ನುಹ್ (ಹರಿಯಾಣ): ಹರಿಯಾಣದ ನುಹ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆವೊಂದು ನಡೆದಿದೆ. ಕುಂಡ್ಲಿ- ಮಾನೇಸರ್- ಪಲ್ವಾಲ್ ಎಕ್ಸ್‌ಪ್ರೆಸ್‌ವೇಯಲ್ಲಿ ತಡರಾತ್ರಿ ಭಕ್ತರು ಪ್ರಯಾಣಿಸುತ್ತಿದ್ದ ಬಸ್‌ಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ಕೆಲವೇ ಹೊತ್ತಿನಲ್ಲಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಅವಘಡದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಂಟು ಮಂದಿ ಸಜೀವ ದಹನವಾಗಿದ್ದಾರೆ. 24ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ಚಲಿಸುತ್ತಿದ್ದ ಬಸ್‌ಗೆ ಬೆಂಕಿ: ಅಪಘಾತದಲ್ಲಿ ಮೃತಪಟ್ಟವರು ಚಂಡೀಗಢ ಮತ್ತು ಪಂಜಾಬ್ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಇವರೆಲ್ಲರೂ ಮಥುರಾ ಮತ್ತು ವೃಂದಾವನಕ್ಕೆ ಭೇಟಿ ನೀಡಿ ಹಿಂದಿರುಗುತ್ತಿದ್ದವರು. ಬಸ್ಸಿನಲ್ಲಿ ಸುಮಾರು 60 ಜನ ಪ್ರಯಾಣಿಕರು ಇದ್ದರು. ಅವರಲ್ಲಿ ಮಕ್ಕಳು ಮತ್ತು ಮಹಿಳೆಯರೂ ಸೇರಿದ್ದರು. ನುಹ್ ಜಿಲ್ಲೆಯ ತವಾಡು ಪಟ್ಟಣದ ಸಮೀಪವಿರುವ ಕುಂಡ್ಲಿ- ಮಾನೇಸರ್- ಪಲ್ವಾಲ್ ಎಕ್ಸ್‌ಪ್ರೆಸ್‌ವೇನಲ್ಲಿ ಬಸ್ ಚಲಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಅಪಘಾತದಲ್ಲಿ ಎಂಟು ಮಂದಿ ಸಜೀವ ದಹನವಾಗಿದ್ದಾರೆ.
ಡ್ರೈವರ್ ಗಮನಕ್ಕೂ ಬಂದಿಲ್ಲ: ಬಸ್ನಲ್ಲಿದ್ದ ಪ್ರಯಾಣಿಕರಾದ ಸರೋಜ ಎಂಬುವರು ಮಾತನಾಡಿ, ''ಟೂರಿಸ್ಟ್ ಬಸ್ ಬಾಡಿಗೆ ಪಡೆದಿದ್ದೆವು. ಬನಾರಸ್, ಮಥುರಾ, ವೃಂದಾವನ ದರ್ಶನ ಪಡೆದು ವಾಪಸ್ ಮರಳುತಿದ್ದೆವು. ಈ ಬಸ್‌ನಲ್ಲಿ ಒಟ್ಟು 60 ಮಂದಿ ಇದ್ದೆವು. ಇವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಇದ್ದಾರೆ. ನಾವೆಲ್ಲರೂ ಹತ್ತಿರದ ಸಂಬಂಧಿಗಳು. ಪಂಜಾಬ್‌ನ ಲೂಧಿಯಾನ, ಹೋಶಿಯಾಪುರ ಮತ್ತು ಚಂಡೀಗಢ ನಿವಾಸಿಗಳು. ದರ್ಶನ ಮುಗಿಸಿ ಹಿಂತಿರುಗುತ್ತಿದ್ದಾಗ, ತಡರಾತ್ರಿ ಬಸ್ಸಿನ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಇದು ಚಾಲಕನಿಗೆ ಗಮನಕ್ಕೆ ಬರಲಿಲ್ಲ'' ಎಂದು ತಿಳಿಸಿದರು.
ಸ್ಥಳೀಯರಿಂದ ರಕ್ಷಣಾ ಕಾರ್ಯ: ತಡರಾತ್ರಿ 1.30ರ ಸುಮಾರಿಗೆ ಚಲಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಸ್ಥಳೀಯರು ನೋಡಿದ್ದಾರೆ. ಬಸ್ಸಿನ ಹಿಂಬದಿಯಿಂದ ಭಾರಿ ಪ್ರಮಾಣದ ಬೆಂಕಿ ಹಬ್ಬುತ್ತಿತ್ತು. ಗ್ರಾಮಸ್ಥರು ಕೂಗಿ ಕೂಗಿ ಬಸ್ ಚಾಲಕನಿಗೆ ಬಸ್ ನಿಲ್ಲಿಸುವಂತೆ ಮನವಿ ಮಾಡಿದರು. ಆದ್ರೆ ಬಸ್ ಚಾಲಕ ಇತ್ತ ಗಮನ ಹರಿಸಿಲ್ಲ. ಇದಾದ ಬಳಿಕ ಯುವಕನೊಬ್ಬ ಬೈಕ್ನಲ್ಲಿ ಬಸ್ನ್ನು ಹಿಂಬಾಲಿಸಿಕೊಂಡು ಬಂದು ಬಸ್ನ ಮುಂದೆ ಬೈಕ್ ಇಟ್ಟು ಬಸ್ ನಿಲ್ಲಿಸಿದ್ದಾನೆ. ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸಪಟ್ಟು ಬಸ್‌ನಲ್ಲಿ ಸಿಲುಕಿದ್ದ ಕೆಲವರನ್ನು ರಕ್ಷಿಸಿದ್ದಾರೆ. ಅಷ್ಟರಲ್ಲಿ ಗ್ರಾಮಸ್ಥರು ಪೊಲೀಸ್ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ವಾಹನಗಳ ಸಮೇತ ಸ್ಥಳಕ್ಕೆ ಆಗಮಿಸಿದರು. ಅಗ್ನಿಶಾಮಕ ವಾಹನಗಳಿಂದ ಬೆಂಕಿಯನ್ನು ಹತೋಟಿಗೆ ತರಲಾಯಿತು. ಆದರೆ, ಅದಾಗಲೇ ತುಂಬಾ ತಡವಾಗಿತ್ತು. ಆಂಬ್ಯುಲೆನ್ಸ್ ಮತ್ತು ಇತರ ವಾಹನಗಳ ಸಹಾಯದಿಂದ ಬೆಂಕಿಯಿಂದ ಗಾಯಗೊಂಡ ಜನರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು.
ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಬಿಜರಾನಿಯಾ ಅವರು, ತಮ್ಮ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದರು. ''ಅಪಘಾತದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. 24ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಎಲ್ಲರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮೃತರ ಗುರುತು ಪತ್ತೆಯಾಗಿಲ್ಲ'' ಎಂದು ಎಸ್ಪಿ ನರೇಂದ್ರ ಬಿಜರಾನಿಯಾ ತಿಳಿಸಿದ್ದಾರೆ.
ಇದನ್ನೂ ಓದಿ: ಎಸ್ಐ ಮನೆ ಮೇಲೆ ಎಸಿಬಿ ದಾಳಿ:1 ಕೋಟಿ 8 ಲಕ್ಷ ನಗದು, ಕೆಜಿ ಚಿನ್ನ, ನಿವೇಶನ ದಾಖಲೆ ಜಪ್ತಿ - Anti Corruption Bureau raided