ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟ್ ಪಟು ಯುವರಾಜ್ ಸಿಂಗ್ ಅವರಿಗೆ ಸಂಬಂಧಿಸಿದ ಪಂಚಕುಲದ ಮನೆಯಲ್ಲಿ ಯಾರೋ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಯಾರೋ ಖದೀಮರು ಮನೆಯ ಲಾಕರ್ನಲ್ಲಿ ಇಟ್ಟಿದ್ದ ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಯುವರಾಜ್ ಸಿಂಗ್ ಅವರ ತಾಯಿ ಶಬನಮ್ ಸಿಂಗ್ ವಾಸುತ್ತಿದ್ದ ನಿವಾಸ ಇದಾಗಿದ್ದು, ಭದ್ರತಾ ಲೋಪದ ಬಗ್ಗೆ ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ.
ಬೀಗ ಹಾಕಿದ್ದ ಕಬೋರ್ಡ್‌ನಿಂದ 75 ಸಾವಿರ ರೂ. ನಗದು ಹಾಗೂ ಚಿನ್ನಾಭರಣ ಕಳ್ಳತನ ಆಗಿರುವುದಾಗಿ ಶಬನಮ್ ಸಿಂಗ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮನೆಯಲ್ಲಿ ಕೆಲಸ ಮಾಡುವ ವೃದ್ಧನೊಬ್ಬನ ಕೈವಾಡ ಇರುವ ಬಗ್ಗೆ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದೊಂದು ಭದ್ರತಾ ಲೋಪದ ಪ್ರಶ್ನೆಯಾಗಿದ್ದು, ಕೂಲಂಕಷ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇನ್ನು ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
ಎಂಡಿಸಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಧರಂಪಾಲ್ ಸಿಂಗ್ ಅವರು ಈ ಹೈಪ್ರೊಫೈಲ್ ಕಳ್ಳತನ ಪ್ರಕರಣವನ್ನು ಖುದ್ದಾಗಿ ಪರಿಶೀಲಿಸುತ್ತಿದ್ದಾರೆ. ಶಬನಮ್ ಸಿಂಗ್ ಅವರು ಗುರ್ಗಾಂವ್‌ನಲ್ಲಿರುವ ತಮ್ಮ ಇನ್ನೊಂದು ನಿವಾಸದಲ್ಲಿ ಸ್ವಲ್ಪ ದಿನ ವಾಸಿಸಲು ತೆರಳಿದ್ದ ವೇಳೆ ಈ ಕಳ್ಳತನ ನಡೆದಿದೆ ಎನ್ನಲಾಗುತ್ತಿದೆ.
ಗುರ್ಗಾಂವ್ ನಿವಾಸದಿಂದ ಪಂಚಕುಲದಲ್ಲಿರುವ ಮನೆಗೆ ವಾಪಸ್ ಆದ ಬಳಿಕ ಕಳ್ಳತನವಾಗಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯ ಮೇಲಿನ ಮಹಡಿಯಲ್ಲಿರುವ ಕೋಣೆಯಲ್ಲಿ ಚಿನ್ನಾಭರಣಗಳು ಮತ್ತು ಹಣ ನಾಪತ್ತೆ ಅಗಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣ ಮನೆಯಲ್ಲಿದ್ದ ಎಲ್ಲಾ ಕೆಲಸದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಯಾರು ಎಂಬುದು ಪತ್ತೆಯಾಗಿಲ್ಲ. ಬೇರೆ ದಾರಿ ಕಾಣದೇ ಶಬನಮ್ ಸಿಂಗ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣದ ಬಳಿಕ ಮನೆ ಕೆಲಸದವರು ಕೂಡ ನಾಪತ್ತೆ ಆಗದ್ದಾರೆ. ಈ ಎಲ್ಲ ಅನುಮಾನಗಳ ಹಿನ್ನೆಲೆ ಇಬ್ಬರು ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಅವರಿಗಾಗಿ ಶೋಧ ನಡೆಸಿದ್ದಾರೆ.
ಟೀಂ ಇಂಡಿಯಾ ಎರಡು ವಿಶ್ವಕಪ್(ಟಿ20 ಮತ್ತು ಏಕದಿನ) ಗೆಲ್ಲುವಲ್ಲಿ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಅವರು, ಇತ್ತೀಚೆಗೆ ಸಾಮಾಜಿಕ ಉದ್ದೇಶದಿಂದ ಕರ್ನಾಟಕದ ಚಿಕ್ಕಬಳ್ಳಾಪುರದ ಸತ್ಯಸಾಯಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಕಪ್ ಟ್ವಿ-20 ಪಂದ್ಯದಲ್ಲಿ ಭಾಗಿ ಆಗಿದ್ದರು. 2000 ರಿಂದ 2019 ರವರೆಗೆ ಯುವರಾಜ್ ಸಿಂಗ್ ಎಲ್ಲ ಮೂರು ಸ್ವರೂಪಗಳಲ್ಲಿ ಕ್ರಿಕೆಟ್ ಆಡಿದ್ದಾರೆ.
ಇದನ್ನೂ ಓದಿ: 50 ಸಾವಿರಕ್ಕಿಂತ ಹೆಚ್ಚು ದಂಡವಿರುವ 80 ಬೈಕ್ ಸೀಜ್: 10 ಸಾವಿರಕ್ಕಿಂತ ಹೆಚ್ಚು ಪ್ರಕರಣಗಳು ಪೆಂಡಿಂಗ್