರು. ಈ ವೇಳೆ ಆರ್ಯನ್ ಮಿಶ್ರಾ ಅವರ ಕುತ್ತಿಗೆಗೆ ಗುಂಡು ತಗುಲಿತ್ತು. ಇದಾದ ನಂತರವೂ ಹರ್ಷಿತ್ ಕಾರು ಚಲಾಯಿಸುತ್ತಲೇ ಇದ್ದ. ಸುಮಾರು 20 ಕಿ.ಮೀ ದೂರದಲ್ಲಿರುವ ಗಡ್ಪುರಿ ಟೋಲ್ ಬಳಿ ಆರೋಪಿಗಳು ವಾಹನವನ್ನು ಸುತ್ತುವರೆದು ವಾಹನದಲ್ಲಿ ಕುಳಿತಿದ್ದ ಆರ್ಯನ್ ಅವರ ಎದೆಗೆ ಮತ್ತೆ ಗುಂಡು ಹಾರಿಸಿದ್ದರು. ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಆರ್ಯನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಆಯುಧ ಹಾಗೂ ಸ್ವಿಫ್ಟ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಐವರು ಆರೋಪಿಗಳು ಯಾವುದಾದರೂ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಇನ್ನಷ್ಟೇ ಗೊತ್ತಾಬೇಕಿದೆ. ಆರೋಪಿಗೂ ಮೃತನಿಗೂ ಯಾವುದೇ ರೀತಿಯ ಸಂಬಂಧ ಇರಲಿಲ್ಲ ಎಂಬುದು ಈವರೆಗಿನ ತನಿಖೆಯಿಂದ ತಿಳಿದು ಬಂದಿದೆ.
ಇದನ್ನೂ ಓದಿ: ಛತ್ತೀಸ್ಗಢದಲ್ಲಿ 9 ನಕ್ಸಲೀಯರು ಹತ, ಐವರು ಶರಣಾಗತಿ; ಭಾರೀ ಶಸ್ತ್ರಾಸ್ತ್ರಗಳು ಪೊಲೀಸರ ವಶ - Naxals killed in Chhattisgarh