ಹೈದರಾಬಾದ್: ತೆಲಂಗಾಣದ ದೇವಸ್ಥಾನ ಸಮಿತಿಗಳಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಮಾಧ್ಯಮ ಸಂಯೋಜಕರನ್ನು ನೇಮಿಸುವ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್, ಭಾನುವಾರ ತೆಲಂಗಾಣದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಂಡಿ ಸಂಜಯ್ ಕುಮಾರ್, ದೇವಾಲಯಗಳು ರಾಜಕೀಯ ಪುನರ್ವಸತಿ ಕೇಂದ್ರಗಳಲ್ಲ ಎಂದು ಹೇಳಿದ್ದು, ಮಸೀದಿ ಮತ್ತು ಚರ್ಚುಗಳ ವಿಷಯದಲ್ಲಿ ಕೂಡ ಸರ್ಕಾರ ಇದೇ ಧೈರ್ಯವನ್ನು ಪ್ರದರ್ಶಿಸಲಿದೆಯೇ ಎಂದು ಸವಾಲು ಹಾಕಿದ್ದಾರೆ.
Temples are places of faith, not political rehabilitation Centres.
— Bandi Sanjay Kumar (@bandisanjay_bjp) November 3, 2024
Appointing ‘social media coordinators’ to supposedly push secular narratives in Hindu temple committees is wrong & diluting their spiritual purpose.
Does the Congress have guts to make such request for…
"ದೇವಾಲಯಗಳು ನಂಬಿಕೆಯ ಸ್ಥಳಗಳಾಗಿವೆಯೇ ಹೊರತು ರಾಜಕೀಯ ಪುನರ್ವಸತಿ ಕೇಂದ್ರಗಳಲ್ಲ. ಹಿಂದೂ ದೇವಾಲಯ ಸಮಿತಿಗಳಲ್ಲಿ ಜಾತ್ಯತೀತತೆಯ ನಿರೂಪಣೆಗಳನ್ನು ರೂಪಿಸಲು 'ಸಾಮಾಜಿಕ ಮಾಧ್ಯಮ ಸಂಯೋಜಕರನ್ನು' ನೇಮಿಸುವುದು ತಪ್ಪು ಮತ್ತು ಇದು ಹಿಂದೂಗಳ ಆಧ್ಯಾತ್ಮಿಕ ನಂಬಿಕೆಗೆ ಧಕ್ಕೆ ತರುತ್ತದೆ" ಎಂದು ಬಂಡಿ ಸಂಜಯ್ ಬರೆದಿದ್ದಾರೆ.
"ಮಸೀದಿ ಮತ್ತು ಚರ್ಚ್ಗಳ ವಿಷಯದಲ್ಲಿ ಕೂಡ ಇದೇ ರೀತಿಯ ನೇಮಕಗಳನ್ನು ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವ ಧೈರ್ಯ ಕಾಂಗ್ರೆಸ್ ಪಕ್ಷಕ್ಕಿದೆಯೇ? ಅಥವಾ ಇದು ಕೇವಲ ಹಿಂದೂ ದೇವಾಲಯಗಳಿಗೆ ಮಾತ್ರವೇ?" ಎಂದು ಅವರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಮೊದಲು ದೇವಾಲಯಗಳನ್ನು ರಕ್ಷಿಸಬೇಕು ಮತ್ತು ಅವುಗಳ ನಿಜವಾದ ಸಾರವನ್ನು ಕಾಪಾಡಬೇಕು ಎಂದು ಅವರು ಹೇಳಿದರು.
ಬಿಆರ್ಎಸ್ ಕೂಡ ವಿರೋಧ: ತೆಲಂಗಾಣದಾದ್ಯಂತದ ದೇವಾಲಯ ಸಮಿತಿಗಳಲ್ಲಿ ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮ ಸಂಯೋಜಕರನ್ನು ಸೇರಿಸುವ ಪ್ರಸ್ತಾಪವನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್ ಎಸ್) ಭಾನುವಾರ ವಿರೋಧಿಸಿದೆ.
ಇದು ದೇವಾಲಯಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಉದ್ಯೋಗ ಕೊಡಿಸುವ ಗುರಿಯನ್ನು ಮಾತ್ರ ಹೊಂದಿದೆ ಮತ್ತು ಇದರಿಂದ ದೇವಾಲಯಗಳ ಮೇಲೆ ಆರ್ಥಿಕ ಹೊರೆ ಉಂಟಾಗಲಿದೆ ಎಂದು ಬಿಆರ್ಎಸ್ ಮುಖಂಡ ಕೃಷ್ಣಂಕ್ ಮನ್ನೆ ಹೇಳಿದರು. ಈಗ ಕೆಲಸ ಮಾಡುತ್ತಿರುವ ದತ್ತಿ ಅಧಿಕಾರಿಗಳು ಯಾವುದೇ ಆಧ್ಯಾತ್ಮಿಕ ಅಥವಾ ಪ್ರಚಾರ ಅಭಿಯಾನಗಳನ್ನು ನಿರ್ವಹಿಸಲು ಶಕ್ತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಮನ್ನೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಬಂದಿದೆ ಶಿಫಾರಸು: ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಅಧ್ಯಕ್ಷ ಬಿ.ಮಹೇಶ್ ಕುಮಾರ್ ಗೌಡ್ ಅವರು ತೆಲಂಗಾಣ ಪರಿಸರ, ಅರಣ್ಯ ಮತ್ತು ದತ್ತಿ ಸಚಿವ ಕೊಂಡಾ ಸುರೇಖಾ ಅವರಿಗೆ ಬರೆದ ಪತ್ರದಲ್ಲಿ ರಾಜ್ಯದಾದ್ಯಂತ ದೇವಾಲಯ ಸಮಿತಿಗಳಲ್ಲಿ ಸಾಮಾಜಿಕ ಮಾಧ್ಯಮ ಸಂಯೋಜಕರಿಗೆ ಅವಕಾಶ ನೀಡುವಂತೆ ಶಿಫಾರಸು ಮಾಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರ ನೇಮಕದಿಂದ ದೇವಾಲಯಗಳನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಸನಾತನ ಧರ್ಮ ರಕ್ಷಣೆಗೆ ಜನಸೇನಾ ಪಕ್ಷದಲ್ಲಿ 'ನರಸಿಂಹ ವರಾಹಿ ಬ್ರಿಗೇಡ್' ರಚನೆ: ಪವನ್ ಕಲ್ಯಾಣ್ ಘೋಷಣೆ