ನವದೆಹಲಿ/ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ತಂಡ ಸೋಮವಾರ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿತ್ತು. ಸೋಮವಾರ ಸಂಜೆಯಿಂದ ಅಲ್ಲಿಯೇ ಮೊಕ್ಕಾಂ ಹೂಡಿದ್ದ ತಂಡ, ಸಾಕಷ್ಟು ಶೋಧ ನಡೆಸಿದೆ. ಕೆಲವು ಬೆಲೆಬಾಳುವ ದಾಖಲೆಗಳು ಹಾಗೂ ಬಿಎಂಡಬ್ಲ್ಯೂ ಕಾರನ್ನು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು, ಸೊರೇನ್ಗಾಗಿ ಹುಡುಕಾಡುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಸೊರೇನ್ ಅವರಿಗೆ ಹಲವು ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ, ಹಾಜರಾಗದ ಹಿನ್ನೆಲೆಯಲ್ಲಿ ಇಡಿ ತಂಡ, ಅಧಿಕೃತ ನಿವಾಸಕ್ಕೆ ಭೇಟಿ ನೀಡಿದೆ. ಆದರೆ, ಸೊರೇನ್ ಸದ್ಯಕ್ಕೆ ತಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಇಡಿ ಮೂಲಗಳು ಹೇಳಿವೆ.
ಜನವರಿ 20ರಂದು ರಾಂಚಿಯಲ್ಲಿರುವ ಅಧಿಕೃತ ನಿವಾಸದಲ್ಲಿ ಸೊರೇನ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಸಂಪೂರ್ಣ ಮಾಹಿತಿ ಕಲೆ ಹಾಕುವ ಸಲುವಾಗಿ ಜನವರಿ 29 ಅಥವಾ ಜನವರಿ 31ರ ಸಮಯದಲ್ಲಿ ಮತ್ತೆ ವಿಚಾರಣೆಗೆ ಸಹಕರಿಸುವಂತೆ ಅವರಿಗೆ ಮನವಿ ಮಾಡಿತ್ತು. ಆದರೆ, ಇದಕ್ಕೆ ಸೊರೇನ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಮತ್ತೊಂದು ಸಮನ್ಸ್ ಜಾರಿ ಮಾಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿಪಕ್ಷ ಬಿಜೆಪಿ ಸಿಎಂ ನಡೆಯನ್ನು ಅನುಮಾನಿಸಿದೆ. ಇಡಿ ಕ್ರಮಕ್ಕೆ ಹೆದರಿ ಮುಖ್ಯಮಂತ್ರಿ ಕಳೆದ 18 ಗಂಟೆಗಳಿಂದ ತಲೆಮರೆಸಿಕೊಂಡಿದ್ದಾರೆ ಎಂದು ಬಿಜೆಪಿಯ ಜಾರ್ಖಂಡ್ ಘಟಕ ಟೀಕಿಸಿದೆ. ಜಾರ್ಖಂಡ್‌ನ ವಿಶ್ವಾಸಾರ್ಹತೆ ಮತ್ತು ಖ್ಯಾತಿಯು ಅಪಾಯದಲ್ಲಿದೆ ಎಂದಿರುವ ಬಿಜೆಪಿ, ಈ ವಿಷಯದ ಬಗ್ಗೆ ಗಮನಹರಿಸುವಂತೆ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರಲ್ಲಿ ಕೇಳಿಕೊಂಡಿದೆ. ಈ ಹೇಳಿಕೆಯನ್ನು ತಳ್ಳಿಹಾಕಿರುವ ಅವರ ಕುಟುಂಬಸ್ಥರು ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಸೊರೇನ್ ಅವರು ವೈಯಕ್ತಿಕ ಕೆಲಸಕ್ಕಾಗಿ ಜನವರಿ 27ರಂದು ದೆಹಲಿಗೆ ತೆರಳಿದ್ದು ಹಿಂತಿರುಗಲಿದ್ದಾರೆ. ಕೇಂದ್ರ ಸರ್ಕಾರ ಅಧಿಕಾರ ದುರಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಮತ್ತೊಂದೆಡೆ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆದಿರುವ ಸೊರೇನ್, ಜನವರಿ 31ರಂದು ಮಧ್ಯಾಹ್ನ 1 ಗಂಟೆಗೆ ಮುಖ್ಯಮಂತ್ರಿ ಭವನಕ್ಕೆ ಭೇಟಿ ನೀಡಿ ವಿಚಾರಣೆ ನಡೆಸುವಂತೆ ಕೋರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಭಾನುವಾರ ಕಳುಹಿಸಿದ ಈ ಪತ್ರದಲ್ಲಿ, ರಾಜ್ಯ ಸರ್ಕಾರದ ಕಾರ್ಯ ಚಟುವಟಿಕೆಗೆ ಅಡ್ಡಿಪಡಿಸುವ ರಾಜಕೀಯ ಅಜೆಂಡಾ. ಜನವರಿ 31 ಅಥವಾ ಅದಕ್ಕಿಂತ ಮೊದಲು ತಮ್ಮ ಹೇಳಿಕೆಯನ್ನು ಮರು-ರೆಕಾರ್ಡ್ ಮಾಡಲು ಇಡಿ ಒತ್ತಾಯಿಸಿರುವುದು ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ.
ಮತ್ತೊಂದೆಡೆ, ಮುನ್ನೆಚ್ಚರಿಕಾ ಕ್ರಮವಾಗಿ ರಾಜಧಾನಿ ರಾಂಚಿಯಲ್ಲಿ ಸೋಮವಾರ ಮುಖ್ಯಮಂತ್ರಿ ನಿವಾಸ, ರಾಜಭವನ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ. ಇಡಿ ಸೋರೆನ್‌ಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ನೂರಾರು ಜಾರ್ಖಂಡ್ ಮುಕ್ತಿ ಮೋರ್ಚಾ ಕಾರ್ಯಕರ್ತರು ಸೋಮವಾರ ರಾಂಚಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಜಮ್ಶೆಡ್‌ಪುರ ಮತ್ತು ರಾಜ್ಯದ ಇತರ ಭಾಗಗಳಲ್ಲಿಯೂ ಪ್ರತಿಭಟನೆಗಳು ನಡೆದವು.
ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ: ಬಂಗಾಳ ಬಿಜೆಪಿ ಅಧ್ಯಕ್ಷ